ಹೊಸದಿಲ್ಲಿ: ಭಾರತದ ಪ್ರಜಾಪ್ರಭುತ್ವದ ಬಗ್ಗೆ ಲಂಡನ್ ನಲ್ಲಿ ಮಾಡಿದ ಟೀಕೆಗಳ ಬಗ್ಗೆ ಬಿಜೆಪಿಯ ಕೋಪವನ್ನು ಎದುರಿಸುತ್ತಿರುವ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ವಿದೇಶಾಂಗ ಸಚಿವ ಎಸ್ ಜೈಶಂಕರ್ ಅಧ್ಯಕ್ಷತೆಯಲ್ಲಿ ನಡೆದ ಭಾರತದ ಜಿ-20 ಪ್ರೆಸಿಡೆನ್ಸಿ ಕುರಿತು ಸಮಾಲೋಚನಾ ಸಮಿತಿ ಸಭೆಯಲ್ಲಿ ಸುದೀರ್ಘವಾಗಿ ಮಾತನಾಡಿದರು.
ಮೂಲಗಳ ಪ್ರಕಾರ ರಾಹುಲ್ ಗಾಂಧಿ ಅವರು ಲಂಡನ್ ಭೇಟಿಯ ಸಂದರ್ಭದಲ್ಲಿ ಮಾಡಿದ ಹೇಳಿಕೆಗಳನ್ನು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ಮಧ್ಯ ಪ್ರವೇಶಿಸುವಂತೆ ಯಾವುದೇ ದೇಶವನ್ನು ಕೇಳಲಿಲ್ಲ ಎಂದು ಹೇಳಿದರು.
ನಾನು ಭಾರತದ ಪ್ರಜಾಪ್ರಭುತ್ವದ ಬಗ್ಗೆ ಮಾತ್ರ ಪ್ರಶ್ನೆಗಳನ್ನು ಎತ್ತಿದ್ದೇನೆ. ಇದು ಆಂತರಿಕ ವಿಷಯ ಎಂದು ನಾನು ನಂಬುತ್ತೇನೆ. ಇದನ್ನು ನಾವೇ ಪರಿಹರಿಸುತ್ತೇವೆ ಎಂದು ರಾಹುಲ್ ಹಾಜರಿದ್ದ ನಾಯಕರಿಗೆ ಹೇಳಿದರು.
ಅಲ್ಲದೆ ಬಿಜೆಪಿ ಬಿಂಬಿಸುತ್ತಿರುವ ರೀತಿಯಲ್ಲಿ ನಾನೇನು ಹೇಳಿಲ್ಲ. ಬಿಜೆಪಿ ತನ್ನನ್ನು ದೇಶ ದ್ರೋಹಿ ಎಂದು ಬಿಂಬಿಸುತ್ತಿದೆ ಎಂದು ರಾಹುಲ್ ಹೇಳಿದರು.
ರಾಹುಲ್ ಗಾಂಧಿಯವರ ಟೀಕೆಗೆ ಬಿಜೆಪಿ ಸಂಸದರು ಪ್ರತ್ಯುತ್ತರ ನೀಡಿದ್ದು, ಈ ವಿಷಯದ ಬಗ್ಗೆ ಮಾತನಾಡಲು ಇದು ಸೂಕ್ತ ವೇದಿಕೆಯಲ್ಲ ಎಂದಿದೆ.