ಬೆಂಗಳೂರು: ಇಂದಿರಾ ಕ್ಯಾಂಟೀನ್ ಮೆನು ಬದಲಾಗಲಿದ್ದು, ಗುಣಮಟ್ಟದ ಆಹಾರ ಸೇರ್ಪಡಿಸಲು ಬಿಬಿಎಂಪಿ ಮುಂದಾಗಿದೆ. “ಕ್ಯಾಂಟೀನ್‌ಗಳಲ್ಲಿ ಬೆಳಗ್ಗೆ ಉಪಹಾರಕ್ಕೆ ಬ್ರೆಡ್ ಜಾಮ್ ಮತ್ತು ಮಂಗಳೂರು ಬನ್ಸ್, ಮಧ್ಯಾಹ್ನ ಊಟಕ್ಕೆ ರಾಗಿ ಮುದ್ದೆ, ಚಪಾತಿ ನೀಡಲು ಬಿಬಿಎಂಪಿ ಚಿಂತನೆ ನಡೆಸಿದೆ’ಎಂದು ಪಾಲಿಕೆ ಆಯುಕ್ತ ಮಂಜುನಾಥ ಪ್ರಸಾದ್ ತಿಳಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಆಗಸ್ಟ್ ಎರಡನೇ ವಾರದಿಂದ ಹೊಸ ಆಹಾರ ಪಟ್ಟಿ (ಮೆನು) ಬಹುತೇಕ ಜಾರಿಗೆ ಬರಲಿದೆ. ಪ್ರಸ್ತುತ ಬೆಳಗ್ಗೆ ಉಪಹಾರಕ್ಕೆ 5 ರೂ. ಮಧ್ಯಾಹ್ನ ಊಟ, ರಾತ್ರಿ ಊಟಕ್ಕೆ 10 ರೂ. ದರ ನಿಗದಿಯಾಗಿದ್ದು, ರಾಗಿ ಮುದ್ದೆ ಊಟ, ಚಪಾತಿಗೆ ಎಷ್ಟು ಹಣ ಪಡೆಯಬೇಕೆಂಬುದನ್ನು ಚರ್ಚಿಸಲಾಗುವುದು ಎಂದು ಹೇಳಿದರು.
ಇಂದಿರಾ ಕ್ಯಾಂಟೀನ್ ನಿರ್ವಹಣೆ ಶೆಫ್ ಟಾಕ್, ರಿವಾರ್ಡ್ಸ್ ಸಂಸ್ಥೆಗಳಿಗೆ ನೀಡಲಾಗಿದ್ದು, ಟೆಂಡರ್‌ಆ. 11ಕ್ಕೆ ಮುಗಿಯಲಿದೆ. ಹೀಗಾಗಿ, ಹೊಸ ಟೆಂಡರ್ ಕರೆಯಲಾಗುವುದು ಎಂದು ತಿಳಿಸಿದರು. ಇತ್ತೀಚಿನ ದಿನಗಳಲ್ಲಿ ಇಂದಿರಾ ಕ್ಯಾಂಟೀನ್‌ಗಳಲ್ಲಿ ಕಳಪೆ ಆಹಾರ ನೀಡಲಾಗುತ್ತಿದೆ. ಅದನ್ನು ತಿಂದು ಪೌರಕಾರ್ಮಿಕರು ಅಸ್ವಸ್ಥರಾಗುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿಬಂದಿತ್ತು.
ಇದನ್ನು ಗಂಭೀರವಾಗಿ ಪರಿಗಣಿಸಿರುವ ಬಿಬಿಎಂಪಿ ಟೆಂಡರ್ ಬದಲಾಯಿಸಲು ಮುಂದಾಗಿದೆ. ಮೆನುವಿನಲ್ಲಿ ಟೀ, ಕಾಫಿ ನೀಡುವ ಚಿಂತನೆಯನ್ನೂ ಬಿಬಿಎಂಪಿ ನಡೆಸಿದೆ. ಪೌರ ಕಾರ್ಮಿಕರಿಗೆ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ ಸಿಗುತ್ತಿದೆಯಾದರೂ, ಟೀ, ಕಾಫಿ ಸಿಗುತ್ತಿಲ್ಲ. ಇನ್ನು ಮುಂದೆ ಬೆಳಗಿನ ಜಾವ ಟೀ, ಕಾಫಿಯನ್ನೂ ಸವಿಯಬಹುದು. ಈಗ ಕ್ಯಾಂಟೀನ್‌ನಲ್ಲಿ ಉಪಹಾರಕ್ಕೆ ಇಡ್ಲಿ, ರೈಸ್‌ಬಾತ್ ಮಧ್ಯಾಹ್ನ ಮತ್ತು ರಾತ್ರಿ ಅನ್ನ ಸಂಬಾರ್ ಹಾಗೂ ಮೊಸರನ್ನ ಮಾತ್ರ ನೀಡಲಾಗುತ್ತಿದೆ.