ಇಂಧೋರ್: ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರು ಇದೀಗ ಮತ್ತೆ ಅದ್ಭುತ ಫಾರ್ಮ್ ನಲ್ಲಿದ್ದಾರೆ. ಕಳೆದ ಏಷ್ಯಾಕಪ್ ನಲ್ಲಿ ಶತಕದೊಂದಿಗೆ ಫಾರ್ಮ್ ಗೆ ಮರಳಿದ ವಿರಾಟ್ ಬಳಿಕ ಟಿ20 ವಿಶ್ವಕಪ್ ನಲ್ಲೂ ಉತ್ತಮ ಆಟವಾಡಿದರು. ಇದೀಗ ಐಸಿಸಿ ವರ್ಷದ ಟಿ20 ತಂಡದಲ್ಲೂ ವಿರಾಟ್ ಸ್ಥಾನ ಪಡೆದಿದ್ದಾರೆ.
ಆದರೆ ಟಿ20 ವಿಶ್ವಕಪ್ ಬಳಿಕ ವಿರಾಟ್ ಕೊಹ್ಲಿ ಅವರನ್ನು ಟಿ20 ತಂಡದಿಂದ ಕೈಬಿಡಲಾಗಿದೆ. ಭವಿಷ್ಯದ ತಂಡವನ್ನು ಕಟ್ಟುವ ದಿಸೆಯಿಂದ ಯುವ ಆಟಗಾರರಿಗೆ ಜಾಗ ನೀಡಲಾಗುತ್ತಿದೆ. ಮುಂಬರುವ ಕಿವೀಸ್ ವಿರುದ್ಧದ ಸರಣಿಗೂ ವಿರಾಟ್ ಆಯ್ಕೆಯಾಗಿಲ್ಲ.
ಅಂತಿಮ ಏಕದಿನ ಪಂದ್ಯಕ್ಕಾಗಿ ಇಂಧೋರ್ ಗೆ ಬಂದ ಕೋಚ್ ರಾಹುಲ್ ದ್ರಾವಿಡ್ ಅವರಿಗೆ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಪ್ರಶ್ನೆ ಎದುರಾಯಿತು. “ಕಳೆದ ವರ್ಷದವರೆಗೂ ಟಿ20 ತಂಡದಲ್ಲಿ ವಿರಾಟ್ ಸ್ಥಾನ ಪ್ರಶ್ನೆಯಾಗಿತ್ತು…’’ ಎಂದು ಪತ್ರಕರ್ತರೊಬ್ಬರು ಕೇಳಿದರು. ಆದರೆ ನಡುವಲ್ಲೇ ಉತ್ತರಿಸಿದ ದ್ರಾವಿಡ್, “ ನಮ್ಮಿಂದ ಅಲ್ಲ ಸರ್, ಅಲ್ಲವೇ ಅಲ್ಲ.. ನಮ್ಮಿಂದ ಅಲ್ಲ” ಎಂದರು.
ಐಸಿಸಿ ವರ್ಷದ ಟಿ20 ತಂಡದಲ್ಲಿ ಸ್ಥಾನ ಪಡೆದರೂ ವಿರಾಟ್ ಟಿ20 ತಂಡದಲ್ಲಿ ಯಾಕಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿ, “ನಿರ್ದಿಷ್ಟ ವೈಟ್-ಬಾಲ್ ಪಂದ್ಯಾವಳಿಗಳಿಗೆ ನಿರ್ದಿಷ್ಟ ಸಮಯದ ಕೆಲವು ಹಂತಗಳಲ್ಲಿ ನಾವು ನೀಡಬೇಕಾದ ಕೆಲವು ಆದ್ಯತೆಗಳಿವೆ. ನಾವು ಬಾರ್ಡರ್-ಗವಾಸ್ಕರ್ ಟ್ರೋಫಿ ಮತ್ತು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಆಡುತ್ತಿದ್ದೇವೆ. ನಮಗೆ ಇವು ಪ್ರಮುಖ ಪಂದ್ಯಗಳು. ಕೆಲವು ವೈಟ್-ಬಾಲ್ ಪಂದ್ಯಾವಳಿಗಳಿಗೆ ನಾವು ಆದ್ಯತೆ ನೀಡಬೇಕಾಗಿತ್ತು, ಟಿ20 ವಿಶ್ವಕಪ್ ನಂತರದ ಆದ್ಯತೆಯು ಈ ಆರು ಪಂದ್ಯಗಳಾಗಿವೆ” ಎಂದರು.
“ ವಿರಾಟ್ ಈ ಎಲ್ಲಾ ಆರು ಪಂದ್ಯಗಳನ್ನು ಆಡಿದ್ದಾನೆ. ಮುಂದಿನ ಒಂದೆರಡು ಪಂದ್ಯಗಳಿಗೆ ರೋಹಿತ್ ಜತೆಗೆ ಆತ ವಿಶ್ರಾಂತಿ ಪಡೆಯಲಿದ್ದಾನೆ. ಆಸ್ಟ್ರೇಲಿಯಾ ಸರಣಿಗೂ ಮೊದಲು ನಾವು ಒಟ್ಟಿಗೆ ಸೇರಲಿದ್ದೇವೆ. ಅದಕ್ಕಾಗಿ ವಿರಾಟ್ ಉತ್ತಮ ವಿಶ್ರಾಂತಿ ಪಡೆದು ಬರಲಿದ್ದಾನೆ. ನಾವು ಕೆಲವು ಫಾರ್ಮ್ಯಾಟ್ ಗಳನ್ನು ಆದ್ಯತೆಯ ಮೇಲೆ ನೋಡಬೇಕಾಗಿದೆ” ಎಂದರು.