ಉಡುಪಿ: ಶಾಸಕ ಕೆ. ರಘುಪತಿ ಭಟ್ ತಮ್ಮ ಕಚೇರಿಯಲ್ಲಿ ಉಡುಪಿ ಮೆಸ್ಕಾಂ ಅಧಿಕಾರಿಗಳೊಂದಿಗೆ ಮಾ.23 ರಿಂದ ಮೇ 1ರ ವರೆಗಿನ ವಿದ್ಯುತ್ ಬಳಕೆಯ ನಿಗದಿತ ಶುಲ್ಕದಲ್ಲಿ ಬಳಕೆದಾರರಲ್ಲಿ ಇರುವ ಗೊಂದಲದ ಬಗ್ಗೆ ಚರ್ಚೆ ನಡೆಸಿದರು.
ಈ ಸಂದರ್ಭದಲ್ಲಿ ಮೆಸ್ಕಾಂ ಅಧಿಕಾರಿಗಳು ಡಿಸೆಂಬರ್, ಜನವರಿ, ಫೆಬ್ರವರಿ ತಿಂಗಳ ಸರಾಸರಿ ಬಳಕೆಯ ಆಧಾರದ ಮೇಲೆ ಮೇ ತಿಂಗಳಲ್ಲಿ ವಿದ್ಯುತ್ ಬಿಲ್ಲನ್ನು ತಂತ್ರಾಂಶದ ಮೂಲಕ ನೀಡಿದೆ. ಗ್ರಾ.ಪಂ. ಮತ್ತು ನಗರ ಸ್ಥಳೀಯ ಸಂಸ್ಥೆಗಳ ವರ್ಗೀಕರಣದ ಆಧಾರದ ಮೇಲೆ ತಿಂಗಳ ಅನುಸೂಚಿಯ ದರದ ಮೇಲೆ ಶುಲ್ಕವನ್ನು ವಿಧಿಸಿರುವುದಾಗಿ ತಿಳಿಸಿದ್ದಾರೆ.
ನಿಗದಿತ ಅವಧಿಯಲ್ಲಿ ವಿದ್ಯುತ್ ಶುಲ್ಕವನ್ನು ಪಾವತಿಸದೆ ಇರುವವರಿಗೆ ಶೇ. ಒಂದರಷ್ಟು ಬಡ್ಡಿ ದರವನ್ನು ವಿಧಿಸಲಾಗಿದ್ದು, ನಿಗದಿತ ಅವಧಿಯಲ್ಲಿ ಶುಲ್ಕ ಪಾವತಿಸಿದವರಿಗೆ ಹೆಚ್ಚುವರಿಯಾಗಿ ಬಡ್ಡಿಯನ್ನು ವಿಧಿಸುವುದಿಲ್ಲ. ವಿದ್ಯುತ್‌ನ್ನು ಕಡಿಮೆ ಬಳಕೆ ಮಾಡಿ ಸರಾಸರಿ ಬಳಕೆಯ ಆಧಾರದ ಮೇಲೆ ಹೆಚ್ಚಿನ ವಿದ್ಯುತ್ ಬಳಕೆ ಶುಲ್ಕವನ್ನು ವಿಧಿಸಿದ್ದಲ್ಲಿ ಮುಂದಿನ ತಿಂಗಳು ಮರು ಹೊಂದಾಣಿಕೆ ಮಾಡುವಂತೆ ತಂತ್ರಾಂಶವನ್ನು ರೂಪಿಸಿ ಸರಿಪಡಿಸುವಂತೆ ತಿಳಿಸಲಾಯಿತು.
ಈ ಸಂದರ್ಭದಲ್ಲಿ ಶಾಸಕರು ವಿದ್ಯುತ್ ಬಳಕೆಯ ಶುಲ್ಕದ ಬಗ್ಗೆ ಬಳಕೆದಾರರಿಗೆ ಇರುವ ಗೊಂದಲವನ್ನು ಮನದಟ್ಟು ಮಾಡುವಂತೆ ಮೆಸ್ಕಾಂ ಅಧಿಕಾರಿಗಳಲ್ಲಿ ಹಾಗೂ ಲೆಕ್ಕ ಸಹಾಯಕರಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಮೆಸ್ಕಾಂನ ಅಧೀಕ್ಷಕ ಇಂಜಿನಿಯರ್‌ನರಸಿಂಹ ಪಂಡಿತ್, ಕಾರ್ಯನಿರ್ವಾಹಕ ಅಭಿಯಂತ ದಿನೇಶ್ ಉಪಾಧ್ಯ, ಮೆಸ್ಕಾಂನ ಹಿರಿಯ ಲೆಕ್ಕಾಧಿಕಾರಿ ಮತ್ತು ಸಹಾಯಕ ಲೆಕ್ಕಾಧಿಕಾರಿಗಳು ಉಪಸ್ಥಿತರಿದ್ದರು.