Advertisement

Rae Bareli ರಣಕಣ; ನಾಮಪತ್ರ ಸಲ್ಲಿಸಿದ ರಾಹುಲ್ ಗಾಂಧಿ: ಗೆಲುವು ಸುಲಭವೇ?

08:15 PM May 03, 2024 | Team Udayavani |

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಶುಕ್ರವಾರ ಉತ್ತರ ಪ್ರದೇಶದ ರಾಯ್ ಬರೇಲಿ ಕ್ಷೇತ್ರದಿಂದ ತಮ್ಮ ನಾಮಪತ್ರ ಸಲ್ಲಿಸಿದ್ದಾರೆ.ಕಳೆದ ಎರಡು ದಶಕಗಳಿಂದ ತಾಯಿ ಸೋನಿಯಾ ಗಾಂಧಿಯವರು ಪ್ರತಿನಿಧಿಸುತ್ತಿರುವ ಕ್ಷೇತ್ರದಿಂದ ರಾಹುಲ್ ಉಮೇದುವಾರಿಕೆಯನ್ನು ಸಲ್ಲಿಸಿದ್ದಾರೆ. ಸೋನಿಯಾ ಇತ್ತೀಚೆಗೆ ರಾಜ್ಯಸಭೆಗೆ ಆಯ್ಕೆಯಾಗಿದ್ದರು.

Advertisement

ರಾಹುಲ್ ಗಾಂಧಿ 2019 ರ ಚುನಾವಣೆಯಲ್ಲಿ ಪಕ್ಕದ ಅಮೇಥಿ ಕ್ಷೇತ್ರದಿಂದ ಬಿಜೆಪಿಯ ಸ್ಮೃತಿ ಇರಾನಿ ವಿರುದ್ಧ ಸೋತಿದ್ದರು, ಆದರೆ ಕೇರಳದ ವಯನಾಡ್‌ನಿಂದ ಗೆದ್ದಿದ್ದರು ಅವರು ಈ ಬಾರಿಯೂ ವಯನಾಡ್ ನಲ್ಲಿ ಸ್ಪರ್ಧಿಸಿದ್ದು, ಅಲ್ಲಿ ಈಗಾಗಲೇ ಮತದಾರರು ಅವರ ಭವಿಷ್ಯ ಬರೆದಿದ್ದಾರೆ.

ನಾಮಪತ್ರ ಸಲ್ಲಿಸಲು ಕೊನೆಯ ದಿನ ಮಧ್ಯಾಹ್ನ 2 ಗಂಟೆ ಸುಮಾರಿಗೆ ಜಿಲ್ಲಾ ಚುನಾವಣಾಧಿಕಾರಿ ಹರ್ಷಿತಾ ಮಾಥುರ್ ಅವರಿಗೆ ಪತ್ರ ಹಸ್ತಾಂತರಿಸುವ ವೇಳೆ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ, ರಾಬರ್ಟ್ ವಾದ್ರಾ ಕೂಡ ಅವರೊಂದಿಗೆ ಇದ್ದರು. ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಕುಟುಂಬದ ಜತೆಗಿದ್ದರು. ಮಿತ್ರ ಪಕ್ಷ ಸಮಾಜವಾದಿ ಪಕ್ಷ ಮತ್ತು ಸಾವಿರಾರು ಕಾಂಗ್ರೆಸ್ ಕಾರ್ಯಕರತರು ರಾಹುಲ್ ಪರ ಜೈಕಾರ ಹಾಕಿದ್ದಾರೆ.ನಾಮಪತ್ರ ಸಲ್ಲಿಕೆಗೂ ಮೊದಲು ಪೂಜೆ ಸಲ್ಲಿಸಿ ಗಮನ ಸೆಳೆದರು.

