Advertisement

ರಫೀಕರ ಸೈನಿಕ ಫ್ಯಾಕ್ಟರಿ

12:30 AM Feb 26, 2019 | Team Udayavani |

ಯುವಕರನ್ನು ಹುರಿಗೊಳಿಸಿ, ವೀರಯೋಧರನ್ನಾಗಿಸುವ ಮಹ್ಮದ್‌ ರಫೀಕ್‌ರ ತಾಲೀಮು ಕೇಂದ್ರ ಇದು. ಇತ್ತೀಚೆಗಷ್ಟೇ ಸೇನೆಯಲ್ಲಿ ಸೇವಾವಧಿ ಪೂರ್ಣಗೊಳಿಸಿ, ಊರಿಗೆ ಬಂದಿರುವ ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿಯ ವಿನೋಬ ನಗರದ ರಫೀಕ್‌, ಸುಮ್ಮನೆ ಮನೆಯಲ್ಲಿ ಕುಳಿತವರೇ ಅಲ್ಲ. ತಮ್ಮ ಕಣ್ಮುಂದೆ ನೂರಾರು ಯುವಕರು ಓಡಾಡುವುದನ್ನು ಕಂಡು, ಅವರಲ್ಲಿನ ಅಪಾರ ಶಕ್ತಿಯನ್ನು ಮನಗಂಡು, ಆಸಕ್ತರಿಗೆ ಉಚಿತವಾಗಿ “ಸೈನಿಕ ನೇಮಕಾತಿಯ ತರಬೇತಿ’ ನೀಡುತ್ತಿದ್ದಾರೆ…

Advertisement

ಅಲ್ಲೆಲ್ಲೋ ಉದ್ದಕ್ಕೂ ಗಡಿರೇಖೆ ಹಬ್ಬಿಕೊಂಡಿದೆ. ಸಹಸ್ರಾರು ಸೈನಿಕರು ರಾತ್ರಿ ಹಗಲೆನ್ನದೆ ಅದನ್ನು ಕಾಯುತ್ತಾ, ಜೀವದ ಹಂಗು ತೊರೆದು, ದೇಶವನ್ನೇ ಪ್ರಾಣವೆಂದು ನಂಬಿಕೊಂಡು, ಅಲ್ಲಿ ಪಹರೆ ನಡೆಸುವ ದೃಶ್ಯಗಳನ್ನು ನಾವು ಪತ್ರಿಕೆಯ ಫೋಟೋಗಳಲ್ಲೋ, ಸಿನಿಮಾಗಳಲ್ಲೋ ನೋಡಿರುತ್ತೇವೆ. ಹೆಗಲ ಮೇಲೆ ಗನ್‌ ಹೊತ್ತುಕೊಂಡು, ಹಾಗೆ ಎದೆಯುಬ್ಬಿಸಿ ನಡೆಯುವ ಅವರನ್ನು ಕಂಡಾಗ, ನಾವೂ ಅವರಂತೆ ದೇಶ ಕಾಯೆಕು ಅನ್ನೋ ಆಸೆ ನಮ್ಮೊಳಗೂ ಹುಟ್ಟುತ್ತೆ. ಆದರೆ, ಆರ್ಮಿ ಸೇರೋದು ಅಷ್ಟು ಸುಲಭವೇ? ಆ ಹಾದಿ ಯಾವುದು?- ಅನ್ನೋದು ಮಾತ್ರ ಅನೇಕರಿಗೆ ಕಗ್ಗಂಟಿನ ಪ್ರಶ್ನೆ. ಎಷ್ಟೋ ಮಂದಿ ಆರ್ಮಿ ರ್ಯಾಲಿಗೆ ಹೋಗ್ತಾರೆ. ಅದರಲ್ಲಿ ಅನೇಕರು ಫಿಟೆ°ಸ್‌ನಲ್ಲಿ ನಪಾಸಾಗಿ, ಪೆಚ್ಚು ಮೋರೆ ಹಾಕ್ಕೊಂಡು ವಾಪಸು ಬರ್ತಾರೆ. ದೇಶ ಕಾಯಬೇಕು ಅನ್ನೋ ಆಸೆ ಮಾತ್ರ ಕಡೇವರೆಗೂ ಈಡೇರೋದೇ ಇಲ್ಲ.

