ನವದೆಹಲಿ: ದೇಶದಲ್ಲಿನ ಕಲ್ಲಿದ್ದಲು ಮತ್ತು ವಿದ್ಯುತ್ ಕೊರತೆ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಸಭೆ ನಡೆಸಿದ ನಂತರ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಬುಧವಾರ (ಏಪ್ರಿಲ್ 20) ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟೀಕಿಸಿದ್ದು, ದೇಶದಲ್ಲಿ ಕೇವಲ 8 ದಿನಗಳಿಗಾಗುವಷ್ಟು ಕಲ್ಲಿದ್ದಲು ದಾಸ್ತಾನು ಇದ್ದಿರುವುದಾಗಿ ತಿಳಿಸಿದ್ದಾರೆ.
“ಕಳೆದ ಎಂಟು ವರ್ಷಗಳಿಂದ ದೊಡ್ಡ, ದೊಡ್ಡ ಮಾತುಗಳನ್ನಾಡಿರುವ ಪರಿಣಾಮ ಇದೀಗ ಭಾರತದಲ್ಲಿ ಕೇವಲ 8 ದಿನಗಳಿಗಾಗುವಷ್ಟು ಮಾತ್ರ ಕಲ್ಲಿದ್ದಲು ದಾಸ್ತಾನು” ಇದ್ದಿರುವುದಾಗಿ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿರುವುದಾಗಿ ವರದಿ ಹೇಳಿದೆ.
ಕೇಂದ್ರ ಸರ್ಕಾರ ಪ್ರತಿಕಾರದ ಬುಲ್ಡೋಜರ್ ಕಾರ್ಯಾಚರಣೆ ನಿಲ್ಲಿಸಬೇಕು, ಜತೆಗೆ ವಿದ್ಯುತ್ ಘಟಕಗಳ ಬಗ್ಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಸಣ್ಣ ಕೈಗಾರಿಕೆಗಳು ನಷ್ಟದಿಂದ ಮುಚ್ಚುವುದನ್ನು ತಡೆಯಬೇಕು ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ.
ಮೋದಿಜೀ ದೇಶದಲ್ಲಿ ಹಣದುಬ್ಬರ, ನಿರುದ್ಯೋಗ ಹೆಚ್ಚಳವಾಗುತ್ತಿದೆ. ವಿದ್ಯುತ್ ಕಡಿತದಿಂದ ಸಣ್ಣ ಕೈಗಾರಿಕೆಗಳು ಮುಚ್ಚಲಿದ್ದು, ಇದರಿಂದ ಹೆಚ್ಚಿನ ಉದ್ಯೋಗ ನಷ್ಟವಾಗಲಿದೆ. ಪ್ರತಿಕಾರದ ಬುಲ್ಡೋಜರ್ಸ್ ಕಾರ್ಯಾಚರಣೆ ನಿಲ್ಲಿಸಿ, ವಿದ್ಯುತ್ ಘಟಕಗಳ ಬಗ್ಗೆ ಹೆಚ್ಚಿನ ಗಮನಕೊಡಿ” ಎಂದು ರಾಹುಲ್ ಗಾಂಧಿ ಟ್ವೀಟ್ ನಲ್ಲಿ ಉಲ್ಲೇಖಿಸಿದ್ದಾರೆ.
ದೇಶದಲ್ಲಿ ಭಾರೀ ಪ್ರಮಾಣದಲ್ಲಿ ಕಲ್ಲಿದ್ದಲು ಕೊರತೆ ಮತ್ತು ವಿದ್ಯುತ್ ಸರಬರಾಜು ಬಿಕ್ಕಟ್ಟು ಕಾಣಿಸಿಕೊಂಡ ವರದಿಯ ಹಿನ್ನೆಲೆಯಲ್ಲಿ ಮಂಗಳವಾರ ಅಮಿತ್ ಶಾ ಅವರು ಇಂಧನ ಸಚಿವ ಆರ್ ಕೆ ಸಿಂಗ್, ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ ಮತ್ತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಜತೆ ಸಭೆ ನಡೆಸಿದ್ದರು.
ಪ್ರಧಾನಿಗೆ ತಿರುಗೇಟು:
ಕಲ್ಲಿದ್ದಲು ಆಮದು ಕಡಿಮೆ ಮಾಡುವ ಮೂಲಕ ಭಾರತವನ್ನು ಇಂಧನದಲ್ಲಿ ಸ್ವಾವಲಂಬಿಯನ್ನಾಗಿಸಲು ವಾಣಿಜ್ಯ ಗಣಿಗಾರಿಕೆಗಾಗಿ 41 ಕಲ್ಲಿದ್ದಲು ಗಣಿಗಳನ್ನು ಹರಾಜು ಹಾಕಲು ಪ್ರಧಾನಿ ನರೇಂದ್ರ ಮೋದಿ ಅವರು 2020ರ ಜೂನ್ 18ರಂದು ಘೋಷಣೆ ಹೊರಡಿಸಿರುವ ಫೋಟೋವನ್ನು ಟ್ವೀಟ್ ಮಾಡಿ ರಾಹುಲ್ ಗಾಂಧಿ ತಿರುಗೇಟು ನೀಡಿರುವುದಾಗಿ ವರದಿ ತಿಳಿಸಿದೆ.