Advertisement

ಅಂಗನವಾಡಿ ಮಕ್ಕಳೊಂದಿಗೆ ಬೆರೆತ ರಾಹುಲ್‌ ಗಾಂಧಿ!

09:00 AM Mar 22, 2018 | Karthik A |

ಮಂಗಳೂರು: ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಕಾಂಗ್ರೆಸ್‌ನ ಜನಾಶೀರ್ವಾದ ಯಾತ್ರೆ ಸಂದರ್ಭ ರಸ್ತೆ ಬದಿಯಲ್ಲಿ ಸಣ್ಣಪುಟ್ಟ ಅಂಗಡಿ-ಹೊಟೇಲ್‌ಗ‌ಳಿಗೆ ಭೇಟಿ ನೀಡಿ ಅಲ್ಲಿನವರ ಜತೆಗೆ ಸಾಮಾನ್ಯ ಪ್ರಜೆಯಂತೆ ಬೆರೆಯುವುದು ಇತ್ತೀಚೆಗೆ ಮಾಮೂಲಾಗಿದೆ. ಇದೇ ಮಾದರಿಯಲ್ಲಿ ರಾಹುಲ್‌  ಮಂಗಳೂರು ಭೇಟಿ ಸಂದರ್ಭದಲ್ಲೂ ಮೋಡಿ ಮಾಡಿದ್ದಾರೆ. ಬುಧವಾರ ಬೆಳಗ್ಗೆ ಅವರು ಸುಮಾರು 10 ನಿಮಿಷ ಕಾಲ ಮಂಗಳೂರಿನ ಅಂಗನವಾಡಿ ಮಕ್ಕಳೊಂದಿಗೆ ಮಗುವಾಗಿ ಕಲೆತರು.

Advertisement

ಕದ್ರಿಯಲ್ಲಿರುವ ಸರ್ಕಿಟ್‌ ಹೌಸ್‌ನಲ್ಲಿ ಮಂಗಳವಾರ ರಾತ್ರಿ ತಂಗಿದ್ದ ರಾಹುಲ್‌ ಬುಧವಾರ ಬೆಳಗ್ಗೆ 10.50ರ ಸುಮಾರಿಗೆ ಅಲ್ಲಿಂದ ಕಾರಿನ ಮೂಲಕ ಮಂಗಳೂರು ವಿಮಾನ ನಿಲ್ದಾಣಕ್ಕೆ ಹೊರಟರು. ಆಗ ಅಲ್ಲಿಯೇ ಸಮೀಪದ ಸರಕಾರಿ ಪಾಲಿಟೆಕ್ನಿಕ್‌ ಹತ್ತಿರದ ಅಂಗನವಾಡಿ ಮಕ್ಕಳು ರಸ್ತೆ ಬದಿಯಲ್ಲಿ ಇರುವುದನ್ನು ಕಾರಿನಿಂದಲೇ ಗಮನಿಸಿದ ರಾಹುಲ್‌ ಗಾಂಧಿ ತತ್‌ಕ್ಷಣವೇ ಕಾರು ನಿಲ್ಲಿಸುವಂತೆ ಸೂಚಿಸಿದರು. ಈ ವಿಚಾರವನ್ನು ಮೊದಲೇ ತಿಳಿಯದ ಭದ್ರತಾ ಸಿಬಂದಿ ಒಂದು ಕ್ಷಣ ಅವಾಕ್ಕಾದರು. ಕಾರಿನಿಂದ ಇಳಿದ ರಾಹುಲ್‌ ನೇರವಾಗಿ ಮಕ್ಕಳ ಬಳಿಗೆ ಓಡಿ ಬಂದು, ಮಗುವೊಂದನ್ನು ಅಪ್ಪಿ ಹಿಡಿದುಕೊಂಡರು. ರಾಹುಲ್‌ ಗಾಂಧಿ ದಿಢೀರಾಗಿ ಅಂಗನವಾಡಿಗೆ ಭೇಟಿ ನೀಡಿದ ಕಾರಣ ಅಂಗನವಾಡಿ ಶಿಕ್ಷಕಿಯರಿಗೂ ಆಶ್ಚರ್ಯವಾಯಿತು. ಹತ್ತಿರದಲ್ಲಿ ಅಂಗಡಿಯೊಂದಿದ್ದು, ಅಲ್ಲಿನವರಿಗೆ ಹಾಗೂ ಅಲ್ಲಿಗೆ ಬಂದಿದ್ದ ಗ್ರಾಹಕರು ಕೂಡ ಈ ಸನ್ನಿವೇಶವನ್ನು ಆಶ್ಚರ್ಯದಿಂದ ನೋಡಿದರು.

