ಹೊಸದಿಲ್ಲಿ: ‘ದೇಶ ಹೊತ್ತಿ ಉರಿದರೂ ಮಹಿಳೆಯರ ಮೇಲೆ ಅತ್ಯಾಚಾರ, ದಲಿತರ ಮೇಲೆ ದೌರ್ಜನ್ಯ ನಡೆಯುತ್ತಿದ್ದರೂ, ಪ್ರಧಾನಿ ಮೋದಿ ಅವರು ಮಾತ್ರ ನಾನು ಮತ್ತೂಮ್ಮೆ ಪ್ರಧಾನಿ ಹುದ್ದೆಗೇರುವುದು ಹೇಗೆ ಎಂಬ ಪ್ರಶ್ನೆಯೊಂದೇ ಕಾಡುತ್ತಿರುತ್ತದೆ’. ಹೀಗೆಂದು ಪ್ರಧಾನಿ ಮೋದಿ ಅವರನ್ನು ಟೀಕಿಸಿರುವುದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ. ಸೋಮವಾರ ಹೊಸದಿಲ್ಲಿಯ ತಾಲ್ಕ ಟೋರಾ ಸ್ಟೇಡಿಯಂನಲ್ಲಿ ಮುಂದಿನ ಒಂದು ವರ್ಷ ಕಾಲ ಪಕ್ಷ ಹಮ್ಮಿಕೊಂಡಿರುವ ‘ಸಂವಿಧಾನ ಉಳಿಸಿ’ Rallyಯನ್ನು ಉದ್ಘಾಟಿಸಿ ಅವರು ಮಾತನಾಡಿದರು. 2019ರ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿರಿಸಿಕೊಂಡು ಕಾಂಗ್ರೆಸ್ ಈ ಕಾರ್ಯಕ್ರಮ ಹಮ್ಮಿಕೊಂಡಿದೆ.
ದೇಶದಲ್ಲಿ ಮಹಿಳೆಯರು ಮತ್ತು ದಲಿತರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯವನ್ನೇ ಮುಂದಿಟ್ಟುಕೊಂಡು ಮಾತನಾಡಿದ ರಾಹುಲ್ ಗಾಂಧಿ, ಮೋದಿ ನೇತೃತ್ವದ ಸರಕಾರದ ಅವಧಿಯಲ್ಲಿ ಸಾಂವಿಧಾನಿಕ ಮೌಲ್ಯಗಳು ಅಪಾಯಕ್ಕೆ ಒಳಗಾಗಿವೆ. ಜತೆಗೆ ಸುಪ್ರೀಂಕೋರ್ಟ್ ಅನ್ನು ನಾಶಗೊಳಿಸುವ ಪ್ರಯತ್ನ ನಡೆಸಲಾಗುತ್ತಿದೆ. ಸಂಸತ್‌ನಲ್ಲಿ ಕಲಾಪ ನಡೆಯಲು ಅವಕಾಶ ಕೊಡದೆ, ಮುಚ್ಚುವ ಯತ್ನ ಮಾಡಲಾಗುತ್ತಿದೆ ಎಂದು ಹರಿಹಾಯ್ದರು. ಸುಪ್ರೀಂ ಕೋರ್ಟ್, ಸಂಸತ್‌ನ ಕಾರ್ಯಕಲಾಪಗಳಿಗೆ ತಡೆಯೊಡ್ಡುವ ಕೇಂದ್ರ ಸರಕಾರದ ಪ್ರಯತ್ನದಂಥ ಯಾವುದೇ ಕ್ರಮಗಳಿಗೆ ಕಾಂಗ್ರೆಸ್ ಅವಕಾಶ ನೀಡುವುದಿಲ್ಲ ಎಂದೂ ಹೇಳಿದರು.
