ಬೆಂಗಳೂರು: ಬೆಳಗಾವಿಯಲ್ಲಿ ನಡೆಯಲಿರುವ ವಿಧಾನಮಂಡಲ ಅಧಿವೇಶನದಲ್ಲಿ ಬಸವರಾಜ ಹೊರಟ್ಟಿ ಅವರನ್ನು ಮತ್ತೆ ವಿಧಾನ ಪರಿಷತ್ ಸಭಾಪತಿ ಮಾಡಲು ಪ್ರಯತ್ನಗಳು ನಡೆದಿರುವ ಬೆನ್ನಲ್ಲೇ ರಘುನಾಥ್‌ರಾವ್ ಮಲ್ಕಾಪುರೆ ಅವರನ್ನೇ ಸಭಾಪತಿ ಸ್ಥಾನದಲ್ಲಿ ಮುಂದುವರಿಸಲು ಮೂಲ ಬಿಜೆಪಿ ನಾಯಕರು ಒತ್ತಡ ಹೇರುತ್ತಿದ್ದಾರೆ.
ಸುಮಾರು ಮೂರು ದಶಕಗಳ ಕಾಲ ಪಕ್ಷದಲ್ಲಿ ಹಲವಾರು ಹುದ್ದೆ ಹೊಣೆಗಾರಿಕೆ ನಿಭಾಯಿಸಿದ ಮಲ್ಕಾಪುರೆ ಅವರಿಗೆ ಇದುವರೆಗೂ ಯಾವುದೇ ಸ್ಥಾನಮಾನ ದೊರೆತಿಲ್ಲ. ಹೀಗಾಗಿ, ವಿಧಾನಪರಿಷತ್ ಸಭಾಪತಿ ಸ್ಥಾನದಿಂದ ತೆಗೆಯದೆ ಮಂದುವರಿಸಬೇಕೆಂದು ಪಕ್ಷದ ನಾಯಕರ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದು ತಿಳಿದು ಬಂದಿದೆ.
ವಿಧಾನಪರಿಷತ್ ಇತಿಹಾಸದಲ್ಲಿ ಕುರುಬ ಸಮುದಾಯಕ್ಕೆ ಪರಿಷತ್ ಸಭಾಪತಿ ಸ್ಥಾನ ಸಿಕ್ಕಿಲ್ಲ. ಹೀಗಾಗಿ, ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ಅವರನ್ನೇ ಮುಂದುವರಿಸಿದರೆ ಪಕ್ಷಕ್ಕೂ ಲಾಭವಾಗಲಿದೆ ಎಂಬ ಚರ್ಚೆಗಳೂ ನಡೆದಿವೆ ಎನ್ನಲಾಗಿದೆ.
ಈಶ್ವರಪ್ಪ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಮೂಲ ಬಿಜೆಪಿಯ ಕುರುಬ ಸಮುದಾಯದ ನಾಯಕರಿಗೆ ಸಂಪುಟದಲ್ಲಿ ಸ್ಥಾನ ಇಲ್ಲದಂತಾಗಿದೆ. ಇದೀಗ ಮಲ್ಕಾಪುರೆ ಅವರನ್ನೂ ಸಭಾಪತಿ ಸ್ಥಾನದಿಂದ ತೆರವು ಮಾಡಿದರೆ ಸಮುದಾಯದಲ್ಲಿ ಬೇರೆಯದೇ ಸಂದೇಶ ರವಾನೆಯಾಗಬಹುದು. ಹೀಗಾಗಿ, ಮುಂದಿನ ವಿಧಾನಸಭೆ ಚುನಾವಣೆವರೆಗೂ ಮಲ್ಕಾಪುರೆ ಅವರನ್ನೇ ಮುಂದುವರಿಸಿ ಎಂಬುದು ಮೂಲ ಬಿಜೆಪಿ ನಾಯಕರ ಬೇಡಿಕೆ ಎನ್ನಲಾಗಿದೆ.
ಕುರುಬ ಸಮುದಾಯದ ಸಂಘಟನೆಗಳ ನಿಯೋಗ ಸಹ ಈ ಕುರಿತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ , ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್, ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಸೇರಿ ಬಿಜೆಪಿ ನಾಯಕರನ್ನು ಭೇಟಿ ಮಾಡಿ ಮನವಿ ಮಾಡಲು ಮುಂದಾಗಿದೆ ಎಂದು ತಿಳಿದು ಬಂದಿದೆ.