ಪುಟಾಣಿಗಳ ಜತೆಗೆ ಮುಕ್ತವಾಗಿ ಬೆರೆತು ಮಾತನಾಡಿದ ರಾಹುಲ್‌ ಗಾಂಧಿ ಅವರು ‘ನಿಮ್ಮ ಹೆಸರೇನು? ಎಲ್ಲಿ ಮನೆ? ತಂದೆಯ ಹೆಸರೇನು?’ ಎಂಬಿತ್ಯಾದಿ ಹಲವು ಪ್ರಶ್ನೆಗಳನ್ನು ಕೇಳಿದರು. ಅಂಗನವಾಡಿಗೆ ಹೊಂದಿಕೊಂಡಿರುವ ಫುಟ್‌ಪಾತ್‌ನ ದಂಡೆಯಲ್ಲಿ ಪುಟಾಣಿಗಳ ಜತೆಗೆ ರಾಹುಲ್‌ ಕುಳಿತುಕೊಂಡು ಕೆಲವು ನಿಮಿಷ ಕಳೆದರು. ಪುಟಾಣಿಗಳಿಗೆ ಹಿಂದಿ ಭಾಷೆ ಅರ್ಥವಾಗದ ಕಾರಣ ರಾಹುಲ್‌ ಗಾಂಧಿ ಅವರ ಜತೆಗಿದ್ದ ಐವನ್‌ ಡಿ’ಸೋಜಾ ಹಾಗೂ ಮೊದಿನ್‌ ಬಾವಾ ಅವರು ಮಕ್ಕಳಿಗೆ ಪ್ರಶ್ನೆಗಳನ್ನು ತುಳು ಹಾಗೂ ಕನ್ನಡದಲ್ಲಿ ಕೇಳಿದರು. ಕೆ.ಸಿ. ವೇಣುಗೋಪಾಲ್‌, ಡಾ| ಜಿ. ಪರಮೇಶ್ವರ್‌ ಸೇರಿದಂತೆ ರಾಜ್ಯ ನಾಯಕರು ಜತೆಗಿದ್ದರು.

ಆ ಬಳಿಕ ಕಾರನ್ನೇರಿದ ರಾಹುಲ್‌ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಅಲ್ಲಿಂದ ಶೃಂಗೇರಿಗೆ ತೆರಳುವ ಮುನ್ನ ನಿಲ್ದಾಣದ ಸಿಬಂದಿಗಳ ಜತೆ ಕೆಲವು ನಿಮಿಷ ಬೆರೆತರು. ನಿಲ್ದಾಣದ ಸಿಬಂದಿ ರಾಹುಲ್‌ ಜತೆಗೆ ಮೊಬೈಲ್‌ನಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡರು. ರಾಹುಲ್‌ ಅವರು ಮಂಗಳವಾರ ದ.ಕ. ಜಿಲ್ಲೆಯಲ್ಲಿ ಆಯೋಜಿಸಿದ ಜನಾಶೀರ್ವಾದ ಯಾತ್ರೆ ಸಂದರ್ಭದಲ್ಲಿ ರಸ್ತೆಯಲ್ಲಿ ಸಂಚರಿಸುವ ವೇಳೆ ಎಲ್ಲಿಯೂ ದಾರಿ ಮಧ್ಯೆ ಬಸ್‌ ಇಳಿದು ತಿಂಡಿ ಸೇವನೆ ಅಥವಾ ಅಂಗಡಿಗಳಿಗೆ ಭೇಟಿ ನೀಡುವ ಯಾವುದೇ ತಂತ್ರಗಾರಿಕೆ ಪ್ರದರ್ಶಿಸಿರಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next