ಅಹ್ಮದಾಬಾದ್ : “ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತೆಯಲ್ಲಿ ಮಾಧ್ಯಮವನ್ನು ದಮನಿಸಲಾಗುತ್ತಿದೆ; ಪರಿಣಾಮವಾಗಿ ಮಾಧ್ಯಮಗಳು ಈ ತುಂಬ ದುರ್ಬಲವಾಗಿವೆ’ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ಗುಜರಾತ್ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿ ಇರುವಂತೆಯೇ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ರಾಜ್ಯದಲ್ಲಿ ಚುನಾವಣಾ ಅಭಿಯಾನಕ್ಕೆ ಇಳಿದಿದ್ದಾರೆ. ಅಂತೆಯೇ ಅವರು ರಾಜ್ಯದ 180 ವಿಧಾನಸಭಾ ಕ್ಷೇತ್ರಗಳ ಪಕ್ಷದ ಕಾರ್ಯಕರ್ತರೊಂದಿಗೆ ಸಂವಾದವನ್ನು ಆರಂಭಿಸಿದ್ದಾರೆ.
ಇಲ್ಲಿ ಪಕ್ಷ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ರಾಜ್ಯದಲ್ಲಿನ ರೈತರ ಸ್ಥಿತಿ ದಯನೀಯವಾಗಿದ್ದು ಭ್ರಷ್ಟಾಚಾರ ಮತ್ತು ನಿರುದ್ಯೋಗ ಹೆಚ್ಚುತ್ತಿದೆ ಎಂದು ಹೇಳಿದರು.
“ಗುಜರಾತ್ ಇಡಿಯ ದೇಶಕ್ಕೇ ಮಾರ್ಗದರ್ಶಿಯಾಗಬಲ್ಲುದು. ಗುಜರಾತ್‌ನ ಶಕ್ತಿ ಸಣ್ಣ ಉದ್ಯಮದಲ್ಲಿ ಅಡಗಿದೆ. ಆದರೆ ರಾಜ್ಯದ ಉದ್ಯಮಶೀಲರಿಗೆ ಸರಕಾರದಿಂದ ಯಾವುದೇ ನೆರವು ಸಿಗುತ್ತಿಲ್ಲ’ ಎಂದು ರಾಹುಲ್ ಅಹ್ಮದಾಬಾದಿನಲ್ಲಿ ಪಕ್ಷ ಕಾರ್ಯಕರ್ತರನ್ನು ಉದ್ದೇಶಿಸಿ ಹೇಳಿದರು.
“ಗುಜರಾತ್‌ನ ಪ್ರತಿಯೋರ್ವ ಬುಡಕಟ್ಟು ಪ್ರಜೆಗೆ ನಾನು ಹೇಳಬಯಸುವುದೇನೆಂದರೆ ನಿಮಗೆ ನಿಮ್ಮ ಭೂಮಿ ಮತ್ತು ಹಕ್ಕುಗಳಿಗೆ ಸಂಬಂಧಿಸಿದ ಎಲ್ಲ ಭರವಸೆಗಳನ್ನು ನಾವು ಈಡೇರಿಸುತ್ತೇವೆ’ ಎಂದು ರಾಹುಲ್ ಹೇಳಿದರು.
ಬಿಜೆಪಿ ಮತ್ತು ಆರ್‌ಎಸ್‌ಎಸ್ ವಿರುದ್ಧ ಹೋರಾಡುವ ಯಾರಿಗೇ ಆದರೂ ನಾವು ಚುನಾವಣಾ ಟಿಕೆಟ್ ಕೊಡುತ್ತೇವೆ ಎಂದು ರಾಹುಲ್ ಹೇಳಿದರು.