ಬೆಂಗಳೂರು: ರಾಜಕೀಯ ಬೆಳವಣಿಗೆಯಲ್ಲಿ ವಿಧಾನಪರಿಷತ್ ಹಂಗಾಮಿ ಸಭಾಪತಿಯಾಗಿ ಬಿಜೆಪಿಯ ರಘುನಾಥ್ ರಾವ್ ಮಲ್ಕಾಪುರೆ ಅವರನ್ನು ನೇಮಿಸಲಾಗಿದೆ. ಸಭಾಪತಿಯಾಗಿದ್ದ ಬಸವರಾಜ ಹೊರಟ್ಟಿ ಅವರು ಬಿಜೆಪಿ ಸೇರ್ಪಡೆಯಾಗಲಿರುವ ಕಾರಣದಿಂದ ರಾಜೀನಾಮೆ ನೀಡಿದ್ದರು.
ವಿಧಾನ ಪರಿಷತ್ ಹಂಗಾಮಿ ಸಭಾಪತಿಯಾಗಿ ರಘುನಾಥ್ ರಾವ್ ಮಲ್ಕಾಪುರೆ ಅವರು ಇಂದು (ಮೇ.17) ಸಂಜೆ ವಿಧಾನಸೌಧದ ಕೊಠಡಿ ಸಂಖ್ಯೆ 117 ರಲ್ಲಿ ಅಧಿಕಾರ ಸ್ವೀಕರಿಸಲಿದ್ದಾರೆ.
ಇದನ್ನೂ ಓದಿ:ಅಮರನಾಥ ಯಾತ್ರೆ ಭದ್ರತಾ ವ್ಯವಸ್ಥೆ: 2 ಮಹತ್ವದ ಸಭೆ ನಡೆಸಿದ ಅಮಿತ್ ಶಾ
ಬಸವರಾಜ ಹೊರಟ್ಟಿ ಬಿಜೆಪಿ ಸೇರ್ಪಡೆಗೆ ತಾಂತ್ರಿಕ ಅಡ್ಡಿ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಹಂಗಾಮಿ ಸಭಾಪತಿ ನೇಮಕಕ್ಕೆ ಬಿಜೆಪಿ ನಿರ್ಧರಿಸಿದೆ. ಹಂಗಾಮಿ ಸಭಾಪತಿ ನೇಮಕ ಸಂಬಂಧ ಸೋಮವಾರ ಸಂಜೆ ರಾಜ್ಯಪಾಲರ ಜೊತೆ ಮಾತುಕತೆ ನಡೆಸಲಾಗಿತ್ತು. ಇಂದು ಈ ಬಗ್ಗೆ ಮುಖ್ಯಮಂತ್ರಿಗಳು ಶಿಫಾರಸ್ಸು ಕಳುಹಿಸಿದ್ದು, ರಾಜ್ಯಪಾಲರು ಅನುಮೋದಿಸಿದ್ದಾರೆ.
ಏನಿದು ತಾಂತ್ರಿಕ ಅಡ್ಡಿ: ಮೇಲ್ಮೆನೆ ಸದಸ್ಯರು ತಮ್ಮ ಸದಸ್ಯ ಸ್ಥಾನಕ್ಕೆ ರಾಜೀನಾಮೆಯನ್ನು ಸಭಾಪತಿ ಅಥವಾ ಉಪ ಸಭಾಪತಿಗೆ ಸಲ್ಲಿಸಬೇಕು. ಆದರೆ ಹೊರಟ್ಟಿಯವರೇ ಸಭಾಪತಿಯಾದ ಕಾರಣ ಸಭಾಪತಿಗೆ ರಾಜೀನಾಮೆ ನೀಡಲು ಆಗುವುದಿಲ್ಲ. ಉಪ ಸಭಾಪತಿ ಸ್ಥಾನ ಖಾಲಿಯಿದೆ. ಹೀಗಾಗಿ ಹೊರಟ್ಟಿ ಬಿಜೆಪಿ ಸೇರ್ಪಡೆ ತಡವಾಗುತ್ತಿದೆ.
ಹಂಗಾಮಿ ಸಭಾಪತಿ ನೇಮಕದ ಬಳಿಕ ಬಸವರಾಜ ಹೊರಟ್ಟಿ ರಾಜೀನಾಮೆ ಅಂಗೀಕಾರವಾಗಲಿದ್ದು, ಬಳಿಕ ಇಂದು ಸಂಜೆ ಅಥವಾ ನಾಳೆ ಹೊರಟ್ಟಿ ಬಿಜೆಪಿ ಸೇರ್ಪಡೆಯಾಗಲಿದ್ದಾರೆ.