ಮತ್ತೂಮ್ಮೆ ಪ್ರಧಾನಿಯಾಗುವುದೇ ಆದ್ಯತೆ: ಮಹಿಳೆಯರ ಮೇಲೆ ಅತ್ಯಾಚಾರ, ದಲಿತರ ಹತ್ಯೆಗಳು ನಡೆಯುತ್ತಿದ್ದರೂ ದೇಶ ಹೊತ್ತಿ ಉರಿಯುತ್ತಿದ್ದರೂ ಪ್ರಧಾನಿ ಮೋದಿ ಮೌನ ವಹಿಸಿದ್ದಾರೆ. ಅವರೇನಿದ್ದರೂ ಮತ್ತೂಮ್ಮೆ ಪ್ರಧಾನಿಯಾಗುವ ಬಗ್ಗೆ ಯೋಚಿಸುತ್ತಿದ್ದಾರೆ. ಮೋದಿಯವರು ಕೇವಲ ಮೋದಿ ಯವರ ಬಗ್ಗೆ ಮಾತ್ರ ಉತ್ಸಾಹ ಹೊಂದಿದ್ದಾರೆ ಎಂದು ಟೀಕಿಸಿದ್ದಾರೆ ರಾಹುಲ್.
ಮಾಧ್ಯಮಗಳ ಜತೆ ಅಗತ್ಯಕ್ಕಿಂತ ಹೆಚ್ಚು ಮಾತನಾಡಬೇಡಿ ಎಂದು ಬಿಜೆಪಿ ಶಾಸಕರಿಗೆ, ಸಂಸದರಿಗೆ ಮೋದಿ ಎಚ್ಚರಿಕೆ ನೀಡಿದ್ದನ್ನು ಪ್ರಸ್ತಾವಿಸಿದ ರಾಹುಲ್, ‘ದೇಶ ಮನ್ ಕಿ ಬಾತ್ ಕಾರ್ಯಕ್ರಮವನ್ನು ಮಾತ್ರ ಕೇಳಬೇಕೆಂದು ಪ್ರಧಾನಿ ಬಯಸುತ್ತಿದ್ದಾರೆ’ ಎಂದು ಕಟಕಿಯಾಡಿದರು. ದೇಶಕ್ಕೆ ಸಂವಿಧಾನ ಮತ್ತು ಸಾಂವಿಧಾನಿಕ ಸಂಸ್ಥೆಗಳನ್ನು ನೀಡಿ ರಕ್ಷಿಸಿದ್ದು ಕಾಂಗ್ರೆಸ್. ಆದರೆ ಬಿಜೆಪಿ ಮತ್ತು RSS ಅದನ್ನು ಏನೂ ಮಾಡಲು ಸಾಧ್ಯವಾಗಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಕೆಲವೊಂದು ಪ್ರಮುಖ ಸಂಸ್ಥೆಗಳಿಗೆ RSS ಮತ್ತು ಸಂಘ ಪರಿವಾರದ ಮುಖಂಡರನ್ನು ಮುಖ್ಯಸ್ಥರನ್ನಾಗಿ ನೇಮಿಸಲಾಗುತ್ತಿದೆ ಎಂದು ಟೀಕಿಸಿದ್ದಾರೆ ರಾಹುಲ್ ಗಾಂಧಿ.
ರಾಹುಲ್ ಗಾಂಧಿ ಕೈಗೊಂಡದ್ದು ಸಂವಿಧಾನ ಉಳಿಸಿ ಅಲ್ಲ, ವಂಶವನ್ನು ಉಳಿಸುವ ಕಾರ್ಯಕ್ರಮ. ಪ್ರಧಾನಿ ನರೇಂದ್ರ ಮೋದಿ ವಿರುದ್ಧದ ಆಕ್ರೋಶ ಈಗ ಭಾರತದ ವಿರುದ್ಧದ ಆಕ್ರೋಶವಾಗಿ ಬದಲಾಗುತ್ತಿದೆ.
– ಅಮಿತ್ ಶಾ, ಬಿಜೆಪಿ ಅಧ್ಯಕ್ಷ