Advertisement

ರಫೇಲ್‌ ಇನ್ನೊಂದು ಬೋಫೋರ್ ಆಗದಿರಲಿ, ಶೀಘ್ರ ಬಗೆಹರಿಯಲಿ ವಿವಾದ

08:56 AM Jul 30, 2018 | Team Udayavani |

ಫ್ರಾನ್ಸ್‌ನಿಂದ ರಫೇಲ್‌ ಯುದ್ಧ ವಿಮಾನ ಖರೀದಿಸುವ ವ್ಯವಹಾರದಲ್ಲಿ ಅಕ್ರಮವಾಗಿದೆ ಎಂದು ಹೇಳುತ್ತಿರುವ ಕಾಂಗ್ರೆಸ್‌ ಈಗ ಹೋರಾಡಲು ಸಿದ್ಧತೆ ಮಾಡಿಕೊಂಡಿದೆ. ಪ್ರತಿಯೊಂದು ವಿಮಾನದ ಬೆಲೆ ಮತ್ತು ಒಟ್ಟು ಮೊತ್ತವನ್ನು ಬಹಿರಂಗಪಡಿಸಬೇಕೆನ್ನುವುದು ಕಾಂಗ್ರೆಸ್‌ ಸೇರಿದಂತೆ ವಿಪಕ್ಷಗಳ ಬೇಡಿಕೆ. ಆದರೆ ವ್ಯವಹಾರದ ಒಪ್ಪಂದದಲ್ಲಿ ಬೆಲೆಯನ್ನು ಬಹಿರಂಗಪಡಿಸಬಾರದು ಎಂಬ ಷರತ್ತು ಇರುವ ಕಾರಣ ವಿವರಗಳನ್ನು ಬಹಿರಂಗಗೊಳಿಸುವುದು ಅಸಾಧ್ಯ ಎಂದು ಸರಕಾರ ಹೇಳುತ್ತಿದೆ. ವಿಶ್ವಾಸಮತ ಗೊತ್ತುವಳಿ ಮೇಲಿನ ಚರ್ಚೆಯಲ್ಲೂ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಪ್ರಧಾನವಾಗಿ ರಫೇಲ್‌ ವ್ಯವಹಾರವನ್ನೇ ಉಲ್ಲೇಖೀಸಿದ್ದರು. ಆರೋಪಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಮತ್ತು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಸದನದಲ್ಲೇ ಉತ್ತರ ನೀಡಿದ್ದಾರೆ. ಆದರೆ ಇದನ್ನು ಒಪ್ಪಿಕೊಳ್ಳದ ಕಾಂಗ್ರೆಸ್‌ ಇಬ್ಬರ ವಿರುದ್ಧವೂ ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು, ಹಕ್ಕುಚ್ಯುತಿ ಮಂಡಿಸಲು ಮುಂದಾಗಿದೆ. 

Advertisement

ರಫೇಲ್‌ ಅತ್ಯಾಧುನಿಕ ಯುದ್ಧ ವಿಮಾನವಾಗಿದ್ದು, ನಮ್ಮ ವಾಯುಪಡೆಗೆ ಇದರ ಅಗತ್ಯ ಬಹಳ ಇದೆ ಎನ್ನುವುದರಲ್ಲಿ ಯಾರಿಗೂ ತಕರಾರಿಲ್ಲ. ಏಕೆಂದರೆ ಇದು ಯುಪಿಎ ಸರಕಾರದ ಕಾಲದಲ್ಲೇ ಆಗಿರುವ ವ್ಯವಹಾರ. ಆದರೆ ಎನ್‌ಡಿಎ ಸರಕಾರ ಹಿಂದಿನ ಒಪ್ಪಂದವನ್ನು ರದ್ದುಪಡಿಸಿ 36 ಯುದ್ಧ ವಿಮಾನಗಳನ್ನು ಖರೀದಿಸುವ ಸಲುವಾಗಿ ಹೊಸ ಒಪ್ಪಂದ ಮಾಡಿಕೊಂಡಿದೆ. ಸುಮಾರು 59,000 ಕೋ. ರೂ. ಒಪ್ಪಂದ ಇದು ಎನ್ನಲಾಗುತ್ತಿದೆ. ಭಾರತ ಮತ್ತು ಫ್ರಾನ್ಸ್‌ ಸರಕಾರಗಳು ನೇರವಾಗಿ ಒಪ್ಪಂದದಲ್ಲಿ ಭಾಗಿಯಾಗಿದ್ದರೂ ಅನಿಲ್‌ ಅಂಬಾನಿ ನೇತೃತ್ವದ ರಿಲಯನ್ಸ್‌ ಕಂಪೆನಿಯ ಮೂಲಕ ಈ ಖರೀದಿ ಆಗುತ್ತಿದೆ. ಈ ಖಾಸಗಿ ಸಹಭಾಗಿತ್ವವೇ ಇದರಲ್ಲೇನೋ ಅಕ್ರಮ ನಡೆಯುತ್ತಿದೆ ಎಂಬ ಅನುಮಾನ ಮೂಡಿಸಲು ಸಾಕು. 

