ಕನ್ನಡ ಚಿತ್ರರಂಗದಲ್ಲಿ, ದಿನಕ್ಕೊಂದು ಹೊಸ ಪ್ರಯೋಗಗಳು ನಡೆಯುತ್ತಿವೆ. ಈ ಸಾಲಿಗೆ ಕನ್ನಡದ “ಸಾರಿ ಕರ್ಮ ರಿಟರ್ನ್ಸ್ ‘ ಚಿತ್ರವೂ ಸೇರಿದೆ. “ಕಿಸ್ ಇಂಟರ್‌ನ್ಯಾಷನಲ್’ ಬ್ಯಾನರ್‌ನಲ್ಲಿ ನವೀನ್ ನಿರ್ಮಿಸುತ್ತಿರುವ, ಬ್ರಹ್ಮ ನಿರ್ದೇಶನದ ಈ ಚಿತ್ರದಲ್ಲಿ ನಟಿ ರಾಗಿಣಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.
“ಸಾರಿ ಕರ್ಮ ರಿಟರ್ನ್ಸ್ ‘ ಚಿತ್ರ ತಾಂತ್ರಿಕವಾಗಿ ಮೋಷನ್ ಕ್ಯಾಪ್ಚರ್ ತಂತ್ರಜ್ಞಾನ ಬಳಸಿರುವ, ಸೂಪರ್ ಹೀರೋ ಕಥಾ ಹಂದರದ ಚಿತ್ರವಾಗಿದೆ. ಇತ್ತೀಚೆಗೆ ಚಿತ್ರತಂಡ ಚಿತ್ರದ ಮೊದಲ “ಅರೆ ರೇ ಒಳಗೊಳಗೆ’ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆ ಮಾಡಿದೆ.
ಚಿತ್ರ ನಿರ್ದೇಶಕ ಬ್ರಹ್ಮ ಮಾತನಾಡಿ, “ಜಗತ್ತಿನ ಎಲ್ಲಾ ಸೂಪರ್ ಹೀರೋಗಳು ಹುಟ್ಟಿದ್ದು ನಮ್ಮ ಸಂಸ್ಕೃತಿಯ ಮೂಲದಿಂದಲೇ. ಎಲ್ಲಾ ಸೂಪರ್ ಹೀರೋಗಳಿಗೆ ಮೂಲ ಹನುಮಾನ್. ನಾನು ಹಾಲಿವುಡ್ ಸಿನಿಮಾಗಳ ತಾಂತ್ರಿಕ ವಿಭಾಗದಲ್ಲಿ ಕೆಲಸ ಮಾಡಿದ್ದೆ. ಆ ಸಮಯದಲ್ಲಿ ನಾವು ಏಕೆ ಈ ತಂತ್ರಜ್ಞಾನಗಳನ್ನು ಬಳಸಿ ಚಿತ್ರ ಮಾಡಬಾರದು ಎಂಬ ಚಿಂತನೆ ಬಂತು. ಆ ನಿಟ್ಟಿನಲ್ಲಿ ಕಥೆ ಹೆಣೆದು ತಯಾರುಗುತ್ತಿರುವ ಚಿತ್ರ “ಸಾರಿ’ ಕರ್ಮ ರಿಟರ್ನ್ಸ್. ಓವರ್ ಲ್ಯಾಪ್ ಹಾಗೂ ಮೋಷನ್ ಕ್ಯಾಪ್ ಎರಡನ್ನು ಉಪಯೋಗಿಸಿ ಮಾಡಿದ ಚಿತ್ರ ನಮ್ಮದು. ಇನ್ನು ಸೂಪರ್ ಹೀರೋಗಳ ಸೀರಿಸ್‌ನಲ್ಲಿ ಒಟ್ಟೂ 18 ಸೂಪರ್ ಹೀರೋಗಳನ್ನು ತೋರಿಸುತ್ತೇವೆ. ಇದರ ಮೊದಲ ಸೂಪರ್ ಹೀರೋ ರಾಗಿಣಿ. ಈ ಚಿತ್ರ ಮುಗಿದ ನಂತರ ಮುಂದಿನ ವರ್ಷದ ಪ್ರಾರಂಭದಲ್ಲಿ ಮುಂದಿನ ಪ್ರಾಜೆಕ್ಟ್ ಪ್ರಾರಂಭಿಸುತ್ತೆವೆ’ ಎಂದರು.
ಚಿತ್ರದ ಛಾಯಾಗ್ರಾಹಕ ರಾಜೀವ್ ಗಣೇಶನ್ ಮಾತನಾಡಿ, ಸಾಮಾನ್ಯವಾಗಿ ಸೂಪರ್ ಹೀರೋ ಚಿತ್ರಗಳು ಅಂದರೆ ಅಲ್ಲಿ ಕಥೆಗೆ ಹೆಚ್ಚಿನ ಮಹತ್ವವಿರದೆ ತಾಂತ್ರಿಕವಾಗಿ ಉತ್ತಮವಾಗಿರುತ್ತದೆ. ಆದರೆ ನಮ್ಮ ಸಾರಿ ಚಿತ್ರ ತಾಂತ್ರಿಕತೆಯ ಜೊತೆಗೆ ಕಥೆಗೆ ಮಹತ್ವವನ್ನು ನೀಡಿರುವ, ಕಮರ್ಷಿಯಲ್ ಚಿತ್ರವಾಗಿದೆ ಎಂದರು.
ನಟಿ ರಾಗಿಣಿ ಮಾತನಾಡಿ, ಚಿತ್ರದ ಹೆಸರು ಸಾಮಾನ್ಯ ಎನಿಸಿದರೂ, ಅದರ ಹಿಂದೆ ಆಳವಾದ ಒಂದು ಅರ್ಥವಿದೆ. ಇನ್ನು ಚಿತ್ರದಲ್ಲಿ ತಾಂತ್ರಿಕವಾಗಿ ನೂತನ ಪ್ರಯೋಗಗಳನ್ನು ಮಾಡಿದ್ದಾರೆ. ಇಂತಹ ಮುಂದುವರಿದ ತಾಂತ್ರಿಕ ಸ್ಟುಡಿಯೋಗಳು ನಮ್ಮಲ್ಲೂ ಇದೆ ಎಂದು ಪರಿಚಯವಾಗಿದ್ದು ಈ ಚಿತ್ರದಿಂದ. ನೂತನ ಪ್ರಯೋಗದ ಭಾಗವಾಗಿರುವುದು ಸಂತಸ ತಂದಿದೆ’ ಎಂದರು.
ಚಿತ್ರಕ್ಕೆ ಬ್ರಹ್ಮ ನಿರ್ದೇಶನ, ರಾಜು ಎಮಿಗ್ನೂರು ಸಂಗೀತ, ರಾಜೀವ್ ಗಣೇಶನ್ ಛಾಯಾಗ್ರಹಣ, ಭೂಪಪತಿ ರಾಜಾ.ಆರ್ ಸಂಕಲನ, ಇಮ್ರಾನ್ ಸರ್ದಾರಿಯಾ ನೃತ್ಯ ಸಂಯೋಜನವಿದೆ. ಚಿತ್ರದಲ್ಲಿ ಅಫ್ಜಲ್, ಅರ್ಜುನ್ ಶರ್ಮ, ಸ್ವರ್ಣಚಂದ್ರ, ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.