ವಾಷಿಂಗ್ಟನ್/ನವದೆಹಲಿ: “ನನ್ನ ಐಫೋನ್ ಅನ್ನು ಕದ್ದಾಲಿಸಲಾಗುತ್ತಿದೆ. ಒಬ್ಬ ವ್ಯಕ್ತಿಯಾಗಿ ಹಾಗೂ ಒಂದು ದೇಶವಾಗಿ ದತ್ತಾಂಶಗಳ ಖಾಸಗಿತನವನ್ನು ರಕ್ಷಿಸುವ ನಿಟ್ಟಿನಲ್ಲಿ ನಿಯಮಗಳನ್ನು ಜಾರಿ ಮಾಡಬೇಕಾದ ಅಗತ್ಯವಿದೆ’.
ಹೀಗೆಂದು ಹೇಳಿರುವುದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ. ಅಮೆರಿಕ ಪ್ರವಾಸದಲ್ಲಿರುವ ರಾಹುಲ್ ಅವರು ಗುರುವಾರ ಕೃತಕ ಬುದ್ಧಿಮತ್ತೆ ಮತ್ತು ಅತ್ಯಾಧುನಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಗಣನೀಯ ಸಾಧನೆಗೈದಿರುವ ಸಿಲಿಕಾನ್ ವ್ಯಾಲಿ ಮೂಲದ ನವೋದ್ಯಮಗಳ ಪ್ರತಿನಿಧಿಗಳೊಂದಿಗೆ ಸಂವಾದದ ವೇಳೆ ಈ ಹೇಳಿಕೆ ನೀಡಿದ್ದಾರೆ. ಈ ಮೂಲಕ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಫೋನ್ ಟ್ಯಾಪಿಂಗ್ ಆರೋಪ ಮಾಡಿದ್ದಾರೆ.
ಒಂದು ಹಂತದಲ್ಲಿ ಅವರು ತಮ್ಮ ಐಫೋನ್ ಅನ್ನು ಕೈಗೆತ್ತಿಕೊಂಡು, “ಹಲೋ! ಮಿಸ್ಟರ್ ಮೋದಿ’ ಎಂದು ಹೇಳಿದ್ದೂ ಕಂಡುಬಂತು. ಒಂದು ಸರ್ಕಾರವು ನಿಮ್ಮ ಫೋನ್ ಕದ್ದಾಲಿಸಬೇಕು ಎಂದು ಬಯಸಿದರೆ, ಅದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಇದು ನನ್ನ ಅನುಭವಕ್ಕೆ ಬಂದಿದೆ. ನಾನು ಏನು ಮಾಡುತ್ತೇನೆ ಎಂಬ ಎಲ್ಲ ಮಾಹಿತಿಯೂ ಸರ್ಕಾರಕ್ಕೆ ಲಭ್ಯವಾಗುತ್ತಿರುತ್ತದೆ’ ಎಂದು ರಾಹುಲ್ ಹೇಳಿದ್ದಾರೆ. ದತ್ತಾಂಶ ಎನ್ನುವುದು ಈಗ “ಹೊಸ ಚಿನ್ನ’ವಾಗಿ ಮಾರ್ಪಾಟಾಗಿದೆ. ಭಾರತದಂಥ ದೇಶಗಳು ಅದರ ನೈಜ ಶಕ್ತಿಯನ್ನು ಅರಿತುಕೊಂಡಿವೆ. ಆದರೆ, ದತ್ತಾಂಶಗಳ ಸುರಕ್ಷತೆ ಮತ್ತು ಭದ್ರತೆಗಾಗಿ ಸೂಕ್ತ ನಿಬಂಧನೆಗಳನ್ನು ಜಾರಿಗೊಳಿಸಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ರಾಹುಲ್ ವಿರುದ್ಧ ಬಿಜೆಪಿ ವಾಗ್ಧಾಳಿ
ಗುರುನಾನಕ್ ಥಾಯ್ಲೆಂಡ್‌ಗೆ ಹೋಗಿದ್ದರು ಎಂಬ ಹೇಳಿಕೆ ವಿರುದ್ಧ ಅಣಕ ಗುರುನಾನಕ್ ಅವರು ಥಾಯ್ಲೆಂಡ್‌ಗೆ ಭೇಟಿ ನೀಡಿದ್ದರು ಎಂದು ಬುಧವಾರ ರಾಹುಲ್ ನೀಡಿದ್ದ ಹೇಳಿಕೆಯನ್ನು ಬಿಜೆಪಿ ನಾಯಕ ಮಂಜಿಂದರ್ ಸಿಂಗ್ ಸಿರ್ಸಾ ಅಲ್ಲಗಳೆದಿದ್ದಾರೆ. “ಗುರುನಾನಕ್ ಥಾಯ್ಲೆಂಡ್‌ಗೆ ಹೋಗಿದ್ದರು ಎಂಬುದನ್ನು ನೀವೆಲ್ಲಿ ಓದಿದ್ದು? ಧಾರ್ಮಿಕ ವಿಚಾರಕ್ಕೆ ಬಂದಾಗ ನೀವು ಸಂವೇದನಾಶೀಲರಾಗಿ ಮಾತನಾಡುತ್ತೀರಿ ಎಂದು ನಿರೀಕ್ಷಿಸಲೂ ಸಾಧ್ಯವಾಗುತ್ತಿಲ್ಲ. ನಿಮ್ಮ ಮೂರ್ಖತನದ ಹೇಳಿಕೆಗಳನ್ನು ನಾವು ಎಷ್ಟು ಅಂತ ಕ್ಷಮಿಸಿಬಿಡಲು ಸಾಧ್ಯ’ ಎಂದು ಸಿರ್ಸಾ ಪ್ರಶ್ನಿಸಿದ್ದಾರೆ. ಬುಧವಾರ ತಮ್ಮ ಭಾರತ್ ಜೋಡೋ ಯಾತ್ರೆ ಕುರಿತು ಮಾತನಾಡುತ್ತಾ, “ಗುರುನಾನಕ್‌ಜೀ ಅವರಿಗೆ ಹೋಲಿಸಿದರೆ ನನ್ನ ನಡಿಗೆ ಏನೂ ಅಲ್ಲ. ಗುರುನಾನಕ್ ಅವರು ಸೌದಿ ಅರೇಬಿಯದ ಮೆಕ್ಕಾದಿಂದ, ಥಾಯ್ಲೆಂಡ್, ಶ್ರೀಲಂಕಾವರೆಗೂ ಹೋಗಿದ್ದರು. ಅವರು ನಾವು ಹುಟ್ಟುವ ಮೊದಲೇ ಜೋಡೋ ಯಾತ್ರೆ ನಡೆಸಿದ್ದರು’ ಎಂದು ರಾಹುಲ್ ಹೇಳಿದ್ದರು.
