Advertisement

BJP ಸಂಘ ಪರಿವಾರದವರಿಗೆ ರಾಹುಲ್ ಗಾಂಧಿ ಬಗ್ಗೆ ಭಯ ಹೆಚ್ಚು: ಸಚಿವ ಶಿವರಾಜ್ ತಂಗಡಗಿ

01:32 PM Oct 08, 2023 | Team Udayavani |

ಗಂಗಾವತಿ: ಬಿಜೆಪಿ ಮತ್ತು ಸಂಘ ಪರಿವಾರದವರಿಗೆ ರಾಹುಲ್ ಗಾಂಧಿ ಕಂಡರೆ ಭಯ ಹೆಚ್ಚು. ಆದ್ದರಿಂದ ಮಾಧ್ಯಮಗಳಲ್ಲಿ ರಾಹುಲ್ ಗಾಂಧಿಯ ಬಗ್ಗೆ ಇಲ್ಲಸಲ್ಲದ ಮಾತುಗಳನ್ನಾಡುತ್ತಾರೆ. ಬಿಜೆಪಿಯವರಿಗೆ ಬಡವರು ಮತ್ತು ಹಿಂದುಳಿದವರ ಅಭಿವೃದ್ಧಿ ಬೇಕಾಗಿಲ್ಲ ಆದ್ದರಿಂದ ಜಾತಿ ಜನಗಣತಿ ಬಹಿರಂಗವನ್ನು ವಿರೋಧಿಸುತ್ತಿದ್ದಾರೆ ಎಂದು ಹಿಂದುಳಿದ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ಎಸ್ ತಂಗಡಗಿ ಹೇಳಿದರು.

Advertisement

ಅವರು ತಾಲೂಕಿನ ಹಣವಾಳ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ಸಂಘ ಪರಿವಾರದವರಿಗೆ ದೇಶದ ಬಡವರ ಅಭಿವೃದ್ಧಿಗಿಂತ ಪಾಕಿಸ್ತಾನ, ಚೈನಾ ಮತ್ತು ಜಾತಿ ಮಧ್ಯೆ ಜಗಳ ಹಚ್ಚುವುದೇ ಹೆಚ್ಚು ಪ್ರಾಮುಖ್ಯತೆ. ಆದ್ದರಿಂದ ಜಾತಿ ಧರ್ಮ, ದೇವರ ಹೆಸರಿನಲ್ಲಿ ಅವರು ರಾಜಕೀಯ ಮಾಡುತ್ತಾರೆ. ಕಾಂಗ್ರೆಸ್ ಪಕ್ಷ ಬಡವರು ಹಿಂದುಳಿದವರು ಏಳಿಗೆಗಾಗಿ ಶ್ರಮಿಸುವ ಯೋಜನೆಗಳನ್ನು ಅನುಷ್ಠಾನ ಮಾಡುತ್ತಿದೆ ಎಂದರು.

ರಾಜ್ಯ ಸರ್ಕಾರ ನವಂಬರ್ ಬೆಳಗ್ಗೆ ಜಾತಿ ಸಮೀಕ್ಷೆಯ ಜಾತಿ ಜನಗಣತಿಯ ವರದಿಯನ್ನು ಸ್ವೀಕಾರ ಮಾಡುವ ಸಂಭವವಿದೆ. ಕಾಂಗ್ರೆಸ್ ಪಕ್ಷ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇದ್ದು ಆದ್ದರಿಂದ ಶಾಸಕರು ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರು ಬಹಿರಂಗ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾರೆ .ಅದಕ್ಕೆ ಅನುಗುಣವಾಗಿ ಮುಖ್ಯಮಂತ್ರಿ ಮತ್ತು ರಾಜ್ಯ ಸರ್ಕಾರ ತಮ್ಮ ಯೋಜನೆಗಳ ಅನುಷ್ಠಾನ ಮಾಡಲಿದೆ ಎಂದು ಹೇಳಿದರು.

ಬಿಜೆಪಿ ಪಕ್ಷದಲ್ಲಿ ನಿರಂಕುಶಪ್ರಭುತ್ವವಿದ್ದು  ಮೋದಿ ಅವರನ್ನು ಬಿಟ್ಟರೆ ಬೇರೆ ಯಾರು ಮಾತನಾಡುವುದಿಲ್ಲ. ಮೋದಿ 36 ಭಾರಿ ರೋಡ್ ಶೋ ನಡೆಸಿದರೂ ಕಾಂಗ್ರೆಸ್ ಪಕ್ಷಕ್ಕೆ ಈ ಭಾರಿ ರಾಜ್ಯದ ಜನರು 136 ಸ್ಥಾನಗಳನ್ನು ಕಲ್ಪಿಸಿ ಅಧಿಕಾರ ನೀಡಿದ್ದಾರೆ. ಬಡವರ ಮತ್ತು ದೀನದಲಿತರ ಏಳಿಗೆಗಾಗಿ ಮತ್ತು ಎಲ್ಲಾ ವರ್ಗದ ಬಡವರಿಗಾಗಿ 5 ಗ್ಯಾರಂಟಿಗಳನ್ನು ರಾಜ್ಯ ಸರ್ಕಾರ ಘೋಷಣೆ ಮಾಡಿ ಈಗಾಗಲೇ ನಾಲ್ಕು ಗ್ಯಾರೆಂಟಿಗಳನ್ನು ಅನುಷ್ಠಾನ ಮಾಡಿದ್ದು, ಮುಂಬರುವ ಡಿಸೆಂಬರ್ ಅಥವಾ ಜನೇವರಿ ವೇಳೆಗೆ ಯುವ ನಿಧಿ ಯೋಜನೆಯನ್ನು ಅನುಷ್ಠಾನ ಮಾಡಲು ಮುಖ್ಯಮಂತ್ರಿಗಳು ಯೋಜನೆ ರೂಪಿಸಿದ್ದಾರೆ ಎಂದರು.

