Advertisement

ರಾಜ್ಯ ನಾಯಕರಿಂದ ‘ಮಾಸ್ಟರ್‌ ಪ್ಲ್ಯಾನ್‌’ ಕೇಳಿದ ರಾಹುಲ್‌

10:03 AM Mar 31, 2022 | Team Udayavani |

ಬೆಂಗಳೂರು: ಮುಂದಿನ ವರ್ಷ ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆ ಎದುರಿಸುವ ನಿಟ್ಟಿನಲ್ಲಿ ರಾಜ್ಯ ನಾಯಕರು ರೂಪಿಸಿರುವ ಮಾಸ್ಟರ್‌ ಪ್ಲ್ರಾನ್‌ ಏನು ಎಂಬ ಬಗ್ಗೆ ರಾಹುಲ್‌ಗಾಂಧಿ ಮಾಹಿತಿ ಪಡೆಯಲಿದ್ದಾರೆ.

Advertisement

ರಾಹುಲ್‌ ರಾಜ್ಯ ಪ್ರವಾಸ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಈ ಕುರಿತು ಪ್ರತ್ಯೇಕವಾಗಿ ವಿವರ ಪಡೆಯಲಿದ್ದು, ನಂತರ ರಾಜ್ಯದ 224 ಕ್ಷೇತ್ರಗಳಲ್ಲೂ ಆಂತರಿಕ ಸಮೀಕ್ಷೆ ನಡೆಸಲು ನಿರ್ಧರಿಸಲಾಗಿದೆ.

ಪಂಚರಾಜ್ಯ ಫ‌ಲಿತಾಂಶ ನಂತರ ಕಳವಳಗೊಂಡಿರುವ ರಾಹುಲ್‌ ಗಾಂಧಿ ಕರ್ನಾಟಕದ ವಿಧಾನಸಬೆ ಚುನಾವಣೆ ಮೇಲೆ ಹೆಚ್ಚು ಒತ್ತು ನೀಡಲು ವಿಶೇಷ ಕಾರ್ಯತಂತ್ರ ರೂಪಿಸಲು ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದೇ ಕಾರಣಕ್ಕೆ ಶಾಸಕರು, ಸಂಸದರು, ಕಳೆದ ಚುನಾವಣೆಯಲ್ಲಿ ಪರಾಜಿತರಾದ ಅಭ್ಯರ್ಥಿಗಳ ಜತೆಯೂ ಸಂವಾದ ನಡೆಸಲು ತೀರ್ಮಾ ನಿಸಿದ್ದು ಆಯಾ ಕ್ಷೇತ್ರದ ಸ್ಥಿತಿಗತಿ ಬಗ್ಗೆಯೂ ಮಾಹಿತಿ ಪಡೆಯಲಿದ್ದಾರೆ. ಅದರ ಆಧಾರದ ಮೇಲೆ ರಾಜ್ಯ ನಾಯಕರ ಜತೆ ಚರ್ಚಿಸಿ ರಣತಂತ್ರ ರೂಪಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಮೇ ನಂತರ ರಾಜ್ಯಪ್ರವಾಸಕ್ಕೂ ರೂಪುರೇಷೆ ನಿಗದಿಯಾಗಲಿದೆ ಎಂದು ತಿಳಿದು ಬಂದಿದೆ.

ರಾಜ್ಯದಲ್ಲಿನ ಇತ್ತೀಚಿನ ವಿದ್ಯಮಾನಗಳ ಹಿನ್ನೆಲೆಯಲ್ಲಿ ಪಕ್ಷದ ಮೇಲೆ ಉಂಟಾಗಬಹುದಾದ ಪರಿಣಾಮ, ನಾಯಕರ ಹೇಳಿಕೆಯಿಂದ ಆಗಬಹುದಾದ ರಾಜಕೀಯ ಲಾಭ-ನಷ್ಟದ ಕುರಿತು ಚರ್ಚಿಸಲು ರಾಜ್ಯ ಮುಖಂಡರನ್ನು ದೆಹಲಿಗೆ ಕರೆಸಿಕೊಂಡು ಚರ್ಚಿಸಲು ರಾಹುಲ್‌ ನಿರ್ಧರಿಸಿದ್ದರಾದರೂ ಶಾಸಕರು-ಮಾಜಿ ಶಾಸಕರ ಜತೆ ಮುಖಾಮುಖೀ ಸಂವಾದ ನಡೆಸಿದರೆ ವಾಸ್ತವಾಂಶ ತಿಳಿಯುತ್ತದೆ ಎಂದು ಹಿರಿಯ ನಾಯಕರು ಹೇಳಿದ್ದರಿಂದ ಬೆಂಗಳೂರಿಗೆ ಬಂದು ಸಭೆ ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಲಾಗಿದೆ.

