Advertisement

ರಾಹುಲ್‌ ಗಾಂಧಿಗಿಲ್ಲ ರಾಜ್ಯದ ಕಾಳಜಿ: ಬಂಡೆಪ್ಪ

04:24 PM Apr 06, 2018 | Team Udayavani |

ಹುಮನಾಬಾದ: ರಾಜ್ಯದ ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ಬರುವ ರಾಹುಲ್‌ ಗಾಂಧಿ ಯಾವತ್ತಾದರು ಕರ್ನಾಟಕದ ಬಗ್ಗೆ ಮಾತಾಡಿದ್ದಾರೆಯೇ ಎಂದು ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ ಪ್ರಶ್ನಿಸಿದರು. ಪಟ್ಟಣದ ಸ್ಟಾರ್‌ ಹಾಲ್‌ನಲ್ಲಿ ಏರ್ಪಡಿಸಲಾಗಿದ್ದ ಜೆಡಿಎಸ್‌ ಹಾಗೂ ಬಿಎಸ್‌ಪಿ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು.

Advertisement

ರಾಜ್ಯಕ್ಕೆ ಬರುವ ರಾಹುಲ್‌ ಗಾಂಧಿ ಯಾವತ್ತು ರಾಜ್ಯದಲ್ಲಿನ ಸಮಸ್ಯೆಗಳ ಕುರಿತು ಮಾತನಾಡಿಲ್ಲ. ರಾಜ್ಯದ ಅಭಿವೃದ್ಧಿ ಕುರಿತು ಮಾತನಾಡದೇ ಕೇವಲ ಕೇಂದ್ರ ಸರಕಾರದ ವಿರುದ್ಧ ಟೀಕಿಸುವುದನ್ನೇ ರೂಢಿಸಿಕೊಂಡಿದ್ದಾರೆ. ಗುಜರಾತ್‌ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದರೆ ರೈತರ ಸಂಪೂರ್ಣ ಸಾಲ ಮನ್ನಾ ಮಾಡುವುದಾಗಿ ಹೇಳುವ ರಾಹುಲ್‌ ಗಾಂಧಿ  ಕರ್ನಾಟಕದಲ್ಲಿ ಅವರದೇ ಸರ್ಕಾರ ಇದ್ದರೂ ರೈತರ ಬಗ್ಗೆ ಕಾಳಜಿ ತೋರಿಲ್ಲ.

ಸಂಪೂರ್ಣ ಸಾಲ ಮನ್ನಾ ಮಾಡಿಲ್ಲ. ವಿವಿಧ ಷರತ್ತು ಹಾಕಿ 50 ಸಾವಿರ ರೂ. ಸಾಲ ಮನ್ನಾ ಮಾಡಿದ ಕಾಂಗ್ರೆಸ್‌ ಸರ್ಕಾರದ ಯೋಜನೆ ಬಹುತೇಕ ರೈತರಿಗೆ ಲಾಭ ನೀಡಿಲ್ಲ. ಕೇವಲ ಚುನಾವಣೆಗಾಗಿ ಯೋಜನೆ ಪ್ರಕಟಸಿ ಜನರನ್ನು ಮರಳು ಮಾಡಲಾಗಿದೆ ಎಂದು ಆರೋಪಿಸಿದರು.

ಜೆಡಿಎಸ್‌ಗೆ ಅಧಿಕಾರ ನೀಡಿದ 24 ಗಂಟೆಗಳಲ್ಲಿ ರೈತರ ಸಂಪೂರ್ಣ ಸಾಲ ಮನ್ನಾ ಮಾಡುವುದಾಗಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಈಗಾಗಲೇ ಘೋಷಣೆ ಮಾಡಿದ್ದಾರೆ. ಅಲ್ಲದೇ ಸರ್ಕಾರ ಬಂದ ಆರು ತಿಂಗಳಲ್ಲಿ ಗ್ರಾಮೀಣ ಭಾಗದಲ್ಲಿ 24 ಗಂಟೆ ವಿದ್ಯುತ್‌ ಪೂರೈಸುವ ಕೆಲಸ ಮಾಡುವುದಾಗಿ ಹೇಳಿದ್ದಾರೆ. 

