ನಾಮ್‌ಸೈ (ಅಸ್ಸಾಂ): “ರಾಹುಲ್ ಗಾಂಧಿಯವರೇ ನಿಮ್ಮ ಇಟಲಿ ಕನ್ನಡಕ ತೆಗೆದು ನೋಡಿ. ಆಗ ನಿಮಗೆ ಅರುಣಾಚಲ ಪ್ರದೇಶದಲ್ಲಿ ಪೆಮಾ ಖಂಡು ನೇತೃತ್ವದ ಸರ್ಕಾರ ಮಾಡಿರುವ ಅಭಿವೃದ್ಧಿ ಕೆಲಸಗಳು ಕಾಣಿಸುತ್ತವೆ.’ ಹೀಗೆಂದು ಕಾಂಗ್ರೆಸ್‌ನ ಮಾಜಿ ಅಧ್ಯಕ್ಷರಿಗೆ ಟಾಂಗ್ ನೀಡಿದ್ದು ಕೇಂದ್ರ ಗೃಹ ಸಚಿವ ಅಮಿತ್ ಶಾ. ಅರುಣಾಚಲ ಪ್ರದೇಶದಲ್ಲಿರುವ ಅಮಿತ್ ಶಾ ನಾಮ್‌ಸೈ ಜಿಲ್ಲೆಯಲ್ಲಿ 1 ಸಾವಿರ ಕೋಟಿ ರೂ. ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳ ಶಿಲಾನ್ಯಾಸ ಮತ್ತು ಉದ್ಘಾಟನೆ ನೆರವೇರಿಸಿ ಮಾತನಾಡಿದ್ದಾರೆ.
“ಎಂಟು ವರ್ಷಗಳ ಅವಧಿಯಲ್ಲಿ ದೇಶದಲ್ಲಿ ಏನಾಗಿದೆ ಎಂದು ಕಾಂಗ್ರೆಸ್ ಮುಖಂಡರು ಪ್ರಶ್ನೆ ಮಾಡುತ್ತಿದ್ದಾರೆ. ರಾಹುಲ್ ಬಾಬಾ ಅವರ ಇಟಲಿಯ ಕನ್ನಡಕ ತೆಗೆದು ನೋಡಬೇಕು. ಪ್ರಧಾನಿ ಮೋದಿ ಮತ್ತು ಪೆಮಾ ಖಂಡು ನೇತೃತ್ವದ ಸರ್ಕಾರ ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ಅವರು ನೋಡಬೇಕು. ಮೂಲ ಸೌಕರ್ಯ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡಲಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ಬಲಪಡಿಸಲಾಗಿದೆ ಎಂದರು.
ಇದನ್ನೂ ಓದಿ : ತೆರಿಗೆ ಇಳಿಕೆಗೆ ಕೇಂದ್ರದ ಸಮರ್ಥನೆ: ಮಹಾರಾಷ್ಟ್ರ, ಒಡಿಶಾದಿಂದಲೂ ವ್ಯಾಟ್ ಇಳಿಕೆ
ರಾಹುಲ್ ಮಾತು ಕೇಳುವುದಿಲ್ಲ
ರಾಹುಲ್ ಗಾಂಧಿಯವರ ಮಾತನ್ನು ಯಾರೂ ಕೇಳುವುದಿಲ್ಲವೆಂದು ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಟ್ವೀಟ್ ಮಾಡಿದ್ದಾರೆ. “ರಾಹುಲ್ ಗಾಂಧಿ ದೇಶದ ಅತ್ಯಂತ ವಿಫಲ, ಹತಾಶೆಯ, ನಿರಾಶೆಯ ಮತ್ತು ಯಶಸ್ಸು ಕಾಣದ ನಾಯಕ. ಕಾಂಗ್ರೆಸ್ ಸಂಸದನ ಮಾತನ್ನು ದೇಶದಲ್ಲಿ ಯಾರೂ ಕೇಳುತ್ತಿಲ್ಲ’ ಎಂದು ಬರೆದುಕೊಂಡಿದ್ದಾರೆ.