ಹೊಸದಿಲ್ಲಿ : ದೇಶದಲ್ಲಿ ಒಂದೇ ಸಮನೆ ಇಂಧನ ಬೆಲೆ ಏರುತ್ತಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಏಕೆ ಮೌನವಹಿಸಿದ್ದಾರೆ; ಜನರ ಸಂಕಷ್ಟಗಳು ಅವರಿಗೆ ಅರ್ಥವಾಗುತ್ತಿಲ್ಲವೇ ? ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.
ಇಂಧನ ಬೆಲೆ ಏರಿಕೆಯನ್ನು ಪ್ರತಿಭಟಿಸಿ ಇಂದು ಸೆ.10ರಂದು ಭಾತ್ ಬಂದ್ ಗೆ ಕಾಂಗ್ರೆಸ್ ಕರೆ ನೀಡಿದ್ದು ಕಾಂಗ್ರೆಸ್ ನಾಯಕರೆಲ್ಲ ಇಂದು ಇಲ್ಲಿನ ರಾಮಲೀಲಾ ಮೈದಾನದಲ್ಲಿ ಜಮಾಯಿಸಿ ಕೇಂದ್ರ ಸರಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.
“ಪ್ರಧಾನಿ ಮೋದಿ ಅವರು ಕಳೆದ 70 ವರ್ಷಗಳಲ್ಲಿ ಆಗದಿರುವುದು ಈಗ ಕೇವಲ ನಾಲ್ಕು ವರ್ಷಗಳಲ್ಲಿ ಆಗುತ್ತಿದೆ ಎಂದು ಹೇಳುತ್ತಾರೆ. ಅವರು ಹೇಳುತ್ತಿರುವುದು ನಿಜವೇ ಹೌದು. ಈಗ ನೀವೆಲ್ಲರೂ ನೋಡುತ್ತಿರುವಂತೆಯೇ ಮೋದಿ ಸರಕಾರ ಜನರನ್ನು, ಸಮಾಜವನ್ನು ವಿಭಜಿಸುತ್ತಿದ್ದಾರೆ. ರಾಜ್ಯಗಳನ್ನು ಪರಸ್ಪರ ಎತ್ತಿಕಟ್ಟುತ್ತಿದ್ದಾರೆ; ಭಾರತದ ರೂಪಾಯಿ ಕಳದ 70 ವರ್ಷಗಳಲ್ಲಿ ಕಾಣದ ತಳ ಮಟ್ಟವನ್ನು ಈ ದಿನಗಳಲ್ಲಿ ಕಾಣುತ್ತಿದೆ; ಪೆಟ್ರೋಲ್, ಡೀಸೆಲ್ ಬೆಲೆಗಳು ಕಳೆದ 70 ವರ್ಷಗಳಲ್ಲಿ ಕಾಣದ ಎತ್ತರವನ್ನು ಈಗ ಕಾಣುತ್ತಿವೆ’ ಎಂದು ರಾಹುಲ್ ವ್ಯಂಗ್ಯವಾಡಿದರು.
ಒಪೆಕ್ ಈ ಮೊದಲು ಒಪ್ಪಿಕೊಂಡಿರುವಂತೆ ಪರ್ಯಾಪ್ತ ಪ್ರಮಾಣದಲ್ಲಿ ಕಚ್ಚಾ ತೈಲವನ್ನು ಉತ್ಪಾದಿಸುತ್ತಿಲ್ಲ; ಪರಿಣಾಮವಾಗಿ ತೈಲ ಪೂರೈಕೆ ಕಡಿಮೆಯಾಗಿದ್ದು ಇದರಿಂದಾಗಿಯೇ ತೈಲ ಬೆಲೆಗಳು ಏರುತ್ತಿವೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದರು. ಅಮೆರಿಕನ್ ಡಾಲರ್‌ನ ಪಾರಮ್ಯದಿಂದ ವಿಶ್ವ ಆರ್ಥಿಕತೆಗೆ ಒಳಿತಾಗುವುದಿಲ್ಲ ಎಂದವರು ಹೇಳಿದ್ದರು.