ಆದರೆ, ಇಲ್ಲೊಂದು ಫ್ಯಾಕ್ಟರಿ ಇದೆ. ಆರ್ಮಿ ಫ್ಯಾಕ್ಟರಿ! ಇಲ್ಲಿ ಪಳಗಿಬಿಟ್ಟರೆ, ಸೇನೆಯ ದಾರಿ ಸಲೀಸು. ಹಾnಂ, ಫ್ಯಾಕ್ಟರಿ ಅಂದ್ರೆ ವಸ್ತುಗಳನ್ನು ತಯಾರಿಸುವ ಕಾರ್ಖಾನೆ ಅಲ್ಲ; ಯುವಕರನ್ನು ಹುರಿಗೊಳಿಸಿ, ವೀರಯೋಧರನ್ನಾಗಿಸುವ ಮಹ್ಮದ್‌ ರಫೀಕ್‌ರ ತಾಲೀಮು ಕೇಂದ್ರ ಇದು. ಇತ್ತೀಚೆಗಷ್ಟೇ ಸೇನೆಯಲ್ಲಿ ಸೇವಾವಧಿ ಪೂರ್ಣಗೊಳಿಸಿ, ಊರಿಗೆ ಬಂದಿರುವ ಬಳ್ಳಾರಿ ಜಿಲ್ಲೆ ಹೂವಿನ ಹಡಗಲಿಯ ವಿನೋಬನಗರದ ರಫೀಕ್‌, ಸುಮ್ಮನೆ ಮನೆಯಲ್ಲಿ ಕುಳಿತವರೇ ಅಲ್ಲ. ತಮ್ಮ ಕಣ್ಮುಂದೆ ನೂರಾರು ಯುವಕರು ಓಡಾಡುವುದನ್ನು ಕಂಡು, ಅವರಲ್ಲಿನ ಅಪಾರ ಶಕ್ತಿಯನ್ನು ಮನಗಂಡು, ಆಸಕ್ತರಿಗೆ ಉಚಿತವಾಗಿ “ಸೈನಿಕ ನೇಮಕಾತಿಯ ತರಬೇತಿ’ ನೀಡುತ್ತಿದ್ದಾರೆ. ಪ್ರಸ್ತುತ ಇವರ ಗರಡಿಯಲ್ಲಿ ಪಳಗುತ್ತಿರುವ ಯುವಕರ ಸಂಖ್ಯೆ 20.

ಅನುಭವ ಧಾರೆಯೆರೆಯುವ ರಫೀಕ್‌
ಸೈನ್ಯಕ್ಕೆ ಸೇರೋದು ಅಷ್ಟು ಸುಲಭದ ಮಾತಲ್ಲ. ಪೊಲೀಸ್‌, ಅರಣ್ಯ ಇಲಾಖೆಗಳ ನೇಮಕಾತಿಗಿಂತಲೂ ಇದು ಕಠಿಣ. ಒಂದುವೇಳೆ ಆರ್ಮಿ ನೇಮಕಾತಿ ರ್ಯಾಲಿಯಲ್ಲಿ ಆಯ್ಕೆಯಾದರೆ, ನಂತರ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಾಸ್‌ ಆಗುವುದು ಅಷ್ಟೇ ಕಷ್ಟ. ಓಟದಲ್ಲಿ ಯಶಸ್ವಿಯಾಗಿ, ಇತರೆ ಫಿಟೆ°ಸ್‌ನಲ್ಲಿ ನಪಾಸಾಗುವವರೂ ಸಾಕಷ್ಟು ಮಂದಿ. ಇವೆಲ್ಲ ವೈಫ‌ಲ್ಯಗಳನ್ನು ಮೀರಿ, ಸೈನಿಕನ ಯೂನಿಫಾರಂ ಧರಿಸುವ ಗುಟ್ಟನ್ನು ಹೇಳಿಕೊಡುತ್ತಾರೆ ರಫೀಕ್‌. ಪಂಜಾಬ್‌, ಜಮ್ಮು- ಕಾಶ್ಮೀರ, ಹರ್ಯಾಣ, ರಾಜಸ್ಥಾನದಂಥ ಕಠಿಣ ಪರಿಸ್ಥಿತಿ ಇರುವ ಗಡಿಗಳನ್ನು ಕಾದ ಅನುಭವವಿರುವ ಇವರಿಗೆ, ದೇಶಪ್ರೇಮವೇ ಉಸಿರು.

