ಹೊಸದಿಲ್ಲಿ : ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ನಿನ್ನೆ ಬುಧವಾರ ಇಲ್ಲಿ ಏರ್ಪಡಿಸಿದ್ದ ಇಫ್ತಾರ್ ಕೂಟ ಭಾರೀ ಸುದ್ದಿ ಮಾಡಿದೆ; ಸುದ್ದಿ ಮಾಡಿರುವುದು ಇಫ್ತಾರ್ ಕೂಟದಲ್ಲಿ ಯಾವೆಲ್ಲ ಗಣ್ಯಾತಿಗಣ್ಯರು ಭಾಗವಹಿಸಿದರು ಎಂಬ ಕಾರಣಕ್ಕಲ್ಲ; ಬದಲು ತನ್ನ ಮುಸ್ಲಿಂ ಬೆಂಬಲಿಗನೋರ್ವ ತನ್ನ ತಲೆಗೆ ತೊಡಿಸಿದ ಬಿಳಿ ಬಣ್ಣದ ಕ್ಯಾಪ್ ನಲ್ಲಿ ಫೋಟೋ ತೆಗೆಸಿಕೊಂಡ ಕೇವಲ 10 ಸೆಕೆಂಡ್‌ಗಳಲ್ಲಿ ಅದನ್ನು ತೆಗೆದ ಕಾರಣಕ್ಕೆ !
ಅಂತೆಯೇ ಬಿಜೆಪಿ ರಾಹುಲ್ ಗಾಂಧಿ ಅವರನ್ನು ಟೀಕಿಸಿದ್ದು ಇದು ಕೇವಲ ಫೊಟೋ ಪ್ರಚಾರದ ಗಿಮಿಕ್ ಎಂದು ಟೀಕಿಸಿದೆ.
ಮುಸ್ಲಿಂ ಬೆಂಬಲಿಗನೋರ್ವ ಒತ್ತಾಯದಿಂದ ರಾಹುಲ್ ತಲೆಗೆ ಬಿಳಿ ಕ್ಯಾಪ್ ತೊಡಿಸುವುದು; ಕ್ಯಾಪ್ ತೊಟ್ಟಕೊಂಡ ಕೇವಲ 10 ಸೆಕೆಂಡ್‌ಗಳಲ್ಲಿ ರಾಹುಲ್ ಅದನ್ನು ತೆಗೆದಿರಿಸುವುದು – ಎಲ್ಲವೂ ವಿಡಿಯೋದಲ್ಲಿ ಚಿತ್ರಿತವಾಗಿದ್ದು ಅದೀಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಮುಸ್ಲಿಂ ಧಾರ್ಮಿಕ ಅಸ್ಮಿತೆಯಾಗಿರುವ ಬಿಳಿ ಕ್ಯಾಪನ್ನು ಧರಿಸಿಕೊಂಡ ಕೆಲವೇ ಸೆಕೆಂಡುಗಳಲ್ಲಿ ರಾಹುಲ್ ಅದನ್ನು ತೆಗೆದಿರುವುದು ಮುಸ್ಲಿಂ ಅಭಿಮಾನಿಗಳಿಗೆ ತೀವ್ರ ಮುಜುಗರ ಉಂಟುಮಾಡಿದೆ ಎಂದು ಹೇಳಲಾಗಿದೆ.
ರಾಹುಲ್ ಗಾಂಧಿ ಅವರ ಇಫ್ತಾರ್ ಪಾರ್ಟಿ ಕೇವಲ ಒಂದು ನಾಟಕ; ಮುಸ್ಲಿಮರನ್ನು ಸಂಪ್ರೀತಗೊಳಿಸುವ ತಂತ್ರ; ಕೇವಲ ಒಂದು ರಾಜಕೀಯ ಸ್ಟಂಟ್ ಎಂದು ಬಿಜೆಪಿ ಕಟಕಿಯಾಡಿದೆ.
ಅಂದ ಹಾಗೆ ರಾಹುಲ್ ಗಾಂಧಿ ಅವರು ಕಳೆದ ವರ್ಷ ಕಾಂಗ್ರೆಸ್ ಅಧ್ಯಕ್ಷರಾದ ಬಳಿಕದಲ್ಲಿ ಏರ್ಪಡಿಸಲಾಗಿರುವ ಮೊದಲ ಇಫ್ತಾರ್ ಕೂಟ ಇದಾಗಿದೆ.
ರಾಹುಲ್ ಗಾಂಧಿ ಅವರ ಇಫ್ತಾರ್ ಕೂಟದಲ್ಲಿ ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಸಹಿತ ಹಲವು ಕಾಂಗ್ರೆಸ್ ನಾಯಕರು ಭಾಗವಹಿಸಿದ್ದರು.