ನವದೆಹಲಿ: ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಒಂದು ಲೀಟರ್ ಗೋಧಿ ಹಿಟ್ಟಿನ ಬೆಲೆ 40 ರೂಪಾಯಿ ಆಗಿದೆ ಎಂದು ಹೇಳುವ ಮೂಲಕ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಗೊಳಗಾಗಿದ್ದಾರೆ.
ಇದನ್ನೂ ಓದಿ:ಸಿಇಟಿ ರ‍್ಯಾಂಕಿಂಗ್ ಗೊಂದಲ: ಮತ್ತೆ ಕೋರ್ಟ್ ಮೊರೆ ಹೋಗಲು ಸರ್ಕಾರದ ನಿರ್ಧಾರ
ರಾಮ್ ಲೀಲಾ ಮೈದಾನದಲ್ಲಿ ಬೆಲೆ ಏರಿಕೆ ವಿರುದ್ಧ ಆಯೋಜಿಸಿದ್ದ ಪ್ರತಿಭಟನಾ ಸಮಾವೇಶವನ್ನು ಉದ್ದೇಶಿಸಿ ಮಾತನಾಡುತ್ತಿದ್ದ ವೇಳೆ, ರಾಹುಲ್ ಗಾಂಧಿ ಮಾರುಕಟ್ಟೆಯಲ್ಲಿ ದಿನಬಳಕೆ ವಸ್ತುಗಳ ಬೆಲೆ ಯಾವ ರೀತಿಯಲ್ಲಿ ಏರಿಕೆಯಾಗುತ್ತಿದೆ ಎಂಬ ಬಗ್ಗೆ ಉಲ್ಲೇಖಿಸಿದ್ದರು. ಈ ಮೊದಲು ಒಂದು ಲೀಟರ್ ಗೋಧಿ ಬೆಲೆ 22 ರೂಪಾಯಿ ಇತ್ತು, ಇದೀಗ ಒಂದು ಲೀಟರ್ ಗೋಧಿಗೆ 40 ರೂಪಾಯಿ ಆಗಿರುವುದಾಗಿ ತಿಳಿಸಿದ್ದರು.
ಈ ಬಗ್ಗೆ ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ತಿರುಗೇಟು ನೀಡಿದ್ದು, ರಾಹುಲ್ ಗಾಂಧಿಗೆ ಗೋಧಿ ಕೆಜಿಯಲ್ಲಿ ಮಾರಾಟ ಮಾಡುತ್ತಾರೋ, ಲೀಟರ್ ಗಳಲ್ಲಿಯೋ ಎಂಬುದು ತಿಳಿದಿಲ್ಲ ಎಂದು ವ್ಯಂಗ್ಯವಾಡಿದ್ದರು.
ಹಣದುಬ್ಬರದ ಬಗ್ಗೆ ಮಾತನಾಡಿರುವ ರಾಹುಲ್ ಗಾಂಧಿ ಗೋಧಿಯನ್ನು ಲೀಟರ್ ನಲ್ಲಿ ಮಾರಾಟ ಮಾಡುವುದಾಗಿ ಹೇಳಿದ್ದಾರೆ. ರಾಹುಲ್ ಗೆ ಬಟಾಟೆ ಹೇಗೆ ಬೆಳೆಯುತ್ತಾರೆ ಎಂಬುದು ಗೊತ್ತಿಲ್ಲ, ಅಷ್ಟೇ ಅಲ್ಲ ಗೋಧಿ ಗಟ್ಟಿ ಪದಾರ್ಥವೋ, ದ್ರವ ಪದಾರ್ಥವೋ ಎಂಬುದು ತಿಳಿದಿಲ್ಲ ಎಂದು ಪಾತ್ರಾ ಟೀಕಿಸಿದರು. ರಾಹುಲ್ ಗಾಂಧಿ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.