ತಿರುವನಂತಪುರಂ: ಕೇರಳದ ವಯನಾಡ್ ನಿಂದಲೂ ಅಖಾಡಕ್ಕಿಳಿದಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ಸಲ್ಲಿಸಿರುವ ಆಸ್ತಿ-ಪಾಸ್ತಿಗಳ ವಿವರ ಅಫಿಡವಿತ್ ನಲ್ಲಿ ಘೋಷಿಸಿಕೊಂಡಿದ್ದಾರೆ.
ರಾಹುಲ್ ಗಾಂಧಿ ಘೋಷಿಸಿಕೊಂಡಿರುವ ಆಸ್ತಿ-ಪಾಸ್ತಿ ವಿವರದ ಪ್ರಕಾರ, ಒಟ್ಟು 14.85 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ. 2014ರ ಲೋಕಸಭಾ ಚುನಾವಣೆ ವೇಳೆ ರಾಹುಲ್ ಗಾಂಧಿ ಘೋಷಿಸಿಕೊಂಡ ಆಸ್ತಿ ಮೌಲ್ಯ 9.04 ಕೋಟಿ, ಈ ಬಾರಿಯ ಚುನಾವಣೆಯಲ್ಲಿ 4.85 ಕೋಟಿ ರೂಪಾಯಿಯಷ್ಟು ಆಸ್ತಿ ಮೌಲ್ಯ ಹೆಚ್ಚಳವಾಗಿದೆ ಎಂದು ವರದಿ ತಿಳಿಸಿದೆ.
ಗುರುವಾರ ವಯನಾಡ್ ನಲ್ಲಿ ನಾಮಪತ್ರದ ಜೊತೆ ಸಲ್ಲಿಸಿರುವ ಅಫಿಡವಿತ್ ನಲ್ಲಿ ಸ್ಥಿರಾಸ್ತಿಯ ಮೌಲ್ಯ 5,80,58,799 ಕೋಟಿ ರೂ. ಹಾಗೂ ಚರಾಸ್ತಿ ಒಟ್ಟು ಮೌಲ್ಯ 7,93,03,977 ಕೋಟಿ ರೂ. ಎಂದು ಘೋಷಿಸಿಕೊಂಡಿದ್ದಾರೆ.
207-18ರ ಆದಾಯ ತೆರಿಗೆ ವಿವರದ ಪ್ರಕಾರ ರಾಹುಲ್ ವಾರ್ಷಿಕ ಆದಾಯ 1,11,85,570 ರೂಪಾಯಿ. ಅಲ್ಲದೇ ರಾಹುಲ್ ತಾಯಿ ಸೋನಿಯಾ ಗಾಂಧಿ ಅವರಿಂದ 5 ಲಕ್ಷ ರೂಪಾಯಿ ವೈಯಕ್ತಿಕ ಸಾಲ ತೆಗೆದುಕೊಂಡಿದ್ದಾರೆ. ವಿವಿಧ ಬ್ಯಾಂಕ್ ಹಾಗೂ ಇತರೆ ಸಂಸ್ಥೆಗಳಿಂದ ರಾಹುಲ್ ಪಡೆದ ಸಾಲದ ಮೊತ್ತ 72 ಲಕ್ಷ ರೂಪಾಯಿ ಎಂದು ವಿವರಿಸಿದೆ.
ರಾಹುಲ್ ಗಾಂಧಿ ಸ್ವಂತ ಕಾರನ್ನು ಹೊಂದಿಲ್ಲ. ಅವರು ಸಲ್ಲಿಸಿದ ಅಫಿಡವಿತ್ ಪ್ರಕಾರ, ತಮ್ಮ ಮೇಲೆ ಐದು ಪ್ರಕರಣಗಳು ದಾಖಲಾಗಿರುವುದಾಗಿ ನಮೂದಿಸಿದ್ದಾರೆ. ಎರಡು ಪ್ರಕರಣ ಮಹಾರಾಷ್ಟ್ರದಲ್ಲಿ, ಜಾರ್ಖಂಡ್, ಅಸ್ಸಾಂ ಹಾಗೂ ದೆಹಲಿಯಲ್ಲಿ ತಲಾ ಒಂದೊಂದು ಪ್ರಕರಣ ದಾಖಲಾಗಿರುವುದಾಗಿ ನಮೂದಿಸಿದ್ದಾರೆ.
ರಾಹುಲ್ ಕೈಯಲ್ಲಿರುವ ನಗದು ಹಣ 40 ಸಾವಿರ, ವಿವಿಧ ಬ್ಯಾಂಕ್ ಗಳಲ್ಲಿ ಇರುವ ಠೇವಣಿ ಮೊತ್ತ 17.93 ಲಕ್ಷ, ಶೇರು, ಬಾಂಡ್ಸ್ ಹಾಗೂ ಡಿಬೆಂಚರ್ಸ್ ಗಳಲ್ಲಿ ಹೂಡಿಕೆ ಮಾಡಿರುವ ಮೊತ್ತ 5.19 ಕೋಟಿ, ಅಲ್ಲದೇ 333.3 ಗ್ರಾಮ್ ಚಿನ್ನಾಭರಣ ಹೊಂದಿರುವುದಾಗಿ ಅಫಿಡವಿತ್ ನಲ್ಲಿ ಘೋಷಿಸಿಕೊಂಡಿದ್ದಾರೆ.