Advertisement

ರಾಹುಲ್‌ ಗಾಂಧಿ ಪ್ರಧಾನಿ ಮಾಡಲು ಶ್ರಮಿಸಿ

08:51 PM Apr 13, 2019 | Team Udayavani |

ದೇವನಹಳ್ಳಿ: ರಾಷ್ಟ್ರದಲ್ಲಿ ನರೇಂದ್ರ ಮೋದಿ ಸರ್ಕಾರವನ್ನು ಕಿತ್ತೂಗೆದು ಯುಪಿಎ ಸರ್ಕಾರವನ್ನು ಅಧಿಕಾರಕ್ಕೆ ತರುವ ಮೂಲಕ ರಾಹುಲ್‌ ಗಾಂಧಿ ಅವರನ್ನು ಪ್ರಧಾನಿ ಮಾಡಲು ಶ್ರಮಿಸಬೇಕೆಂದು ಕೆಪಿಸಿಸಿ ಹಿಂದುಳಿದ ವರ್ಗದ ಉಪಾಧ್ಯಕ್ಷ ಸಿ.ಜಗನ್ನಾಥ್‌ ತಿಳಿಸಿದರು.

Advertisement

ನಗರದ 10ನೇ ವಾರ್ಡಿನ ನಿಲೇರಿಯಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಗರ ಮುಖಂಡರು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ವೀರಪ್ಪ ಮೊಯ್ಲಿ ಪರ ಹಮ್ಮಿಕೊಂಡಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿದರು.

ಜನರ ಸಮಸ್ಯೆಗೆ ಸ್ಪಂದನೆ: ವೀರಪ್ಪ ಮೊಯ್ಲಿ ಕಳೆದ 10 ವರ್ಷಗಳಿಂದ ಸಂಸದರಾಗಿ ಲೋಕಸಭಾ ಕ್ಷೇತ್ರಕ್ಕೆ ಉತ್ತಮ ಕೊಡುಗೆಯನ್ನು ನೀಡಿದ್ದಾರೆ. ಸಾಮಾನ್ಯ ಜನರು ಸಮಸ್ಯೆ ಎಂದು ಹೇಳಿಕೊಂಡು ಅವರ ಬಳಿ ಹೋದರೆ ತಕ್ಷಣ ಸ್ಪಂದಿಸಿ, ಸಮಸ್ಯೆ ನಿವಾರಿಸುವ ಕೆಲಸ ಮಾಡುತ್ತಿದ್ದಾರೆ. ನೀರಿನ ಬವಣೆ ನೀಗಿಸಲು ಎತ್ತಿನಹೊಳೆ ಯೋಜನೆಯನ್ನು ರೂಪಿಸಿದ್ದು, ತ್ವರಿತಗತಿಯಲ್ಲಿ ಕಾಮಗಾರಿ ನಡೆಯುತ್ತಿದೆ ಎಂದರು.

ಮೋದಿ ಆಡಳಿತದಲ್ಲಿ ಬೆಲೆ ಏರಿಕೆ: ನರೇಂದ್ರ ಮೋದಿ ಸರ್ಕಾರ ಬಂದ ಮೇಲೆ ಬೆಲೆ ಏರಿಕೆ ಹೆಚ್ಚಾಗಿದೆ. ಯುಪಿಎ ಅವಧಿಯಲ್ಲಿ ಕಚ್ಚಾ ತೈಲ ಬೆಲೆ ಅಧಿಕವಾಗಿದ್ದರುರೂ ಬಡವರಿಗೆ ಹೊರೆಯಾಗದಂತೆ ನೋಡಿಕೊಳ್ಳಲು ಗ್ಯಾಸ್‌ ಸಿಲಿಂಡರ್‌ ಬೆಲೆ 350 ರೂ.ಗಿಂತ ಹೆಚ್ಚಾಗದಂತೆ ನೋಡಿಕೊಳ್ಳಲಾಗಿತ್ತು.

ಆದರೆ, ನರೇಂದ್ರ ಮೋದಿ ಸರ್ಕಾರ ಒಂದು ಸಿಲಿಂಡರ್‌ ಬೆಲೆ 900ರೂ. ತನಕ ತೆಗೆದುಕೊಂಡು ಹೋಗಿದೆ. ಮೋದಿ ಸುಳ್ಳು ಆಶ್ವಾಸನೆಗಳಿಗೆ ಜನ ಮೋಡಿಯಾಗುವುದಿಲ್ಲ. ಅವರ ಕತೆ ಪ್ರತಿಯೊಬ್ಬರಿಗೂ ತಿಳಿದೇಯಿದೆ. ಈ ಬಾರಿ ವೀರಪ್ಪ ಮೊಯ್ಲಿ ಅವರನ್ನು ಗೆಲ್ಲಿಸಿದರೆ ಕ್ಷೇತ್ರ ಅಭಿವೃದ್ಧಿ ಪಥದತ್ತ ಸಾಗಲು ಅನುಕೂಲವಾಗುತ್ತದೆ ಎಂದು ಹೇಳಿದರು.

