Advertisement
ಪಕ್ಷದ ಅಧ್ಯಕ್ಷರಾದ ಬಳಿಕ ರಾಹುಲ್ ಗಾಂಧಿ ಮೊದಲ ಬಾರಿಗೆ ಕರಾವಳಿಯ ಉಭಯ ಜಿಲ್ಲೆಗಳಾದ ದಕ್ಷಿಣ ಕನ್ನಡ ಹಾಗೂ ಉಡುಪಿಗೆ ಭೇಟಿ ನೀಡಿದ್ದರು. ಮಂಗಳೂರಿನ ನೆಹರೂ ಮೈದಾನದ ನಡೆದ ಪಕ್ಷದ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಕೇಂದ್ರದ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆಯಿಂದ ಹಿಡಿದು ಮಾಜಿ ಶಾಸಕರಾದ ವಿಜಯಕುಮಾರ್ ಶೆಟ್ಟಿ ವರೆಗೆ ಎಲ್ಲ ಸ್ಥಳೀಯ ನಾಯಕರು-ಮುಖಂಡರು ಪಾಲ್ಗೊಂಡಿದ್ದರು. ಆದರೆ ಒಂದು ಕಾಲದಲ್ಲಿ ಕರಾವಳಿ ಭಾಗದಲ್ಲಿ ಮಾತ್ರವಲ್ಲ ಇಡೀ ರಾಜ್ಯದಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿದ್ದುಕೊಂಡು ಪಕ್ಷ ಸಂಘಟನೆಯಲ್ಲಿ ಸಕ್ರಿಯ ರಾಗಿದ್ದ ಮಾಜಿ ಸಚಿವ, ಅಪ್ಪಟ ಕಾಂಗ್ರೆಸ್ ನಾಯಕ ಜನಾರ್ದನ ಪೂಜಾರಿ ಅವರ ಅನುಪಸ್ಥಿತಿ ಎದ್ದು ಕಾಣುತ್ತಿತ್ತು. ಅನಾರೋಗ್ಯದ ಕಾರಣದಿಂದ ಸಮಾವೇಶದಲ್ಲಿ ಪಾಲ್ಗೊಂಡಿರಲಿಲ್ಲ ಎನ್ನಲಾಗುತ್ತಿದೆ.
ಜನಾಶೀರ್ವಾದ ಯಾತ್ರೆಯ ಮರುದಿನ ಮಂಗಳೂರಿನ ಸರ್ಕಿಟ್ ಹೌಸ್‌ನಲ್ಲಿ ಉಭಯ ಜಿಲ್ಲೆಗಳ ಪಕ್ಷದ ಹಿರಿಯ ನಾಯಕರ ಸಭೆ ನಡೆಸಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕಾರ್ಯವನ್ನು ರಾಹುಲ್ ಗಾಂಧಿ ಮಾಡಿದ್ದಾರೆ. ಹಾಲಿ ಶಾಸಕರು, ಸಂಸದರ ಜತೆಗೆ ಮಾಜಿ ಶಾಸಕರು, ಮಾಜಿ ಸಂಸದರು, ಮಾಜಿ ವಿಧಾನ ಪರಿಷತ್ ಸದಸ್ಯರನ್ನು ಕೂಡ ಆಹ್ವಾನಿಸಿ ಅವರೊಂದಿಗೆ ಸಂವಾದ ನಡೆಸಿದ್ದಾರೆ. ಖುದ್ದು ಪಕ್ಷದ ರಾಷ್ಟ್ರೀಯ ಅಧ್ಯಕ್ಷರೇ ತಮಗೆ ಮನ್ನಣೆ ಕೊಟ್ಟಿರುವುದು ಹಿರಿಯ ನಾಯಕರಲ್ಲಿ ಸಮಾಧಾನದ ಭಾವನೆ ಮೂಡಿಸಿದೆ.
