ನವದೆಹಲಿ: ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆ (ಪಿಎಲ್ ಎ) ಹದಿಹರೆಯದ ಯುವಕನನ್ನು ಅಪಹರಿಸಿರುವ ಘಟನೆ ಕುರಿತು ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಪ್ರಧಾನಿ ಮೋದಿ ಅವರಿಗೆ ಕಾಳಜಿ ಇಲ್ಲ ಎಂಬುದಕ್ಕೆ ಅವರ ಮೌನವೇ ಸಾಕ್ಷಿಯಾಗಿದೆ ಎಂದು ಟೀಕಿಸಿದ್ದಾರೆ.
ಇದನ್ನೂ ಓದಿ:ಯುಪಿ: ಜನರ ಆಕ್ರೋಶಕ್ಕೆ ಬೆದರಿ ಪ್ರಚಾರದಿಂದ ಪಾಪಾಸ್ ತೆರಳಿದ ಬಿಜೆಪಿ ಶಾಸಕ
ಮಂಗಳವಾರ ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆ ಮಿರಾಮ್ ಟ್ಯಾರೋನ್ ಎಂಬ 17 ವರ್ಷದ ಹದಿಹರೆಯದ ಯುವಕನನ್ನು ಅಪಹರಿಸಿತ್ತು. ಅಪಹರಣಕ್ಕೊಳಪಟ್ಟ ಯುವಕನ ಕುಟುಂಬ ಸದಸ್ಯರ ಜತೆ ನಾವಿದ್ದೇವೆ, ಯಾವುದೇ ಕಾರಣಕ್ಕೂ ವಿಶ್ವಾಸ ಕಳೆದುಕೊಳ್ಳಬೇಡಿ ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.
ಪ್ರಧಾನಿ ಮೋದಿ ಅವರ ಮೌನ ಹೇಡಿತನದ್ದಾಗಿದೆ. ಅವರು ಯಾವುದಕ್ಕೂ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ರಾಹುಲ್ ಟ್ವೀಟ್ ನಲ್ಲಿ ಆರೋಪಿಸಿದ್ದಾರೆ. ಇತ್ತೀಚೆಗೆ ಚೀನಾ ಭಾರತದ ಗಡಿಪ್ರದೇಶದಲ್ಲಿ ದುಸ್ಸಾಹಸಕ್ಕೆ ಕೈಹಾಕಿದೆ. ಆದರೆ ಬಿಜೆಪಿ ಸರ್ಕಾರ ಮೌನಕ್ಕೆ ಶರಣಾಗಿದೆ ಎಂದು ರಾಹುಲ್ ಟೀಕಿಸಿದ್ದಾರೆ.
ಪ್ರಧಾನಿಯವರೇ, ನಮ್ಮ ಪ್ರದೇಶದೊಳಕ್ಕೆ ನುಗ್ಗಲು ಚೀನಾ ಸೇನೆಗೆ ಅದೆಷ್ಟು ಧೈರ್ಯವಿದೆ? ನಮ್ಮ ಪ್ರಜೆಗಳನ್ನೇ ಅಪಹರಿಸಲು ಅವರಿಗೆ ಹೇಗೆ ಸಾಧ್ಯವಾಯಿತು? ನಿಮ್ಮದೇ ಪಕ್ಷದ ಸಂಸದರ ಮನವಿಯನ್ನೂ ಕೇಂದ್ರ ಸರ್ಕಾರ ಕೇಳಿಸಿಕೊಳ್ಳುತ್ತಿಲ್ಲ ಯಾಕೆ ಎಂದು ರಾಹುಲ್ ಪ್ರಶ್ನಿಸಿದ್ದಾರೆ.