ಮುಂಬೈ: ವೆಸ್ಟ್ ಇಂಡೀಸ್ ಸರಣಿ ಮುಗಿಸಿದ ಭಾರತ ತಂಡ ಮತ್ತೊಂದು ವಿದೇಶ ಪ್ರವಾಸಕ್ಕೆ ಹೊರಟಿದೆ. ಜಿಂಬಾಬ್ವೆ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ಟೀಂ ಇಂಡಿಯಾ ಹೊರಟಿದ್ದು, ಕೆಎಲ್ ರಾಹುಲ್ ನಾಯಕತ್ವ ವಹಿಸಲಿದ್ದಾರೆ.
ವಿಶೇಷವೆಂದರೆ ಭಾರತದ ತಂಡದ ಸಹಾಯಕ ಸಿಬ್ಬಂದಿ ಈ ಸರಣಿಯಲ್ಲಿ ವಿಶ್ರಾಂತಿ ಪಡೆದಿದ್ದಾರೆ. ಮುಖ್ಯ ಕೋಚ್ ರಾಹುಲ್ ದ್ರಾವಿಡ್, ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್ ಮತ್ತು ಬೌಲಿಂಗ್ ಕೋಚ್ ಪರಾಸ್ ಮಾಂಬ್ರೆ ಕೂಡಾ ವಿಶ್ರಾಂತಿ ಪಡೆದಿದ್ದಾರೆ. ಅವರುಗಳು ಆಗಸ್ಟ್ 20ರಂದು ಯುಎಇ ಗೆ ಪ್ರಯಾಣ ಬೆಳೆಸಲಿದ್ದು, ಅಲ್ಲಿ ಏಷ್ಯಾಕಪ್ ತಯಾರಿ ನಡೆಸಲಿದೆ.
ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಗೆ ವಿವಿಎಸ್ ಲಕ್ಷ್ಮಣ್ ಮುಖ್ಯ ಕೋಚ್ ಆಗಿರಲಿದ್ದಾರೆ. ಮಾಜಿ ಆಟಗಾರರಾದ ಸಾಯಿರಾಜ್ ಬಹುತುಳೆ ಮತ್ತು ಹೃಷಿಕೇಶ್ ಕಾನಿತ್ಕರ್ ಅವರು ಸಹಾಯಕ ಕೋಚ್ ಗಳಾಗಿ ಹರಾರೆಗೆ ಪ್ರಯಾಣಿಸಿದ್ದಾರೆ.
ಇದನ್ನೂ ಓದಿ:ದಿ ಸಟಾನಿಕ್ ವರ್ಸಸ್ ವಿವಾದ…33 ವರ್ಷದ ಹಿಂದೆ ರಶ್ದಿ ಹತ್ಯೆಗೆ ಫತ್ವಾ ಹೊರಡಿಸಲಾಗಿತ್ತು!
ಏಷ್ಯಾಕಪ್‌ಗಾಗಿ ಯುಎಇಗೆ ತೆರಳುವ ಮುನ್ನ ರಾಹುಲ್ ದ್ರಾವಿಡ್ ಅವರು ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡವನ್ನು ಸೇರಿಕೊಳ್ಳಲಿದ್ದಾರೆ. ಭಾರತವು ಆಗಸ್ಟ್ 28 ರಂದು ದುಬೈನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ತಮ್ಮ ಏಷ್ಯಾ ಕಪ್ ಅಭಿಯಾನವನ್ನು ಪ್ರಾರಂಭಿಸುತ್ತದೆ. ಕೆಎಲ್ ರಾಹುಲ್ ನೇತೃತ್ವದ ತಂಡವು ಜಿಂಬಾಬ್ವೆಗೆ ಪ್ರಯಾಣಿಸಿದ್ದು, ಅಲ್ಲಿ ಭಾರತವು ಆಗಸ್ಟ್ 18, 20 ಮತ್ತು 22 ರಂದು ಹರಾರೆಯಲ್ಲಿ ಮೂರು ಏಕದಿನ ಪಂದ್ಯಗಳನ್ನು ಆಡಲಿದೆ.
ಭಾರತ ತಂಡ: ಕೆಎಲ್ ರಾಹುಲ್ (ನಾ), ಶಿಖರ್ ಧವನ್ (ಉ.ನಾ), ಋತುರಾಜ್ ಗಾಯಕ್ವಾಡ್, ಶುಭ್ಮನ್ ಗಿಲ್, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ಇಶಾನ್ ಕಿಶನ್ (ವಿ.ಕೀ), ಸಂಜು ಸ್ಯಾಮ್ಸನ್ (ವಿ.ಕೀ), ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಅಕ್ಸರ್ ಪಟೇಲ್, ಅವೇಶ್ ಖಾನ್ , ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್, ದೀಪಕ್ ಚಹಾರ್.