Related Articles
Advertisement
ಇತ್ತೀಜೆಗೆ ಉಭಯ ಜಿಲ್ಲೆಗಳಲ್ಲಿ ನಡೆದಿರುವ ಕೆಲವು ಬೆಳವಣಿಗೆಗಳು ಮತ್ತು ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಮೇಯರ್ ಸ್ಥಾನವನ್ನು ನೀಡದಿರುವುದು ಮುಸ್ಲಿಂ ಸಮುದಾಯದಲ್ಲಿ ಅಸಮಾಧಾನ ಸೃಷ್ಟಿಸಿದ್ದವು. ಜಿಲ್ಲೆಯ ಮುಸ್ಲಿಂ ಸಮುದಾಯದ ಪ್ರಮುಖ ನಾಯಕರಲ್ಲಿ ಓರ್ವರಾಗಿರುವ ಮಾಜಿ ಮೇಯರ್ ಆಶ್ರಫ್ ಕಾಂಗ್ರೆಸ್‌ಗೆ ರಾಜೀನಾಮೆ ಕೂಡ ನೀಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ರಾಹುಲ್ ಅವರು ಮುಸ್ಲಿಂ ಸಮುದಾಯದ ಆನೇಕ ಹಿರಿಯ ಮತ್ತು ಪ್ರಮುಖ ನಾಯಕರನ್ನೂ ಆಹ್ವಾನಿಸಿ ಸಂವಾದ ನಡೆಸಿ ಅವರೆಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಯತ್ನ ಮಾಡಿದ್ದಾರೆ. ಒಟ್ಟಾರೆ ರಾಹುಲ್ ಕರಾವಳಿ ಭೇಟಿ ವೇಳೆ ಪಕ್ಷದಲ್ಲಿ ಈಗಾಗಲೇ ಮುನಿಸಿಕೊಂಡಿರುವ ಪಕ್ಷದ ಹಿರಿಯ ನಾಯಕರ ಅಸಮಾಧಾನಕ್ಕೆ ಸಮಾಧಾನದ ಟಾನಿಕ್ ಕೊಟ್ಟು ಹೋಗಿದ್ದಾರೆ ಎನ್ನಲಾಗುತ್ತಿದೆ.
ಜನಾರ್ದನ ಪೂಜಾರಿಗೆ ದಿಲ್ಲಿಗೆ ಆಹ್ವಾನರಾಹುಲ್ ಗಾಂಧಿ ಮಾ.20ರಂದು ಕುದ್ರೋಳಿ ದೇವಾಲಯಕ್ಕೆ ಭೇಟಿ ನೀಡಿದಾಗ ಜನಾರ್ದನ ಪೂಜಾರಿ ಆತ್ಮೀಯವಾಗಿ ಬರಮಾಡಿಕೊಂಡಿದ್ದರು. ರಾಹುಲ್ ಕೂಡ ಅತ್ಯಂತ ಗೌರವದಿಂದ ನಡೆದುಕೊಂಡರು. ‘ನಿಮ್ಮ ಅಜ್ಜಿ ಇಂದಿರಾ ಗಾಂಧಿಯವರು, ತಂದೆ ರಾಜೀವ್ ಗಾಂಧಿ ದೇಶಕ್ಕೆ ಅತ್ಯುತ್ತಮ ಸೇವೆ ನೀಡಿದ್ದಾರೆ. ನಿಮ್ಮನ್ನು (ರಾಹುಲ್) ಕೂಡ ದೇವರು ಇದೇ ಹಾದಿಯಲ್ಲಿ ಮುನ್ನಡೆಸಲಿ ಹಾಗೂ ದೇಶದ ಮುಂದಿನ ಪ್ರಧಾನಿಯಾಗಿ’ ಎಂದು ಪೂಜಾರಿ ಆಶೀರ್ವದಿಸಿದ್ದರು. ಆ ಸಂದರ್ಭ ರಾಹುಲ್ ‘ನಿಮ್ಮ ಆರೋಗ್ಯವನ್ನು ಕಾಪಾಡಿ ಹಾಗೂ ಹೊಸದಿಲ್ಲಿಗೆ ಬನ್ನಿ’ ಎಂದು ಪೂಜಾರಿಯನ್ನು ವಿನಂತಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕೇಶವ ಕುಂದರ್