70ರ ದಶಕದಿಂದೀಚೆಗಿನ ಪ್ರತಿಯೊಂದು ರಕ್ಷಣಾ ಖರೀದಿಯೂ ವಿವಾದಕ್ಕೊಳಗಾಗಿದೆ ಎಂಬ ಅಂಶವನ್ನು ನೋಡಿದಾಗ ರಫೇಲ್‌ ವ್ಯವಹಾರದ ಸುತ್ತ ವಿವಾದದ ಹುತ್ತಕಟ್ಟಿರುವುದು ಆಶ್ಚರ್ಯವುಂಟು ಮಾಡುವುದಿಲ್ಲ. ರಕ್ಷಣಾ ವ್ಯವಹಾರದಲ್ಲಿ ಒಳಗೊಳ್ಳುವ ಮೊತ್ತ ದೊಡ್ಡದಾಗಿರುತ್ತದೆ, ಬೇರೆ ಬೇರೆ ಹಂತದಲ್ಲಿ ದಲ್ಲಾಳಿಗಳ ಪಾತ್ರವಿರುತ್ತದೆ. ಈ ಅಂಶಗಳೇ ಸರಕಾರದ ಮೇಲೆ ದಾಳಿ ನಡೆಸಲು ವಿಪಕ್ಷಗಳಿಗೆ ರಕ್ಷಣಾ ವ್ಯವಹಾರಗಳು ಅತ್ಯುತ್ತಮ ಅಸ್ತ್ರವಾಗಿರುತ್ತವೆ. ಹಿಂದೆ ವಿಪಕ್ಷ ಸ್ಥಾನದಲ್ಲಿದ್ದ ಬಿಜೆಪಿಯೂ ಇದೇ ಕೆಲಸವನ್ನು ಮಾಡಿತ್ತು. ಹೆಚ್ಚಿನೆಲ್ಲ ರಕ್ಷಣಾ ಖರೀದಿಗಳು ರಾಜಕೀಯ ವಿವಾದವಾಗಿ ಮಾರ್ಪಟ್ಟರೂ ಇಷ್ಟರ ತನಕ ಯಾರಿಗೂ ಶಿಕ್ಷೆಯಾದ ಉದಾಹರಣೆಯಿಲ್ಲ, ಒಂದು ರೂಪಾಯಿಯೂ ವಸೂಲಾಗಿ ಬೊಕ್ಕಸ ಸೇರಿಲ್ಲ. ವರ್ಷಾನುಗಟ್ಟಲೆ ವಿಚಾರಣೆ ನಡೆದು ಕೊನೆಗೆ ಎಲ್ಲ ಆರೋಪಿಗಳು ದೋಷಮುಕ್ತರಾಗುತ್ತಾರೆ. ಬೋಫೋರ್ ಹಗರಣ ಎಬ್ಬಿಸಿದಷ್ಟು ರಾಡಿ ಯಾವ ಹಗರಣವೂ ಎಬ್ಬಿಸಿರಲಿಕ್ಕಿಲ್ಲ. ಈ ಹಗರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದ್ದ ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಆಗಲಿ, ವಿನ್‌ ಛಡ್ಡಾ ಆಗಲಿ, ಕ್ವಾಟ್ರೋಚಿ ಆಗಲಿ ಈಗ  ಬದುಕಿಲ್ಲ. ಆದರೂ ಹಗರಣ ಈಗಲೂ ಕಾಂಗ್ರೆಸ್‌ನ್ನು ಕಾಡುತ್ತಿದೆ.