ಬಿಜೆಪಿ ರಣತಂತ್ರ
ರಾಯ್ ಬರೇಲಿಯಲ್ಲಿ ಮೇ 20 ರಂದು ಮತದಾನ ನಡೆಯಲಿದೆ. ಕಾಂಗ್ರೆಸ್ ಅಭ್ಯರ್ಥಿ ಘೋಷಣೆಗೂ ಮೊದಲು ಬಿಜೆಪಿ ಉತ್ತರಪ್ರದೇಶದ ಹಾಲಿ ಸಚಿವ ದಿನೇಶ್ ಸಿಂಗ್ ಅವರನ್ನು ಮತ್ತೆ ಕಣಕ್ಕಿಳಿಸಿದೆ.2019 ರಲ್ಲೂ ಕ್ಷೇತ್ರದಿಂದ ದಿನೇಶ್ ಸಿಂಗ್ ಅವರೇ ಬಿಜೆಪಿ ಅಭ್ಯರ್ಥಿಯಾಗಿದ್ದರು. ಈ ಬಾರಿಯ ಸ್ಪರ್ಧೆ ಹೆಚ್ಚು ನಿರ್ಣಾಯಕವಾಗಿದ್ದು, ದಿನೇಶ್ ಪ್ರತಾಪ್ ಸಿಂಗ್ ಅವರು 2010, 2016 ಮತ್ತು 2022 ರಲ್ಲಿ ಮೂರು ಬಾರಿ ಉತ್ತರ ಪ್ರದೇಶ ವಿಧಾನ ಪರಿಷತ್ತಿನ ಸದಸ್ಯರಾಗಿ ಆಯ್ಕೆಯಾಗಿದ್ದು, ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋನಿಯಾ ಗಾಂಧಿ ವಿರುದ್ಧ ಸ್ಪರ್ಧಿಸಿ ಗರಿಷ್ಠ ಮತಗಳನ್ನು ಪಡೆದಿದ್ದರು. ಸೋನಿಯಾ 534,918 ಮತಗಳನ್ನು ಪಡೆದಿದ್ದರೆ, ಸಿಂಗ್ 367,740 ಮತಗಳನ್ನು ಪಡೆದಿದ್ದರು.

Advertisement

ಐದು ವರ್ಷಕ್ಕೊಮ್ಮೆ ಬಿಜೆಪಿ ಮತ ಪ್ರಮಾಣವನ್ನು ಗಣನೀಯವಾಗಿ ಏರಿಸಿಕೊಳ್ಳುತ್ತಲೇ ಹೋಗಿರುವುದು ಕಾಂಗ್ರೆಸ್ ಗೆ ದೊಡ್ಡ ಸವಾಲಾಗಿದೆ. 2014 ರಲ್ಲಿ ಸೋನಿಯಾ ಅವರು 526,434 ಮತಗಳನ್ನು ಪಡೆದು 352,713 ಮತಗಳ ಅಂತರದ ಭಾರೀ ಗೆಲುವು ಸಾಧಿಸಿದ್ದರು. ಬಿಜೆಪಿ ಅಭ್ಯರ್ಥಿ ಅಜಯ್ ಅಗರ್ವಾಲ್ 173,721 ಮತಗಳನ್ನು ಪಡೆದಿದ್ದರು.

2009 ರಲ್ಲಿ ಮೂರನೇ ಸ್ಥಾನದಲ್ಲಿದ್ದ ಬಿಜೆಪಿ ಕೇವಲ 25,444 ಸಾವಿರ ಮತಗಳನ್ನು ಮಾತ್ರ ಪಡೆದು ಠೇವಣಿ ಕಳೆದುಕೊಂಡಿತ್ತು. ಆಗ ಸೋನಿಯಾ ಗಾಂಧಿ ಅವರಿಗೆ ಬಿಎಸ್ ಪಿ ಅಭ್ಯರ್ಥಿ ಪ್ರತಿಸ್ಪರ್ಧಿಯಾಗಿದ್ದು 372,165 ಮತಗಳ ಅಂತರದ ಗೆಲುವು ಸಾಧಿಸಿದ್ದರು.

1996 ಮತ್ತು 1998 ರಲ್ಲಿ ಬಿಜೆಪಿ ಅಭ್ಯರ್ಥಿ ಅಶೋಕ್ ಸಿಂಗ್ ಗೆಲುವು ಸಾಧಿಸಿದ ಇತಿಹಾಸವೂ ಇತ್ತು. ಆಬಳಿಕ ಕ್ಷೇತ್ರದಲ್ಲಿ ಅಸ್ಥಿತ್ವ ಕಳೆದುಕೊಂಡಿತ್ತು. ಸದ್ಯ ಮೋದಿ ಅಲೆ, ಯೋಗಿ ಆದಿತ್ಯನಾಥ್ ಅವರ ಪ್ರಭಾವ ಮತ್ತು ಪ್ರಬಲ ಅಭ್ಯರ್ಥಿ, ಕಾರ್ಯಕರ್ತರ ಬಲದೊಂದಿಗೆ ಬಲಾಢ್ಯ ಶಕ್ತಿಯೊಂದಿಗೆ ರಾಹುಲ್ ಗಾಂಧಿ ಅವರಿಗೆ ಸವಾಲೊಡ್ಡಿದೆ.

