Advertisement

ಲಂಕಾ ಪ್ರವಾಸಕ್ಕೆ ದ್ರಾವಿಡ್‌ ಕೋಚ್‌

10:39 PM May 20, 2021 | Team Udayavani |

ಹೊಸದಿಲ್ಲಿ: ಮಾಜಿ ಕ್ರಿಕೆಟಿಗ, “ದಿ ವಾಲ್‌’ ಖ್ಯಾತಿಯ ರಾಹುಲ್‌ ದ್ರಾವಿಡ್‌ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿರುವ ಭಾರತ ತಂಡದ ಕೋಚ್‌ ಆಗಿರಲಿದ್ದಾರೆ ಎಂದು ಬಿಸಿಸಿಐ ಪ್ರಕಟಿಸಿದೆ.

Advertisement

ಬೌಲಿಂಗ್‌ ಕೋಚ್‌ ಪರಸ್‌ ಮ್ಹಾಂಬ್ರೆ ಕೂಡ ತಂಡದ ಜತೆ ತೆರಳಲಿದ್ದಾರೆ. ಉಳಿದಂತೆ ದ್ರಾವಿಡ್‌ ತಮ್ಮದೇ ಆದ ಸಹಾಯಕ ಹಾಗೂ ಕೋಚಿಂಗ್‌ ಸಿಬಂದಿಯನ್ನು ಲಂಕಾ ಪ್ರವಾಸಕ್ಕೆ ಕರೆದೊಯ್ಯುವುದೂ ಖಚಿತಗೊಂಡಿದೆ.

3 ಏಕದಿನ ಹಾಗೂ 3 ಟಿ20 ಪಂದ್ಯಗಳ ಸರಣಿಗಾಗಿ ಭಾರತದ “ದ್ವಿತೀಯ ದರ್ಜೆ’ಯ ತಂಡ ಶ್ರೀಲಂಕಾಕ್ಕೆ ತೆರಳಲಿದೆ. ಇದೇ ವೇಳೆ ವಿರಾಟ್‌ ಕೊಹ್ಲಿ ನಾಯಕತ್ವದ ಪ್ರಧಾನ ತಂಡ ಇಂಗ್ಲೆಂಡ್‌ ಪ್ರವಾಸದಲ್ಲಿರುತ್ತದೆ. ಕೋಚ್‌ ರವಿಶಾಸ್ತ್ರಿ ಈ ತಂಡದ ಜತೆ ಇರುವುದರಿಂದ ರಾಹುಲ್‌ ದ್ರಾವಿಡ್‌ ಅವರನ್ನು ಲಂಕಾ ಸರಣಿಗಾಗಿ ಕೋಚ್‌ ಆಗಿ ನೇಮಿಸಲಾಗಿದೆ.

ದ್ರಾವಿಡ್‌ ಹುಡುಗರು…

ಕಳೆದ ಕೆಲವು ದಿನಗಳಿಂದ ಈ ಪ್ರವಾಸದ ಕೋಚ್‌ ಹುದ್ದೆಗೆ ರಾಹುಲ್‌ ದ್ರಾವಿಡ್‌ ಹೆಸರು ಕೇಳಿಬರುತ್ತಿತ್ತು. ದ್ರಾವಿಡ್‌ ಭಾರತ “ಎ’ ಮತ್ತು ಅಂಡರ್‌-19 ತಂಡಗಳ ಕೋಚ್‌ ಹುದ್ದೆಯನ್ನು ಯಶಸ್ವಿಯಾಗಿ ನಿಭಾಯಿಸಿದ್ದರು. ಈಗಿನ ಭಾರತ ತಂಡದಲ್ಲಿರುವ ಯುವ ಆಟಗಾರರೆಲ್ಲ ದ್ರಾವಿಡ್‌ ಗರಡಿಯಲ್ಲೇ ಪಳಗಿದವರಾಗಿದ್ದಾರೆ. ಬೆಂಗಳೂರು ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿಯ ಮುಖ್ಯಸ್ಥ ಸ್ಥಾನಕ್ಕೇರಿದ ಬಳಿಕ ದ್ರಾವಿಡ್‌ ಕಿರಿಯರ ತಂಡಗಳಿಂದ ದೂರಾಗಿದ್ದರು.

Advertisement

ಕಲಾತ್ಮಕ ಬ್ಯಾಟ್ಸ್‌ಮನ್‌ ರಾಹುಲ್‌ ದ್ರಾವಿಡ್‌ ಸೀನಿಯರ್‌ ತಂಡದ ಕೋಚ್‌ ಆಗುತ್ತಿರುವುದು ಇದೇ ಮೊದಲು. 2014ರಲ್ಲೊಮ್ಮೆ ಇಂಗ್ಲೆಂಡ್‌ ಪ್ರವಾಸದ ವೇಳೆ ತಂಡದ ಸಲಹೆಗಾರನಾಗಿ ಕೆಲಸ ಮಾಡಿದ್ದರು. ಬಳಿಕ ಇವರ ನಂಟು ಪ್ರತಿಭಾನ್ವಿತ ಕ್ರಿಕೆಟಿಗರನ್ನು ರೂಪುಗೊಳಿಸುವುದಕ್ಕೆ ಮೀಸಲಾಗಿತ್ತು.

ಏಕಕಾಲದಲ್ಲಿ ಎರಡು ಪ್ರವಾಸ :

ಏಕಕಾಲದಲ್ಲಿ ಭಾರತದ ತಂಡಗಳೆರಡು ಎರಡು ದೇಶಗಳಿಗೆ ಪ್ರವಾಸ ಹೋಗುತ್ತಿರುವ ಅಪರೂಪದ ವಿದ್ಯಮಾನ ಇದಾಗಿದೆ. ಲಂಕಾ ಪ್ರವಾಸಕ್ಕಾಗಿ ಈ ತಿಂಗಳ ಕೊನೆಯಲ್ಲಿ ತಂಡವನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ. ಶಿಖರ್‌ ಧವನ್‌, ಪೃಥ್ವಿ ಶಾ, ಭುವನೇಶ್ವರ್‌ ಕುಮಾರ್‌, ಪಾಂಡ್ಯ ಬ್ರದರ್, ಸೂರ್ಯಕುಮಾರ್‌ ಯಾದವ್‌, ಮನೀಷ್‌ ಪಾಂಡೆ, ಇಶಾನ್‌ ಕಿಶನ್‌, ಸಂಜು ಸ್ಯಾಮ್ಸನ್‌, ದೇವದತ್ತ ಪಡಿಕ್ಕಲ್‌, ರಾಹುಲ್‌ ತೇವಟಿಯಾ, ವರುಣ್‌ ಚಕ್ರವರ್ತಿ, ಖಲೀಲ್‌ ಅಹ್ಮದ್‌, ಹರ್ಷಲ್‌ ಪಟೇಲ್‌, ಚಹಲ್‌ ಸೋದರರು, ಯಜುವೇಂದ್ರ ಚಹಲ್‌ ಮೊದಲಾದವರು ಲಂಕಾ ಪ್ರವಾಸದ ರೇಸ್‌ನಲ್ಲಿದ್ದಾರೆ.

ಆದರೆ ಶ್ರೀಲಂಕಾದಲ್ಲೂ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಸರಣಿ ನಡೆದೀತೇ ಎಂಬ ಪ್ರಶ್ನೆಯೊಂದು ಕಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next