ಜೆಡಿಎಸ್‌ ಕನ್ನಡ ಹಿತಕ್ಕಾಗಿ, ಕನ್ನಡಿಗರ ಧ್ವನಿಯಾಗಿ, ಕರ್ನಾಟಕದ ಸಮಸ್ಯೆಗಳಿಗೆ ಸ್ಪಂದಿಸುವ ಏಕೈಕ ಪಕ್ಷವಾಗಿದೆ. ದೇಶದಲ್ಲಿ ಈಗ ರಾಷ್ಟ್ರೀಯ ಪಕ್ಷಗಳನ್ನು ಜನರು ನಂಬುತ್ತಿಲ್ಲ. ಬದಲಾಗಿ ಪ್ರಾದೇಶಿಕ ಪಕ್ಷಗಳ ಕಡೆ ಹೆಚ್ಚಿನ ಒಲವು ತೋರುತ್ತಿದ್ದಾರೆ. ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿ ಹಾಗೂ ಬಿಎಸ್‌ಪಿ ಅಭ್ಯರ್ಥಿಯನ್ನು ಗೆಲ್ಲಿಸಲು ಜನರು ಮುಂದಾಗಬೇಕು ಎಂದು ಮನವಿ ಮಾಡಿದರು.
 
ಜೆಡಿಎಸ್‌ ಅಭ್ಯರ್ಥಿ ನಸಿಮೊದ್ದೀನ್‌ ಪಟೇಲ್‌ ಮಾತನಾಡಿ, ಸರ್ಕಾರದ ವಿವಿಧ ಯೋಜನೆಗಳು ಅರ್ಹ ಬಡ ಫಲಾನುಭವಿಗಳಿಗೆ ತಲುಪಿಲ್ಲ. ಕ್ಷೇತ್ರದಲ್ಲಿ ಯುವಕರಿಗೆ ಉದ್ಯೋಗ ಕೂಡ ಇಲ್ಲ. ತೆಲಂಗಾಣ ರಾಜ್ಯದ ಜಹಿರಾಬಾದ್‌ ಒಂದು ತಾಲೂಕು ಕೇಂದ್ರವಾಗಿದೆ. ಅದು ಕೂಡ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿದೆ. ಅದೇ ಹೆದ್ದಾರಿಗೆ ಅಂಟಿಕೊಂಡಿರುವ ಹುಮನಾಬಾದ ಕೂಡ ಒಂದು ತಾಲೂಕು ಕೇಂದ್ರವಾಗಿದ್ದು, ಇಲ್ಲಿ ಯಾವುದೇ ದೊಡ್ಡ ಕೈಗಾರಿಕೆಗಳು ಇಲ್ಲ. ಜಹಿರಾಬಾದ್‌ನಲ್ಲಿ ವಿವಿಧ ಕೈಗಾರಿಕಾ ಕಂಪನಿಗಳು ಸಾವಿರಾರೂ ಜನರಿಗೆ ಉದ್ಯೋಗ ನೀಡುತ್ತಿದೆ. ಈ ಬಾರಿ ಜೆಡಿಎಸ್‌ಗೆ ಬೆಂಬಲ ನೀಡಿದರೆ ಕ್ಷೇತ್ರದ ಜನರ ಸೇವಕನಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.

Advertisement

ಬಿಎಸ್‌ಪಿ ಮುಖಂಡ ಎಂ. ಮುನಿಯಪ್ಪ, ಪಿ.ಐ. ಜೋಸೆಫ್‌, ಮಹೇಶ ಅಗಡಿ, ವಿಠ್ಠಲರಾವ ಸೂರ್ಯವಂಶಿ, ವಿಠ್ಠಲನಾಯಕ ಡಾಕುಳಗಿ, ಶಿವರಾಜ ಹುಲಿ, ರೀಯಾಜೋದ್ದಿನ್‌, ದತ್ತು ಸೂರ್ಯವಂಶಿ, ದೇವೇಂದ್ರ ಗದರ್‌, ಬಬನ್‌ ಬಿರಾದಾರ, ಶಂಕರ ಪ್ರಿಯಾ, ಅಬ್ದುಲ್‌ ರೇಹಮಾನ್‌ ಗೋರೆಮಿಯ್ನಾ, ಗೌತಮ ಸೇಡೋಳ, ರವಿ ಘವಾಳಕರ್‌, ಲಕ್ಷ್ಮೀಪುತ್ರ ಮಾಳಗೆ, ಶಿವಪುತ್ರ ಮಾಳಗೆ, ಮುಜೀಬೋದ್ದಿನ್‌ ಪಟೇಲ್‌, ವೀರೇಶ ಸೀಗಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next