ಕ್ಷೇತ್ರ ವ್ಯಾಪ್ತಿಯ ಐದು ಕ್ಷೇತ್ರಗಳಲ್ಲಿ ನಾಲ್ಕರಲ್ಲಿ ಸಮಾಜವಾದಿ ಪಕ್ಷದ ಶಾಸಕರಿದ್ದು, ಒಂದರಲ್ಲಿ ಬಿಜೆಪಿ ಶಾಸಕಿಯಿದ್ದಾರೆ. 17% ಮತ ಏರಿಸಿಕೊಂಡು ಬಿಜೆಪಿ ಸೋನಿಯಾ ಗಾಂಧಿ ಅವರಿಗೆ ಸವಾಲೊಡ್ಡಿತ್ತು. ಈ ಬಾರಿ ಮತ್ತೆ ಮತ ಪ್ರಮಾಣ ಏರಿಕೆ ಮಾಡಿಕೊಳ್ಳುವ ಎಲ್ಲಾ ಸಾಧ್ಯತೆಗಳಿದ್ದು ರಾಹುಲ್ ಗಾಂಧಿ ಅವರ ಎದುರು ಕಠಿನ ಸವಾಲು ಎದುರಾಗುವುದು ನಿಶ್ಚಿತ.

ದಿನೇಶ್ ಸಿಂಗ್ ಸಚಿವರಾಗಿರುವುದು, ಯೋಗಿ ಆದಿತ್ಯನಾಥ್ ಅವರ ವರ್ಚಸ್ಸು, ಮೋದಿ ಅವರ ಪ್ರಭಾವ ಕೆಲಸ ಮಾಡುವ ಸಾಧ್ಯತೆ ಇದ್ದು, ಬಿಜೆಪಿಯ ಯುವ ಕಾರ್ಯಕರ್ತರ ಉತ್ಸಾಹವೂ ಈ ಬಾರಿ ಕಾಂಗ್ರೆಸ್ ಪಾಲಿಗೆ ಸವಾಲಾಗಿ ಪರಿಣಮಿಸಲಿದೆ.

ಅಮೆಥಿಯಂತೆ ಇಲ್ಲಿಯೂ ಜಿದ್ದಾಜಿದ್ದಿನ ಹೋರಾಟ

ಅಮೇಥಿಯಲ್ಲಿ ರಾಹುಲ್ ಗಾಂಧಿ ಅವರಿಗೆ 2019 ರಲ್ಲಿ ನೀಡಿದ ಶಾಕ್ ನೀಡಲು ಬಿಜೆಪಿ ಹವಣಿಕೆಯಲ್ಲಿದ್ದು, ಈಗಾಗಲೇ ರಣತಂತ್ರ ಆರಂಭಿಸಿದೆ. ಅಮೇಥಿಯಲ್ಲಿ 2014 ರಲ್ಲಿ 1,07,903 ಮತಗಳ ಅಂತರದಿಂದ ಗೆದ್ದಿದ್ದ ರಾಹುಲ್ 2019 ರಲ್ಲಿ 55,120 ಮತಗಳ ಅಂತರದಿಂದ ಸ್ಮೃತಿ ಇರಾನಿ ಅವರ ಎದುರು ಆಘಾತಕಾರಿ ಸೋಲು ಅನುಭವಿಸಿದ್ದರು.

ರಾಯ್ ಬರೇಲಿಯಲ್ಲೂ ಈ ಬಾರಿ ಜಿದ್ದಾಜಿದ್ದಿನ ಸ್ಪರ್ಧೆ ನಡೆಯುತ್ತಿದ್ದು, ದೇಶದ ಹೈ ವೋಲ್ಟೇಜ್ ಕ್ಷೇತ್ರದಲ್ಲಿ ಇದು ಒಂದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next