ಲಾಸ್ ಏಂಜಲೀಸ್: ಅಮೆರಿಕದ ಕ್ಯಾಲಿಫೋರ್ನಿಯಾ ಪ್ರಾಂತದ ಲಾಸ್ ಏಂಜಲೀಸ್ನ ಅರಣ್ಯ ಪ್ರದೇಶದಲ್ಲಿ ಹೊತ್ತಿದ್ದ ಕಾಡ್ಗಿಚ್ಚು 5,000ಕ್ಕೂ ಹೆಚ್ಚು ಎಕ್ರೆ ಪ್ರದೇಶವನ್ನು ಆವರಿಸಿದೆ. ಜತೆಗೆ ಐವರು ಅಸುನೀಗಿದ್ದಾರೆ. ಕಾಳ್ಗಿಚ್ಚಿನ ಹಿನ್ನೆಲೆಯಲ್ಲಿ ಲಾಸ್ ಏಂಜಲೀಸ್ ಮತ್ತು ಸುತ್ತಮುತ್ತ ಪ್ರದೇಶಗಳಲ್ಲಿ ಇರುವ 49 ಸಾವಿರಕ್ಕೂ ಅಧಿಕ ಮಂದಿಯನ್ನು ಸ್ಥಳಾಂತರಿಸಲಾಗಿದೆ. ಬೆಂಕಿಯ ತೀವ್ರತೆಗೆ ಹಲವು ಕಾರುಗಳು ಮತ್ತು ಮನೆಗಳು ಸುಟ್ಟು ಭಸ್ಮವಾಗಿವೆ. ಬೆಂಕಿಯನ್ನು ನಂದಿಸಲು ಅಗ್ನಿಶಾಮಕದಳದ 1,400 ಸಿಬಂದಿ ಹರಸಾಹಸ ಪಡುತ್ತಿದ್ದಾರೆ.
ಇತ್ತ ಬೆಂಕಿಯ ತೀವ್ರತೆ ಹೆಚ್ಚುತ್ತಲೇ ಇದ್ದು ಪರಿಸ್ಥಿತಿ ಬಹಳ ಅಪಾಯ ಕಾರಿಯಾಗಿರುವುದಲ್ಲದೇ ತೀವ್ರವಾಗಿ ಬೀಸುತ್ತಿರುವ ಗಾಳಿಯು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತಿದೆ ಎಂದು ಅಗ್ನಿಶಾಮಕ ಇಲಾಖೆ ಹೇಳಿದೆ. 5 ಪ್ರತ್ಯೇಕ ಪ್ರದೇಶಗಳಲ್ಲಿ ಕಾಳ್ಗಿಚ್ಚು ಹೊತ್ತಿ ಸುತ್ತಲೂ ಹಬ್ಬುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಗಾಳಿಯ ತೀವ್ರತೆಯೇ ಕಾರಣ: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು ಇದೇ ಮೊದಲೇನಲ್ಲ. ಚಳಿಗಾಲದಲ್ಲಿ ಹೆಚ್ಚು ತೇವಾಂಶವನ್ನು ಪಡೆಯುವ ಈ ಪ್ರದೇಶ ಬೇಸಗೆಯಲ್ಲಿ ಹೆಚ್ಚು ತಾಪಮಾನವನ್ನೂ ಹೊಂದಿರುತ್ತದೆ. ಪರಿಣಾಮವಾಗಿ ಇಲ್ಲಿನ ಸಸ್ಯವರ್ಗಗಳು ಒಣಗಿ ಹೆಚ್ಚು ಕಾಳ್ಗಿಚ್ಚನ್ನು ಸೃಷ್ಟಿಸುತ್ತವೆ. ಇದೀಗ ಕಾಳ್ಗಿಚ್ಚು ಸಾವಿರಾರು ಎಕ್ರೆಗೆ ಹರಡಲು ಇದು ಒಂದು ಕಾರಣವಾಗಿದ್ದು, ಮತ್ತೂಂದು ಕಾರಣ ತೀವ್ರವಾದ ಗಾಳಿಯಾಗಿದೆ. ಕ್ಯಾಲಿಫೋನಿಯಾದ ಹಲವು ಭಾಗಗಳಲ್ಲಿ ಚಂಡಮಾರುತದಷ್ಟು ವೇಗವಾಗಿ ಗಾಳಿ ಬೀಸುತ್ತಿದ್ದು, ಇದು ಬೆಂಕಿಯನ್ನು ಎಲ್ಲೆಡೆ ಹರಡುವಂತೆ ಮಾಡುತ್ತಿದೆ.
ಬೆದರಿದ ಹಾಲಿವುಡ್ನ ಪ್ರಮುಖರು
ಕ್ಯಾಲಿಫೋರ್ನಿಯಾದ ಬಹುಭಾಗ ಅದರಲ್ಲೂ ಲಾಸ್ ಏಂಜಲೀಸ್ ಸುತ್ತಲೂ ಇರುವ ಪ್ರದೇಶಗಳು ಐಷಾರಾಮಿ ಮನೆಗಳನ್ನು ಹೊಂದಿದೆ. ಅದರಲ್ಲೂ ಬಹುಭಾಗ ಹಾಲಿವುಡ್ ತಾರೆಯರ ನೆಲೆಯಾಗಿದೆ. ಕಾಳ್ಗಿಚ್ಚಿನ ಭೀತಿಯಿಂದ ಹಾಲಿವುಡ್ನ ಪ್ರಮುಖರೆಲ್ಲರೂ ತಮ್ಮ ಮನೆಗಳನ್ನು ತೊರೆದಿದ್ದಾರೆ ಎನ್ನಲಾಗಿದೆ. ಅವರಿಗೆ ಸೇರಿದ ವಾಹನಗಳು ಮನೆಗಳು ಬಹುತೇಕ ನಾಶವಾಗಿವೆ. ಅಗ್ನಿಶಾಮಕ ಸಿಬಂದಿ ಬುಲ್ಡೋಜರ್ಗಳ ಮೂಲಕ ಸಾವಿರಾರು ಐಷಾರಾಮಿ ವಾಹನ ಗಳನ್ನು ತೆರವುಗೊಳಿಸುತ್ತಿದ್ದಾರೆ.