ಬೋಫೋರ್ನಿಂದಾಗಿ ರಾಜೀವ್‌ ಗಾಂಧಿ ಅಧಿಕಾರ ಕಳೆದುಕೊಂಡದ್ದಲ್ಲದೆ ಅರುಣ್‌ ಸಿಂಗ್‌, ವಿ.ಪಿ.ಸಿಂಗ್‌ ಅವರಂಥ ಆತ್ಮೀಯ ಮಿತ್ರರನ್ನೂ ಕಳೆದು ಕೊಂಡದ್ದು ಈಗ ಇತಿಹಾಸ. ಯುಪಿಎ ಸರಕಾರ ತನ್ನ ಹತ್ತು ವರ್ಷದ ಆಳ್ವಿಕೆ ಕಾಲದಲ್ಲಿ ಶವಪೆಟ್ಟಿಗೆ ಹಗರಣವನ್ನು ಎತ್ತಿ ಹಾಕಿ ಮಾಜಿ ರಕ್ಷಣಾ ಸಚಿವ ಜಾರ್ಜ್‌ ಫೆರ್ನಾಂಡಿಸ್‌ ಅವರನ್ನು ಸಿಕ್ಕಿಸಿ ಹಾಕಿಸುವ ಪ್ರಯತ್ನ ಮಾಡಿತು. ಸೇನೆಯನ್ನು ಬಲಿಷ್ಠಗೊಳಿಸಬೇಕಾದ ರಕ್ಷಣಾ ಖರೀದಿಗಳು ಹೀಗೆ ರಾಜ ಕೀಯ ದ್ವೇಷ ಸಾಧನೆಯ ಅಸ್ತ್ರಗಳಾಗುತ್ತಿರ‌ುವುದು ಈ ದೇಶದ ದುರಂತ. 

1978ರಿಂದೀಚೆಗಿನ ಯಾವ ರಕ್ಷಣಾ ಖರೀದಿಯೂ ಪೂರ್ಣವಾಗಿ ಸೇನೆಗೆ ದಕ್ಕಿಲ್ಲ ಎನ್ನುತ್ತದೆ ಒಂದು ವರದಿ. ಇದು ರಕ್ಷಣಾ ಖರೀದಿಯ ಲ್ಲಾಗುತ್ತಿರುವ ರಾಜಕೀಯ ಕೆಸರೆರಚಾಟದಿಂದ ದೇಶಕ್ಕಾಗುತ್ತಿರುವ ನಷ್ಟವನ್ನು ತಿಳಿಸುತ್ತದೆ. ಒಂದೆಡೆ ಸೇನೆಯ ಆಧುನೀಕರಣದ ಮಾತನಾಡು ತ್ತಲೇ ಇನ್ನೊಂದೆಡೆ ಪ್ರತಿಯೊಂದು ಖರೀದಿಗೂ ಅಡ್ಡಗಾಲು ಹಾಕುವುದರ ಪರಿಣಾಮ ನೇರವಾಗಿ ಸೈನಿಕರ ನೈತಿಕ ಸ್ಥೈರ್ಯದ ಮೇಲಾಗುತ್ತಿದೆ. ಪ್ರತಿ ಸರಕಾರವೂ ಅಧಿಕಾರ ತನಗೆ ಶಾಶ್ವತವಾಗಿರುತ್ತದೆ ಎಂದು ಭಾವಿಸುವುದೇ ಇಂಥ ವಿವಾದಗಳ ಹುಟ್ಟಿಗೆ ಕಾರಣ. ವಾಸ್ತವ ಏನೆಂದರೆ ಸರಕಾರಗಳು ಬದಲಾಗುತ್ತದೆ. ಆದರೆ ಸೇನೆಯ ಅಗತ್ಯಗಳು ಹಾಗೇ ಉಳಿದಿರುತ್ತವೆ. ಹೊಸ ಸರಕಾರ ಬಂದರೂ ಖರೀದಿ ಆಗಲೇಬೇಕು. ಆಗ ವಿಪಕ್ಷದಲ್ಲಿ ರುವವರು ಹುಳುಕು ಹುಡುಕುವ ಪ್ರಯತ್ನ ಮಾಡದೆ ಬಿಡುವುದಿಲ್ಲ ಎನ್ನುವ ಅರಿವು ರಾಜಕಾರಣಿಗಳಿಗೆ ಇರಬೇಕು. ರಫೇಲ್‌ ಇನ್ನೊಂದು ಬೋಫೋರ್ ಆಗುವದು ತಡೆಯಲು ವಿವಾದಗಳನ್ನು ತ್ವರಿತವಾಗಿ ಬಗೆಹರಿಸುವುದು ಅಗತ್ಯ. ಇಲ್ಲದಿದ್ದರೆ ಮುಂಬರುವ ಚುನಾವಣೆಯಲ್ಲಿ ರಫೇಲ್‌ ವ್ಯವಹಾರ ಎನ್‌ಡಿಎ ಪಾಲಿಗೆ ಬೋಫೋರ್ ಆದೀತು.

Advertisement
Advertisement

Udayavani is now on Telegram. Click here to join our channel and stay updated with the latest news.

Next