Advertisement

ಮೈತ್ರಿ ಧರ್ಮ ಪಾಲನೆ: ತಾಲೂಕು ಜೆಡಿಎಸ್‌ ಪ್ರಧಾನ ಕಾರ್ಯದರ್ಶಿ ಜಿ.ಎ.ರವೀಂದ್ರ ಮಾತನಾಡಿ, ಮೈತ್ರಿ ಸರ್ಕಾರದಲ್ಲಿ ದೇವನಹಳ್ಳಿ ನಗರಕ್ಕೆ ಹೆಚ್ಚು ಅಭಿವೃದ್ಧಿ ಕೆಲಸಗಳಾಗಿವೆ. ರಾಜ್ಯದಲ್ಲಿ ಕಾಂಗ್ರೆಸ್‌, ಜೆಡಿಎಸ್‌ ಹೊಂದಾಣಿಕೆ ಮಾಡಿಕೊಂಡು ಕಾಂಗ್ರೆಸ್‌ಗೆ 21, ಜೆಡಿಎಸ್‌ಗೆ 7 ಸ್ಥಾನಗಳನ್ನು ಬಿಟ್ಟುಕೊಟ್ಟಿವೆ. ಅವರ ಅಭ್ಯರ್ಥಿ ಇರುವ ಕಡೆ ನಾವು ಕೆಲಸ ಮಾಡುತ್ತಿದ್ದೇವೆ. ನಮ್ಮ ಅಭ್ಯರ್ಥಿ ಇರುವ ಕಡೆ ಅವರು ಕೆಲಸ ಮಾಡುತ್ತಿದ್ದಾರೆ. ಶತಾಯಗತಾಯ ವೀರಪ್ಪ ಮೊಯ್ಲಿ ಅವರನ್ನು ಗೆಲ್ಲಿಸಿಕೊಳ್ಳಲಾಗುವುದು. ಮೈತ್ರಿ ಧರ್ಮವನ್ನು ಎಲ್ಲರೂ ಒಗ್ಗಟ್ಟಾಗಿ ಪಾಲಿಸುತ್ತಿದ್ದೇವೆ ಎಂದು ತಿಳಿಸಿದರು.

ಟೌನ್‌ ಜೆಡಿಎಸ್‌ ಅಧ್ಯಕ್ಷ ಮುನಿನಂಜಪ್ಪ ಮಾತನಾಡಿ, ರಾಜ್ಯದಲ್ಲಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಮುಖ್ಯಮಂತ್ರಿ ಕುಮಾರಸ್ವಾಮಿ ಜನಪರ ಹಾಗೂ ರೈತಪರ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಕಾಂಗ್ರೆಸ್‌, ಜೆಡಿಎಸ್‌ ಮುಖಂಡರು ಮತ್ತು ಕಾರ್ಯಕರ್ತರು ಬೆಳಗ್ಗೆಯಿಂದಲೇ ಪ್ರತಿ ವಾರ್ಡ್‌ಗಳಲ್ಲಿ ಮೈತ್ರಿ ಅಭ್ಯರ್ಥಿ ವೀರಪ್ಪ ಮೊಯ್ಲಿ ಪರ ಪ್ರಚಾರ ನಡೆಸುತ್ತಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಪುರಸಭಾ ಮಾಜಿ ಅಧ್ಯಕ್ಷರಾದ ಎಂ.ಮೂರ್ತಿ, ಶಾರದಮ್ಮ, ಮಾಜಿ ಉಪಾಧ್ಯಕ್ಷೆ ಆಶಾರಾಣಿ, ಮಾಜಿ ಸದಸ್ಯರಾದ ಜಿ.ಎನ್‌.ವೇಣುಗೋಪಾಲ್‌, ವಿ.ಗೋಪಾಲಕೃಷ್ಣ, ಡಿ.ಎನ್‌.ವೆಂಕಟೇಶ್‌, ಸೋಮಶೇಖರ್‌, ಎಂ.ಕುಮಾರ್‌, ರವಿಕುಮಾರ್‌, ಜೆಡಿಎಸ್‌ ಟೌನ್‌ ಪ್ರಧಾನ ಕಾರ್ಯದರ್ಶಿ ಸಾಯಿಕುಮಾರ್‌ ಬಾಬು, ಮುಖಂಡರಾದ ಸೋಮಣ್ಣ, ಸಿ.ಎಂ.ರಮೇಶ್‌, ರಾಜಣ್ಣ, ಕುಮಾರ್‌, ಅನಿಲ್‌ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next