ಅಂದಹಾಗೆ, ಈ ತರಬೇತಿ ಕೇಂದ್ರ ಇರೋದು ವಿನೋಬ ನಗರದ ಮಿರಾಕೋರನಹಳ್ಳಿಯಲ್ಲಿ. ಆರಂಭದಲ್ಲಿ ಇವರ ಕಲಿಕಾ ಕೇಂದ್ರಕ್ಕೆ ಸೂಕ್ತ ಸ್ಥಳವೇ ಇದ್ದಿರಲಿಲ್ಲ. ಇದನ್ನು ನೋಡಿ, ಸ್ಥಳೀಯ ನಿವಾಸಿ ಸೋಗಿ ಆಲೇಶಪ್ಪ ಎನ್ನುವವರು ತಮ್ಮ ನಿವೇಶನದಲ್ಲಿ ತರಬೇತಿಗೆ ಅವಕಾಶ ಕಲ್ಪಿಸಿದ್ದಾರೆ. “ವಾರದಲ್ಲಿ ಆರು ದಿನ ಮಿರಾಕೋರನಹಳ್ಳಿಯಲ್ಲಿಯೇ ತರಬೇತಿ ಕೊಡುತ್ತೇವೆ. ಭಾನುವಾರ ಮಾತ್ರ ಹಡಗಲಿ ತಾಲೂಕು ಕ್ರೀಡಾಂಗಣದಲ್ಲಿ ಅಭ್ಯಾಸ ಮಾಡಿಸುತ್ತೇವೆ’ ಅಂತಾರೆ ರಫೀಕ್‌. ಅಲ್ಲಿ ರನ್ನಿಂಗ್‌ ರೇಸ್‌ ಸೇರಿದಂತೆ, ನಿಗದಿತ ಅವಧಿಯ ದೈಹಿಕ ಸಾಮರ್ಥ್ಯದ ಪರೀಕ್ಷೆ ನಡೆಸುತ್ತಾರಂತೆ.

Advertisement

ಗಡಿ ತೋರಿಸಿದ ಇತಿಹಾಸ ಮೇಷ್ಟ್ರು!
ರಫೀಕ್‌ ಸೈನ್ಯ ಸೇರಿದ ಕತೆಯೂ ಅಷ್ಟೇ ರೋಚಕ. ಇದಕ್ಕೆ ಕಾರಣ ಇತಿಹಾಸ ಮೇಷ್ಟ್ರು ಎನ್ನುತ್ತಾರವರು. ಭಾರತದ ಮೇಲೆ ಬ್ರಿಟಿಷರ ದಾಳಿಯ ಕತೆ ಕೇಳುತ್ತಾ, ಹಿರೋಶಿಮಾ- ನಾಗಾಸಾಕಿ ಮೇಲೆ ಅಮೆರಿಕ ಬಾಂಬ್‌ ಎಸೆದ ಪಾಠವನ್ನು ಕಣ್ಮುಂದೆ ಚಿತ್ರಿಸಿಕೊಳ್ಳುತ್ತಾ, ತಮ್ಮೊಳಗೊಬ್ಬ ಸೈನಿಕ ಹುಟ್ಟಿಕೊಂಡಿದ್ದು ಸ್ವತಃ ರಫೀಕರಿಗೇ ಗೊತ್ತಾಗಲಿಲ್ಲ. ಅಷ್ಟು ದಿನ, ಮುಂದೆ ಬೇರಾವುದೋ ಕೆಲಸ ಮಾಡಿದರಾಯಿತು ಅಂದುಕೊಂಡು ಶಾಲೆಗೆ ಬರುತ್ತಿದ್ದ ಹುಡುಗನಿಗೆ, ಒಮ್ಮೆ ಮೇಷ್ಟ್ರು  “ಮುಂದೇನಾಗ್ತಿàಯ?’ ಅಂತ ಕೇಳಿದಾಗ, “ಸೈನಿಕ’ ಎಂದಿದ್ದರಂತೆ. ತಾಯಿ, ರಾಟಿ ಮೆಹಬೂಬಿಯ ಕನಸೂ ಅದೇ ಆಗಿತ್ತು. ಕೊನೆಗೂ ಸೈನಿಕನ ಯೂನಿಫಾರಂ ತೊಟ್ಟು, ಕಾಶ್ಮೀರದ ಹಾದಿ ಹಿಡಿದಿದ್ದರು, ರಫೀಕ್‌. ತಮ್ಮಂತೆಯೇ ಊರಿನ ಯುವಕರೂ ಶಿಸ್ತಿನ ಸಿಪಾಯಿಗಳಾಗಲಿ ಎನ್ನುವ ಕನಸಿಟ್ಟುಕೊಂಡು ರಫೀಕ್‌, ಅವರನ್ನೆಲ್ಲ ಸೈನ್ಯಕ್ಕೆ ಸೇರಿಸಲು ಹುರಿದುಂಬಿಸುತ್ತಿದ್ದಾರೆ.