Related Articles
“ಕೊಳಕನ್ನು ಅರಸುವ ಕೀಟಗಳಂತೆ’!
ರಾಷ್ಟ್ರೀಯ ಸಾಂಖ್ಯಿಕ ಕಾರ್ಯಾಲಯವು ಜಿಡಿಪಿ ದತ್ತಾಂಶ ಬಿಡುಗಡೆ ಮಾಡಿದ ಬೆನ್ನಲ್ಲೇ ಕಾಂಗ್ರೆಸ್ ಹಾಗೂ ಆರ್‌ಬಿಐ ಮಾಜಿ ಗವರ್ನರ್ ರಘುರಾಂ ರಾಜನ್ ವಿರುದ್ಧ ಬಿಜೆಪಿ ಕಿಡಿಕಾರಿದೆ. ಭಾರತ್ ಜೋಡೋ ಯಾತ್ರೆ ವೇಳೆ ರಾಹುಲ್ ಜತೆ ಮಾತನಾಡಿದ್ದ ರಾಜನ್, “2022-23ರಲ್ಲಿ ಭಾರತದ ಜಿಡಿಪಿ ಶೇ.5ರ ಪ್ರಗತಿ ಸಾಧಿಸಬಹುದು ಅಷ್ಟೆ’ ಎಂದಿದ್ದರು. ಆದರೆ, ಈಗ ಜಿಡಿಪಿ ಪ್ರಗತಿ ದರ ಶೇ.7.2ಕ್ಕೆ ತಲುಪಿದ ಹಿನ್ನೆಲೆಯಲ್ಲಿ ರಾಜನ್ ಕಾಲೆಳೆದ ಬಿಜೆಪಿ ವಕ್ತಾರ ಅಮಿತ್ ಮಾಳವೀಯ, “ಇವರೆಲ್ಲರೂ ಕೊಳಕನ್ನು ಹುಡುಕುವ ನೊಣಗಳಿದ್ದಂತೆ. ಸ್ವತ್ಛವಾದ ಕೊಠಡಿಗೆ ಹಾಕಿದರೂ ಸಣ್ಣ ಕೊಳಕಿಗಾಗಿ ಹುಡುಕುತ್ತಿರುತ್ತಾರೆ. ಗಬ್ಬು ನಾರುವ ಕೊಳಕಲ್ಲಿ (ಯುಪಿಎ ಅವಧಿ) ಹಾಕಿದರೆ, ಸಂತೋಷದಲ್ಲಿ ಮುಳುಗುತ್ತಾರೆ’ ಎಂದಿದ್ದಾರೆ.
ಅನರ್ಹತೆಯೇ ಅವಕಾಶಗಳ ಬಾಗಿಲು ತೆರೆಯಿತು
ಪ್ರತಿಷ್ಠಿತ ಸ್ಟಾನ್‌ಫೋರ್ಟ್ ವಿವಿಯಲ್ಲಿ ಭಾರತೀಯ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವ ವೇಳೆ ರಾಹುಲ್ ಗಾಂಧಿಯವರು, ತಮ್ಮ ಅನರ್ಹತೆಯ ಕುರಿತೂ ಮಾತನಾಡಿದ್ದಾರೆ. “ನಾನು ರಾಜಕೀಯ ಪ್ರವೇಶಿಸಿದಾಗ, ಮುಂದೊಂದು ದಿನ ಲೋಕಸಭೆಯಿಂದ ಅನರ್ಹಗೊಳ್ಳಬಹುದು ಎಂದು ಕಲ್ಪಿಸಿಕೊಂಡೂ ಇರಲಿಲ್ಲ. ಆದರೆ, ಅನರ್ಹತೆಯು ಜನರಿಗಾಗಿ ಸೇವೆ ಸಲ್ಲಿಸುವ ದೊಡ್ಡ ಅವಕಾಶವನ್ನೇ ನನಗೆ ಒದಗಿಸಿತು’ ಎಂದಿದ್ದಾರೆ.