Advertisement

ದೂರು-ದುಮ್ಮಾನ: ಈ ಮಧ್ಯೆ, ಬಿಜೆಪಿಯನ್ನು ಎದುರಿಸುವ ವಿಚಾರದಲ್ಲಿ ರಾಜ್ಯ ನಾಯಕರು ಒಗ್ಗಟ್ಟು ಪ್ರದರ್ಶಿಸುತ್ತಿಲ್ಲ ಎಂದು ರಾಹುಲ್‌ಗೆ ದೂರುಪಟ್ಟಿ ಸಲ್ಲಿಸಲು ಹಿರಿಯ ನಾಯಕರು ಸಜ್ಜಾಗಿದ್ದಾರೆ. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ಬಣ ರಾಜಕೀಯ ಹಾಗೂ ಕೆಲವು ವಿಚಾರ ಹಾಗೂ ಸಂದರ್ಭಗಳಲ್ಲಿ ನಾನೊಂದು ತೀರ ನೀನೊಂದು ತೀರ ಎಂಬ ವರ್ತನೆಯಿಂದ ಇತರೆ ನಾಯಕರು ಇಕ್ಕಟ್ಟಿಗೆ ಸಿಲುಕುವಂತಾಗಿದೆ. ಪ್ರಮುಖ ವಿಚಾರಗಳ ಚರ್ಚೆಗೆ ಸಮನ್ವಯ ಸಮಿತಿ ರಚನೆ ಮಾಡುವುದು ಸೂಕ್ತ ಎಂಬುದು ಹಿರಿಯ ನಾಯಕ ವಾದ ಎಂದು ಹೇಳಲಾಗಿದೆ.

ಇದನ್ನೂ ಓದಿ:ಕೇಜ್ರಿವಾಲ್ ರನ್ನು ಸೋಲಿಸಲು ಅಸಾಧ್ಯ, ಅದಕ್ಕೆ ಬಿಜೆಪಿ ಕೊಲ್ಲಲು ಬಯಸುತ್ತಿದೆ: ಸಿಸೋಡಿಯಾ

ಆದರೆ, ಕೆಪಿಸಿಸಿ ಅಧ್ಯಕ್ಷರು, ಉಭಯ ಸದನಗಳ ಪ್ರತಿಪಕ್ಷ ನಾಯಕರು, ಪ್ರಚಾರ ಸಮಿತಿ ಆಧ್ಯಕ್ಷರು, ಕಾರ್ಯಾಧ್ಯಕ್ಷರು ಇರುವಾಗ ಮತ್ತೆ ಸಮನ್ವಯ ಸಮಿತಿ ಅಗತ್ಯವಿಲ್ಲ. ಹಿರಿಯರಾದ ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್‌.ಮುನಿಯಪ್ಪ, ರೆಹಮಾನ್‌ ಖಾನ್‌ ಅವರ ಸಲಹೆ-ಸೂಚನೆ ಪಡೆಯಲಾಗುತ್ತಿದೆ. ಮತ್ತೂಂದು ಸಮನ್ವಯ ಸಮಿತಿ ಯಾಕೆ ಎಂಬುದು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ಅವರ ವಾದ ಎಂದು ತಿಳಿದು ಬಂದಿದೆ.

ಪಟ್ಟಿ ಬಿಡುಗಡೆ “ಭಾಗ್ಯ”: ರಾಹುಲ್‌ ಗಾಂಧಿ ಅವರ ರಾಜ್ಯ ಪ್ರವಾಸದ ನಂತರ ಏಪ್ರಿಲ್‌ ಮೊದಲ ವಾರದಲ್ಲಿ ಕೆಪಿಸಿಸಿ ಪದಾಧಿಕಾರಿಗಳ ಪಟ್ಟಿಗೆ ಬಿಡುಗಡೆ ಭಾಗ್ಯ ದೊರೆಯಲಿದೆ. ಸುಮಾರು 180 ರಿಂದ 200 ಪದಾಧಿಕಾರಿಗಳ ನೇಮಕಕ್ಕೆ ಹೈಕಮಾಂಡ್‌ ಒಪ್ಪಿಗೆ ಪಡೆಯಲಾಗಿದ್ದು, ಡಿ.ಕೆ.ಶಿವಕುಮಾರ್‌, ಸಿದ್ದರಾಮಯ್ಯ ಅವರು ನೀಡಿದ್ದ ಪಟ್ಟಿಯ ಆಧಾರದಲ್ಲಿ ಕೆ.ಸಿ.ವೇಣು ಗೋಪಾಲ್‌, ರಣದೀಪ್‌ ಸಿಂಗ್‌ ಸುರ್ಜೇವಾಲಾ ಅಂತಿಮ ಪಟ್ಟಿ ಸಿದ್ಧಪಡಿಸಿ ಇತ್ತೀಚೆಗೆ ಡಿ.ಕೆ.ಶಿವಕುಮಾರ್‌ ದೆಹಲಿಗೆ ಹೋಗಿದ್ದಾಗ ರಾಹುಲ್‌ ಗಾಂಧಿಯವರ ಗಮನಕ್ಕೆ ತಂದು ಒಪ್ಪಿಗೆ ಪಡೆದುಕೊಂಡಿದ್ದಾರೆ. ಯುಗಾದಿ ನಂತರ ಬಿಡುಗಡೆಯಾಗಲಿದೆ ಎಂದು ಹೇಳಲಾಗಿದೆ.

ಎಸ್‌.ಲಕ್ಷ್ಮಿನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next