ದುಬೈ: ಕೋಟ್ಯಾಂತರ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಕನಸು ನನಸಾಗುವ ಸಮಯ ಬಂದಿದೆ. ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರ ಸತತ ಪ್ರಯತ್ನದ ಫಲವಾಗಿ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರು ಭಾರತ ಪುರುಷರ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಲು ಒಪ್ಪಿಗೆ ನೀಡಿದ್ದಾರೆ ಎಂದು ವರದಿಯಾಗಿದೆ.
ಬಿಸಿಸಿಐ ಮೂಲಗಳನ್ನು ಉಲ್ಲೇಖಿಸಿ ಟೈಮ್ಸ್ ಆಫ್ ಇಂಡಿಯಾ ಈ ಬಗ್ಗೆ ವರದಿ ಮಾಡಿದೆ.
ಶುಕ್ರವಾರ ದುಬೈ ನಲ್ಲಿ ನಡೆದ ಐಪಿಎಲ್ ಫೈನಲ್ ಪಂದ್ಯದ ವೇಳೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಕಾರ್ಯದರ್ಶಿ ಜಯ್ ಶಾ ಮತ್ತು ಖಜಾಂಚಿ ಅರುಣ್ ಧುಮಾಲ್ ಅವರು ರಾಹುಲ್ ದ್ರಾವಿಡ್ ಅವರೊಂದಿಗೆ ಚರ್ಚೆ ನಡೆಸಿದ್ದಾರೆ. ಈ ವೇಳೆ ದ್ರಾವಿಡ್ ಅವರನ್ನು ಮುಖ್ಯ ಕೋಚ್ ಸ್ಥಾನಕ್ಕೆ ಒಪ್ಪಿಸಲಾಗಿದೆ ಎನ್ನಲಾಗಿದೆ.
ರಾಹುಲ್ ದ್ರಾವಿಡ್ ಅವರಿಗೆ ಈ ಮೊದಲು ಮೂರು ಬಾರಿ ಬಿಸಿಸಿಐ ಕೋಚ್ ಸ್ಥಾನದ ಆಫರ್ ನೀಡಿತ್ತು. ಆದರೆ ದ್ರಾವಿಡ್ ಅವರು ನಿರಾಕರಿಸಿದ್ದರು. ಬೆಂಗಳೂರಿನಲ್ಲಿರುವ ಕುಟುಂಬದ ಜೊತೆ ಹೆಚ್ಚಿನ ಕಾಲ ಕಳೆಯಬೇಕಾದ ಕಾರಣ ಬೆಂಗಳೂರಿನಲ್ಲಿಯೇ ಇರುವ ಎನ್ ಸಿಎ (ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ) ಯ ಅಧ್ಯಕ್ಷ ಸ್ಥಾನವನ್ನು ಒಪ್ಪಿಕೊಂಡಿದ್ದರು.
ಇದನ್ನೂ ಓದಿ:ಐಪಿಎಲ್ ಟ್ರೋಫಿಯ ಜೊತೆ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ನೀಡಿದ ಮಾಹಿ!
ಭಾರತೀಯ ಪುರುಷರ ತಂಡದ ಮುಖ್ಯ ಕೋಚ್ ಆಗಲು ರಾಹುಲ್ ದ್ರಾವಿಡ್ ಅವರು ಒಪ್ಪಿಗೆ ನೀಡಿದ್ದಾರೆ. ಎನ್ ಸಿಎ ಮುಖ್ಯಸ್ಥ ಸ್ಥಾನದಿಂದ ಅವರು ಶೀಘ್ರವೇ ಕೆಳಗಿಳಿಯಲಿದ್ದಾರೆ. ದ್ರಾವಿಡ್ ಆಪ್ತ ಪರಾಸ್ ಮಾಂಬ್ರೆ ಅವರು ಬೌಲಿಂಗ್ ಕೋಚ್ ಆಗಿ ನೇಮಕವಾಗಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿದೆ.
ಕಳೆದ ಆಗಸ್ಟ್‌ನಲ್ಲಿ ಭಾರತದ ದ್ವಿತೀಯ ತಂಡ ಶ್ರೀಲಂಕಾಕ್ಕೆ ಪ್ರವಾಸ ಹೋಗಿದ್ದಾಗ ದ್ರಾವಿಡ್ ಮೊದಲ ಸಲ ಹಿರಿಯರ ತಂಡದ ಕೋಚ್ ಆಗಿದ್ದರು. ಆಗ ಭಾರತದ ಪ್ರಧಾನ ತರಬೇತುದಾರ ರವಿಶಾಸ್ತ್ರಿ ಭಾರತ ತಂಡದೊಂದಿಗೆ ಇಂಗ್ಲೆಂಡ್ ಪ್ರವಾಸದಲ್ಲಿದ್ದರು. ಟಿ20 ವಿಶ್ವಕಪ್ ಬಳಿಕ ರವಿಶಾಸ್ತ್ರಿ ಅವರ ಒಪ್ಪಂದದ ಅವಧಿ ಪೂರ್ಣಗೊಳ್ಳಲಿದೆ. ಅದರ ಬಳಿಕ ನಡೆಯುವ ನ್ಯೂಜಿಲ್ಯಾಂಡ್ ವಿರುದ್ಧದ ಸರಣಿಗೆ ದ್ರಾವಿಡ್ ಕೋಚ್ ಆಗಿರಲಿದ್ದಾರೆ.