ಮುಂಬಯಿ/ಹೊಸದಿಲ್ಲಿ: ಮಹಾರಾಷ್ಟ್ರದಲ್ಲಿನ ಮಹಾ ವಿಕಾಸ ಅಘಾಡಿ ಸರಕಾರದ ಬಗ್ಗೆ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಯವರಿಗೆ ಅಸಮಾಧಾನ ಇದೆಯೇ? ಮಂಗಳವಾರ ಅವರು ವ್ಯಕ್ತಪಡಿಸಿದ ಅಭಿಪ್ರಾಯದಿಂದಾಗಿ ಈ ಪ್ರಶ್ನೆ ಎದ್ದಿದೆ.
‘ಮೈತ್ರಿ ಸರಕಾರದಲ್ಲಿ ನಾವು (ಕಾಂಗ್ರೆಸ್) ಭಾಗೀದಾರ ಅಲ್ಲ. ಸರಕಾರಕ್ಕೆ ಬೆಂಬಲವನ್ನು ಮಾತ್ರ ನೀಡಿದ್ದೇವೆ’ ಎಂದು ಹೇಳಿರುವುದು ಈ ಹಲವಾರು ಗೊಂದಲಗಳಿಗೆ ಕಾರಣವಾಗಿದೆ
ಸರಕಾರ ಭದ್ರವಾಗಿದೆ ಎಂದು ಶಿವಸೇನೆ, ಎನ್‌ಸಿಪಿ ಮತ್ತು ಕಾಂಗ್ರೆಸ್‌ನ ಮಹಾರಾಷ್ಟ್ರ ನಾಯಕರು ಪ್ರತಿಪಾದಿಸುತ್ತಿರುವಂತೆಯೇ ಈ ಬೆಳವಣಿಗೆ ನಡೆದಿದೆ.
ಪಂಜಾಬ್, ರಾಜಸ್ಥಾನ, ಛತ್ತೀಸ್‌ಗಢ, ಪುದುಚೇರಿಯಲ್ಲಿ ನಾವು ಪ್ರಮುಖ ನಿರ್ಧಾರ ಕೈಗೊಳ್ಳುತ್ತೇವೆ. ಆದರೆ ಮಹಾರಾಷ್ಟ್ರದಲ್ಲಿ ಮೈತ್ರಿ ಸರಕಾರಕ್ಕೆ ನಮ್ಮ ಪಕ್ಷ ಬೆಂಬಲವನ್ನು ಮಾತ್ರ ನೀಡಿರುವುದರಿಂದ ನಾವು ನಿರ್ಣಾಯಕ ಪಾತ್ರವಹಿಸುತ್ತಿಲ್ಲ ಎಂದು ಹೇಳಿದ್ದಾರೆ.
ಸಮ್ಮಿಶ್ರ ಸರಕಾರದಲ್ಲಿ ಕಾಂಗ್ರೆಸ್ ಪ್ರಮುಖ ಖಾತೆಗಳನ್ನು ಹೊಂದಿದ್ದರೂ ರಾಹುಲ್ ಗಾಂಧಿ ಅಂತರ ಕಾಯ್ದು ಕೊಳ್ಳುವ ಹೇಳಿಕೆ ನೀಡುತ್ತಿರುವುದನ್ನು ಗಮನಿಸಿದರೆ ಯಾವಾಗ ಬೇಕಾದರೂ ತಮ್ಮ ಬೆಂಬಲವನ್ನು ಹಿಂಪಡೆಯುವ ಸಾಧ್ಯತೆ ಕೂಡ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಸರಕಾರ ಭದ್ರವಾಗಿದೆ: ಇದೇ ವೇಳೆ, ಎನ್‌ಸಿಪಿ ಸಂಸ್ಥಾಪಕ ಶರದ್ ಪವಾರ್, ‘ಮೈತ್ರಿ ಸರಕಾರ ಭದ್ರವಾಗಿದೆ. ಕೆಲಸವಿಲ್ಲದವರು ಮಾತ್ರ ಸರಕಾರವನ್ನು ಅಸ್ಥಿರಗೊಳಿಸುವ ಮಾತುಗಳನ್ನು ಆಡುತ್ತಿದ್ದಾರೆ’ ಎಂದು ಬಿಜೆಪಿಗೆ ತಿರುಗೇಟು ನೀಡಿದ್ದಾರೆ.
ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲು ಯಾವುದೇ ಕಾರಣಗಳಿಲ್ಲ. ಆದರೆ ಬಿಜೆಪಿ ಈ ಬಗ್ಗೆ ವದಂತಿಗಳನ್ನು ಹರಡುತ್ತಿದೆ. ಮೂರು ಪಕ್ಷಗಳು ಒಗ್ಗಟ್ಟಾಗಿದ್ದು, ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಮೈತ್ರಿ ಸರಕಾರ ಸುಭದ್ರವಾಗಿದೆ.
– ಬಾಳಾಸಾಹೇಬ್ ಥೋರಟ್, ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