ಸೈನ್ಯದಲ್ಲಿ ನಾನು ಅನುಭವಿಸಿದ ಎಲ್ಲವನ್ನೂ ಈ ಹುಡುಗರಿಗೆ ಹೇಳಿಕೊಡುತ್ತಿದ್ದೇನೆ. ಡಾಕ್ಟರೋ, ವೈದ್ಯರೋ ಆಗುವ ಈಗಿನವರ ಕನಸುಗಳ ಮಧ್ಯೆ ಅವರೊಳಗೆ ದೇಶಪ್ರೇಮದ ಬೀಜ ಬಿತ್ತಿ, ಸೈನಿಕರನ್ನಾಗಿ ರೂಪಿಸುವ ಹೊಣೆ ನನ್ನದು.
ಮಹ್ಮದ್‌ ರಫೀಕ್‌, ಮಾಜಿ ಸೈನಿಕ

ಕಳೆದ ವರ್ಷ ಮಂಡ್ಯದಲ್ಲಿ ನಡೆದ ಆರ್ಮಿ ನೇಮಕಾತಿ ರ್ಯಾಲಿಯಲ್ಲಿ ಓಟದಲ್ಲಿ ಫೇಲ್‌ ಆಗಿದ್ದೆ. ಕೇವಲ 5-6 ಸೆಕೆಂಡ್‌ಗಳಲ್ಲಿ ಹಿಂದೆ ಬಿದ್ದೆ. ಕಳೆದ 6 ತಿಂಗಳಿಂದ ರಫೀಕ್‌ ಸರ್‌, ನನ್ನನ್ನು ಸುಧಾರಿಸುತ್ತಿದ್ದಾರೆ. ಈಗ ನನ್ನ ಓಟ ವೇಗ ಪಡೆದಿದೆ.
ಬಸವರಾಜ್‌ ಬಾರಿಕರ, ಅಭ್ಯರ್ಥಿ

ರಫೀಕ್‌ ಅವರು, ನೇಮಕಾತಿ ರ್ಯಾಲಿಯಲ್ಲಿನ ದೈಹಿಕ ಸಾಮರ್ಥ್ಯದ ಬಗ್ಗೆ ತರಬೇತಿ ನೀಡಿದರೆ, ನಾನು ಸ್ಪರ್ಧಾತ್ಮಕ ಪರೀಕ್ಷೆಯ ಬಗ್ಗೆ ಇಲ್ಲಿ ಹೇಳಿಕೊಡುತ್ತೇನೆ. ಇಂಗ್ಲಿಷ್‌ ವ್ಯಾಕರಣವೂ ಸೇರಿದಂತೆ, ಸ್ಪರ್ಧಾತ್ಮಕ ಪರೀಕ್ಷೆಗೆ ಯುವಕರನ್ನು ಸಿದ್ಧಗೊಳಿಸುತ್ತಿದ್ದೇನೆ.
ಪ್ರಕಾಶ್‌, ಸ್ಪರ್ಧಾತ್ಮಕ ಪರೀಕ್ಷೆ ತರಬೇತುದಾರ

ವೆಂಕೋಬಿ ಸಂಗನಕಲ್ಲು

Advertisement

Udayavani is now on Telegram. Click here to join our channel and stay updated with the latest news.

Next