ಮುಂಬೈ: ಕೆಲವು ಕ್ರಿಕೆಟಿಗರು ತಮ್ಮ ಆಟದಿಂದ ಮಹಾತ್ಮರಾಗಿರುತ್ತಾರೆ. ಇನ್ನು ಕೆಲವರು ಆಟದ ಜೊತೆಗೆ ವ್ಯಕ್ತಿತ್ವದಿಂದಲೂ ಮಹಾತ್ಮರಾಗುತ್ತಾರೆ. ಅಂತಹದ್ದರಲ್ಲಿ ಭಾರತ ಕ್ರಿಕೆಟ್ ಕಂಡ ಮಹಾನ್ ಕ್ರಿಕೆಟಿಗರಲ್ಲಿ ಒಬ್ಬರಾಗಿರುವ ರಾಹುಲ್ ದ್ರಾವಿಡ್ ಕೂಡ ಒಬ್ಬರು.
ಇತ್ತೀಚೆಗೆ ಭಾರತ 19 ವಯೋಮಿತಿ ಕ್ರಿಕೆಟ್ ತಂಡ ವಿಶ್ವಕಪ್ ಗೆದ್ದಾಗ ಬಿಸಿಸಿಐ ಭಾರೀ ನಗದು ಮೊತ್ತ ಘೋಷಣೆ ಮಾಡಿತ್ತು. ಈ ವೇಳೆ ಸ್ವತಃ ತಮಗೇ ಗರಿಷ್ಠ ಹಣ ನೀಡಿದ್ದರೂ ದ್ರಾವಿಡ್ ಎಲ್ಲರಿಗೂ ಒಂದೇ ತೆರನಾಗಿ ನಗದು ಇರಲಿ ಎಂದು ಆಗ್ರಹಿಸಿದ್ದರು. ಇದರ ಮುಂದುವರಿದ ಭಾಗವೆಂದರೆ ದ್ರಾವಿಡ್ ತಮಗೆ ನೀಡಲ್ಪಟ್ಟ 50 ಲಕ್ಷ ರೂ. ಹಣದಲ್ಲಿ 25 ಲಕ್ಷ ರೂ. ಬಿಟ್ಟು ಬಿಡಲು ನಿರ್ಧರಿಸಿದ್ದಾರೆಂಬುದು! ಮೇಲಿನ ಬೆಳವಣಿಗೆಯನ್ನು ಬಿಸಿಸಿಐ ಮೂಲಗಳು ಖಚಿತಪಡಿಸಿವೆ.
ತಂಡ ವಿಶ್ವಕಪ್ ಗೆದ್ದಾಗ ಬಿಸಿಸಿಐ ತರಬೇತುದಾರ ದ್ರಾವಿಡ್‌ಗೆ 50 ಲಕ್ಷ ರೂ., ಸದಸ್ಯರಿಗೆ ತಲಾ 30 ಲಕ್ಷ ರೂ., ಸಹಾಯಕ ಸಿಬ್ಬಂದಿಗೆ ತಲಾ 20 ಲಕ್ಷ ರೂ. ಘೋಷಿಸಿತ್ತು. ಇದನ್ನು ವಿರೋಧಿಸಿರುವ ದ್ರಾವಿಡ್ ನಗದು ಮೊತ್ತದಲ್ಲಿ ಸಮಾನತೆ ತರಲು ತಮ್ಮದೇ ಹಣದಲ್ಲಿ 25 ಲಕ್ಷ ರೂ. ಬಿಡಲು ನಿರ್ಧರಿಸಿದ್ದಾರೆ. ಅದರ ಬದಲಿಗೆ ತಂಡದ ಶ್ರೇಯಸ್ಸಿಗಾಗಿ ದುಡಿದ ಎಲ್ಲ ಸಹಾಯಕ ಸಿಬ್ಬಂದಿಗೂ ತಲಾ 25 ಲಕ್ಷ ರೂ. ನೀಡಲು ಆಗ್ರಹಿಸಿದ್ದಾರೆ. ಬರೀ ತಂಡದೊಂದಿಗೆ ತೆರಳಿದ ಸಿಬ್ಬಂದಿ ಮಾತ್ರವಲ್ಲ ಪ್ರವಾಸದ ವೇಳೆ ಇರದ ಅದಕ್ಕೂ ಮುನ್ನ ತಂಡಕ್ಕಾಗಿ ಪರಿಶ್ರಮ ಹಾಕಿದ ಎಲ್ಲರಿಗೂ ಈ ಮೊತ್ತ ಸಿಗಲು ಅವರ ಆಗ್ರಹವೇ ಕಾರಣವಾಗಿದೆ.
ಈ ನಡೆಯಿಂದ ಕಳೆದ ವರ್ಷ ತಂಡದೊಂದಿಗೆ ಪ್ರಯಾಣಿಸಿ ಅಲ್ಲೇ ಮೃತಪಟ್ಟಿದ್ದ ಸಹಾಯಕ ಸಿಬ್ಬಂದಿ ರಾಜೇಶ್ ಸಾವಂತ್ ಕುಟುಂಬಕ್ಕೆ ನೆರವಾಗಲಿದೆ. ಈಗಾಗಲೇ ತಂಡದೊಂದಿಗೆ ವಿಶ್ವಕಪ್ ಪ್ರವಾಸದಲ್ಲಿದ್ದ ಬೌಲಿಂಗ್ ತರಬೇತುದಾರ ಪರಸ್ ಮಾಂಬ್ರೆ, ಕ್ಷೇತ್ರರಕ್ಷಣೆ ತರಬೇತುದಾರ ಅಭಯ್ ಶರ್ಮ, ದೈಹಿಕ ತರಬೇತುದಾರ ಯೋಗೇಶ್ ಪರ್ಮಾರ್, ಇವರ ಸಹಾಯಕ ಆನಂದ್ ದಾಟೆ, ಅಂಗಮರ್ದಕ ಮಂಗೇಶ್ ಗಾಯಕ್ವಾಡ್, ವಿಡಿಯೋ ವಿಶ್ಲೇಷಕ ದೇವರಾಜ್ ರಾವತ್‌ಗೂ ತಲಾ 25 ಲಕ್ಷ ರೂ. ಸಿಗಲಿದೆ.
ಅಷ್ಟು ಮಾತ್ರವಲ್ಲ ಹೆಚ್ಚುವರಿಯಾಗಿ ನಾಲ್ಕು ಜನರಿಗೆ ತಲಾ 25 ಲಕ್ಷ ರೂ. ಸಿಗಲಿದೆ. 2017ರಲ್ಲಿ ಇಂಗ್ಲೆಂಡ್ ಪ್ರವಾಸದ ವೇಳೆ ತರಬೇತುದಾರನಾಗಿದ್ದ ಡಬ್ಲೂé.ವಿ.ರಾಮನ್, ಅಂಕಿಸಂಖ್ಯೆ ನಿರ್ವಾಹಕರಾದ ಮನುಜ್ ಶರ್ಮ, ಸುಮೀತ್ ಮಲಹಾಪುರ್ಕರ್, ಸಹಾಯಕ ತರಬೇತಿ ಸಿಬ್ಬಂದಿ ಅಮೋಘ… ಪಂಡಿತ್, ದಿವಂಗತ ಸಹಾಯಕ ಸಿಬ್ಬಂದಿ ರಾಜೇಶ್ ಸಾವಂತ್‌ಗೂ ತಲಾ 25 ಲಕ್ಷ ರೂ. ಸಿಗಲಿದೆ.