ಬಿಜೆಪಿ ಬಸವರಾಜ್ ಬೊಮ್ಮಾಯಿ ಅವರ ಆಡಳಿತ ಅವಧಿಯಲ್ಲಿ ಹಿಜಾಬ್, ಹಲಾಲ್ ಕಟ್ ಸೇರಿದಂತೆ ಕೋಮು ಮತ್ತು ದ್ವೇಷದ ಘಟನೆಗಳು ಗಲಭೆಗಳು ಜರುಗಿ ಜನರು ಭಯಭೀತಿಯಲ್ಲಿ ಜೀವನ ನಡೆಸಿದ್ದಾರೆ. ಈಗ ಬೊಮ್ಮಾಯಿ ಕಾಂಗ್ರೆಸ್ ಸರ್ಕಾರವನ್ನು ಟೀಕೆ ಮಾಡುವ ನೈತಿಕತೆ ಇಲ್ಲ. ಸೋಲಿನ ಹತಾಶೆಯಲ್ಲಿ ಜೆಡಿಎಸ್ ಪಕ್ಷದ ಎಚ್.ಡಿ. ಕುಮಾರಸ್ವಾಮಿ ಅವರು ಕಾಂಗ್ರೆಸ್ ಸರ್ಕಾರ ವಿರುದ್ಧ ಮಾತನಾಡುತ್ತಿದ್ದಾರೆ ಎಂದು ಹೇಳಿದರು.

Advertisement

ಇದುವರೆಗೂ ಬಿಜೆಪಿಯನ್ನು ಟೀಕೆ ಮಾಡುತ್ತಿದ್ದ ಕುಮಾರಸ್ವಾಮಿ ಅಧಿಕಾರದ ಆಸೆಗಾಗಿ ಅವರೊಂದಿಗೆ ಕೈಜೋಡಿಸಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ರಾಜ್ಯದ ಬಿಜೆಪಿ ಮುಖಂಡರ ಮೇಲೆ ಪ್ರಧಾನಮಂತ್ರಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರಿಗೆ ವಿಶ್ವಾಸವಿಲ್ಲ. ಆದ್ದರಿಂದ ಇದುವರೆಗೂ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ಮತ್ತು ವಿರೋಧ ಪಕ್ಷದ ನಾಯಕನ ನೇಮಕ ಮಾಡಿಲ್ಲ ಮತ್ತು ರಾಜ್ಯದ ಬಿಜೆಪಿ ಮುಖಂಡರಿಗೆ ಯಾವುದೇ ಗೌರವ ಮರ್ಯಾದೆಯನ್ನು ಕೊಡುತ್ತಿಲ್ಲ ಎಂದರು.

ಬಿಜೆಪಿ ರಾಜ್ಯ ನಾಯಕರಿಗೆ  ಕಾಂಗ್ರೆಸ್ ಪಕ್ಷವನ್ನು ಟೀಕೆ ಮಾಡುವ ನೈತಿಕತೆ ಇಲ್ಲ. ಮುಂಗಾರು ಮಳೆಯ ಕೊರತೆಯಿಂದಾಗಿ ಕೊಪ್ಪಳ ಜಿಲ್ಲೆಯಲ್ಲಿ ಬಹುತೇಕ ತಾಲೂಕುಗಳನ್ನು  ಬರ ಘೋಷಣೆ ಮಾಡಲಾಗಿದೆ. ಈಗಾಗಲೇ ಕೇಂದ್ರದ ಬರ ಅಧ್ಯಾಯನ ತಂಡ ಭೇಟಿ ಕೊಟ್ಟಿದ್ದು ಮುಂಬರುವ ದಿನಗಳಲ್ಲಿ ತಾಲೂಕ ಮಟ್ಟದಲ್ಲಿ ಸಭೆ ನಡೆಸಿ ಬರಗಾಲವನ್ನು ನಿರ್ವಹಣೆ ಮಾಡುವ ಕುರಿತಂತೆ ಚರ್ಚೆ ನಡೆಸಲಾಗುತ್ತದೆ .ಬರಗಾಲ ನಿರ್ವಹಣೆ ಮಾಡಲು ರಾಜ್ಯ ಸರ್ಕಾರದಲ್ಲಿ ಹಣದ ಕೊರತೆ ಇಲ್ಲ ಜನ ಜಾನುವಾರುಗಳಿಗೆ ಕುಡಿಯುವ ನೀರು ಮತ್ತು ಮೇವು ದೊರಕುವಂತೆ ಮಾಡಲಾಗುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next