ರಾಯ್‌ಬರೇಲಿ: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಗೆದ್ದರೆ ನರೇಂದ್ರ ಮೋದಿಯೇ ಪ್ರಧಾನಿ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ. ಆದರೆ ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದರೆ ಪ್ರಧಾನಿ ಹುದ್ದೆಗೆ ಯಾರು ಎಂಬ ಪ್ರಶ್ನೆಗೆ ಒಕ್ಕೂಟದ ನಾಯಕರೂ ಉತ್ತರಿಸಿಲ್ಲ. ರಾಹುಲ್ ಗಾಂಧಿ ಸ್ಪರ್ಧಿಸಿರುವ ರಾಯ್‌ಬರೇಲಿಯಲ್ಲಿ ಬುಧವಾರ ಚುನಾವಣ ಪ್ರಚಾರದ ವೇಳೆ, ಛತ್ತೀಸ್‌ಗಢ ಮಾಜಿ ಸಿಎಂ ಭೂಪೇಶ್ ಬಘೇಲ್ “ರಾಯ್‌ಬರೇಲಿಯಿಂದ ಸ್ಪರ್ಧಿಸಿದ್ದ ಇಂದಿರಾ ಗಾಂಧಿ ಪ್ರಧಾನಿಯಾಗಿದ್ದರು. ಈಗ ಸ್ಪರ್ಧೆ ಮಾಡಿರುವ ರಾಹುಲ್ ಗಾಂಧಿ ಮುಂದೆ ಪ್ರಧಾನಿಯಾಗಲಿದ್ದಾರೆ. ಅವರಿಗಾಗಿ ನೀವು ಮತ ಹಾಕಲಿದ್ದೀರಿ’ ಎಂದು ಭಾಷಣ ಮಾಡುವ ವೇಳೆ ಹೇಳಿದ್ದಾರೆ. ಹೀಗಾಗಿ ಮತ್ತೆ ವಿಪಕ್ಷಗಳ ಒಕ್ಕೂಟದಲ್ಲಿ ಪ್ರಧಾನಿ ಹುದ್ದೆ ವಿಚಾರ ಚರ್ಚೆ ಆರಂಭವಾಗಿದೆ.
ಅದಕ್ಕೆ ಪ್ರತಿಕ್ರಿಯಿಸಿದ ಸಮಾಜವಾದಿ ಪಕ್ಷದ ನಾಯಕ ಅಖೀಲೇಶ್ ಯಾದವ್, “ಇದು ನಮ್ಮ ಚುನಾವಣ ತಂತ್ರದ ಭಾಗ. ಇದಕ್ಕಿಂತ ಹೆಚ್ಚೇನೂ ಹೇಳಲಾರೆ’ ಎಂದಿದ್ದಾರೆ. ಪ್ರಚಾರದ ಸಂದರ್ಭದಲ್ಲಿಯೂ ಕೂಡ ಬಿಜೆಪಿ ನಾಯಕರು ಇಂಡಿಯಾ ಒಕ್ಕೂಟದಲ್ಲಿ ಪ್ರಧಾನಿ ಯಾರಾಗಲಿದ್ದಾರೆ ಎಂಬ ಪ್ರಶ್ನೆಗಳನ್ನು ಕೇಳಿದ್ದರು.
ಮೈಸೂರಿನಲ್ಲಿ ಚುನಾವಣ ಪ್ರಚಾರದ ವೇಳೆ ಮಾಜಿ ಪ್ರಧಾನಿ ದೇವೇಗೌಡರೂ ಕೂಡ ಪ್ರಧಾನಿ ಅಭ್ಯರ್ಥಿ ಯಾರು ಎಂದು ಪ್ರಶ್ನಿಸಿದ್ದರು. ಆ ಸಂದರ್ಭದಲ್ಲಿಯೂ ಕೂಡ ಇಂಡಿಯಾ ಒಕ್ಕೂಟದ ನಾಯಕರು ಅದಕ್ಕೆ ಉತ್ತರಿಸುವ ಗೋಜಿಗೆ ಹೋಗಿರಲಿಲ್ಲ.
ಇಂಡಿಯಾ ಮೈತ್ರಿಕೂಟ ಅಸ್ತಿತ್ವಕ್ಕೆ ಬಂದಿದ್ದ ಸಂದರ್ಭದಲ್ಲಿ ಪಿಎಂ ಅಭ್ಯರ್ಥಿ ಬಗ್ಗೆ ಕೆಲವು ನಾಯಕರು ಮಾತನಾಡಿದ್ದುಂಟು. ಎಐಸಿಸಿ ಅಧ್ಯಕ್ಷ ಖರ್ಗೆ ಹುದ್ದೆಗೆ ಸೂಕ್ತ ಎಂಬ ಮಾತುಗಳೂ ಕೇಳಿ ಬಂದಿದ್ದವು. ಈ ಸಂದರ್ಭದಲ್ಲಿ ಮಾತನಾಡಿದ್ದ ಮಲ್ಲಿಕಾರ್ಜುನ ಖರ್ಗೆಯವರೇ ಮಾತನಾಡಿ “ಫಲಿತಾಂಶದ ಬಳಿಕ ಮೈತ್ರಿಕೂಟದ ನಾಯಕರು ಸಭೆ ಸೇರಿ ಪ್ರಧಾನಿಯನ್ನು ನಿರ್ಣಯಿಸಲಿದ್ದಾರೆ’ ಎಂದಿದ್ದರು.
ಇದನ್ನೂ ಓದಿ: Mallikarjun Kharge: ಮಟನ್-ಚಿಕನ್ ಬಿಡಿ, ಅಭಿವೃದ್ಧಿ ಬಗ್ಗೆ ಮಾತಾಡಿ: ಮೋದಿಗೆ ಖರ್ಗೆ