Advertisement

ಮತ್ತೆ ‘ರಾಧಿಕಾ’ ರಂಗು: ಸಪ್ತಭಾಷೆಗಳಲ್ಲಿ ಬರಲಿದೆ ಹೊಸ ಚಿತ್ರ

04:06 PM May 09, 2023 | Team Udayavani |

ಹಲವು ವರ್ಷಗಳ ಸುದೀರ್ಘ‌ ಅಂತರದ ಬಳಿಕ ನಟಿ ರಾಧಿಕಾ ಕುಮಾರಸ್ವಾಮಿ ಮತ್ತೆ ಬಿಗ್‌ ಸ್ಕ್ರೀನ್‌ನಲ್ಲಿ ಹೊಸ ಇನ್ನಿಂಗ್ಸ್‌ ಶುರು ಮಾಡುವ ತಯಾರಿಯಲ್ಲಿದ್ದಾರೆ.

Advertisement

ಹೌದು, ಶೀಘ್ರದಲ್ಲಿಯೇ ರಾಧಿಕಾ ಕುಮಾರಸ್ವಾಮಿ “ಅಜಾಗ್ರತ’ ಎಂಬ ಸಿನಿಮಾದ ಮೂಲಕ ಮತ್ತೆ ಬಿಗ್‌ ಸ್ಕ್ರೀನ್‌ನಲ್ಲಿ ನಾಯಕಿಯಾಗಿ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಕಳೆದ ಕೆಲವು ತಿಂಗಳಿನಿಂದ ಸದ್ದಿಲ್ಲದೆ “ಅಜಾಗ್ರತ’ ಸಿನಿಮಾದ ಪ್ರೀ-ಪ್ರೊಡಕ್ಷನ್‌ ಕೆಲಸಗಳು ನಡೆಯುತ್ತಿದ್ದು, ಇದೇ ಮೇ 13ರಂದು ಈ ಸಿನಿಮಾದ ಮುಹೂರ್ತ ಸಮಾರಂಭ ಹೈದರಾಬಾದ್‌ನ “ರಾಮನಾಯ್ಡು ಸ್ಟುಡಿಯೋ’ದಲ್ಲಿ ನಡೆಯಲಿದೆ.

ಇನ್ನು ರಾಧಿಕಾ ನಾಯಕಿಯಾಗಿ ನಟಿಸುತ್ತಿರುವ “ಅಜಾಗ್ರತ’ ಸಿನಿಮಾ ಕನ್ನಡ ಸೇರಿದಂತೆ ಏಳು ಭಾಷೆಗಳಲ್ಲಿ ತಯಾರಾಗುತ್ತಿದೆ. ರವಿರಾಜ್‌ ಈ ಸಿನಿಮಾಕ್ಕೆ ಬಂಡವಾಳ ಹೂಡಿ ನಿರ್ಮಾಣ ಮಾಡುತ್ತಿದ್ದಾರೆ. ಈಗಾಗಲೇ ಅಶ್ವಿ‌ನಿ ರಾಮ್‌ ಪ್ರಸಾದ್‌ ಅವರ ಪುತ್ರ ಅರುಣ್‌ ರಾಮ್‌ ಪ್ರಸಾದ್‌ ಅಭಿನಯದ “ಘಾರ್ಗ’ ಸಿನಿಮಾವನ್ನು ನಿರ್ದೇಶಿಸಿರುವ, ಫಿಲಂ ಮೇಕಿಂಗ್‌ನಲ್ಲಿ ಎಂ. ಎಸ್ಸಿ ಪದವಿಧರರಾಗಿರುವ ಜೊತೆಗೆ ವಿಎಫ್ಎಕ್ಸ್‌ನಲ್ಲೂ ಪರಿಣತಿ ಹೊಂದಿರುವ ಯುವ ನಿರ್ದೇಶಕ ಎಂ. ಶಶಿಧರ್‌, “ಅಜಾಗ್ರತ’ ಸಿನಿಮಾಕ್ಕೆ ಆ್ಯಕ್ಷನ್‌-ಕಟ್‌ ಹೇಳುತ್ತಿದ್ದಾರೆ.

ಅಂದಹಾಗೆ, “ಅಜಾಗ್ರತ’ ಒಂದು ಔಟ್‌ ಆ್ಯಂಡ್‌ ಔಟ್‌ ಸೈಕಾಲಜಿಕಲ್‌ ಕ್ರೈಂ-ಥ್ರಿಲ್ಲರ್‌ ಕಥೆ ಹೊಂದಿರುವ ಸಿನಿಮಾವಾಗಿದೆ. ಕನ್ನಡದ ಜೊತೆಗೆ ತೆಲುಗು, ತಮಿಳು, ಮಲೆಯಾಳಂ, ಹಿಂದಿ ಸೇರಿದಂತೆ ಸುಮಾರು ಏಳು ಭಾಷೆಗಳಲ್ಲಿ ಈ ಸಿನಿಮಾ ತೆರೆಗೆ ತರುವ ಯೋಚನೆಯಲ್ಲಿದೆ ಚಿತ್ರತಂಡ. ಮಹಿಳಾ ಪ್ರಧಾನ ಕಥಾಹಂದರದ ಈ ಸಿನಿಮಾದಲ್ಲಿ ನಾಯಕ ನಟಿ ರಾಧಿಕಾ ಕುಮಾರಸ್ವಾಮಿ ಅವರೊಂದಿಗೆ ಸ್ಪರ್ಶ ರೇಖಾ, ದೇವರಾಜ್‌, ಸುಚೇಂದ್ರ ಪ್ರಸಾದ್‌, ವಿನಯಾ ಪ್ರಸಾದ್‌, ಚಿತ್ರಾ ಶೆಣೈ ಸೇರಿದಂತೆ ಕನ್ನಡದ ಹಲವು ಕಲಾವಿದರು “ಅಜಾಗ್ರತ’ ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇವರೊಂದಿಗೆ ತೆಲುಗು ಚಿತ್ರರಂಗದ ರಾವ್‌ ರಮೇಶ್‌, ಪುಷ್ಪ ಸುನಿಲ್, ರಾಘವೇಂದ್ರ ಶ್ರವಣ್‌, ಮಲೆಯಾಳಂನ ಆದಿತ್ಯ ಮೆನನ್‌, ತಮಿಳಿನ ಸಮುದ್ರ ಕಣಿ, ಜಯ್‌ ಪ್ರಕಾಶ್‌ ಮತ್ತು ಬಾಲಿವುಡ್‌ನ‌ ಶ್ರೇಯಸ್‌ ತಲಪಾಡೆ ಮೊದಲಾದವರು ಕೂಡ ಈ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ ಎಂಬುದು ಚಿತ್ರತಂಡದ ಮಾಹಿತಿ.

Advertisement

ಇದೇ ಜೂನ್‌ ತಿಂಗಳಿನಿಂದ “ಅಜಾಗ್ರತ’ ಸಿನಿಮಾದ ಚಿತ್ರೀಕರಣ ಆರಂಭವಾಗಲಿದ್ದು, ಎಲ್ಲ ಅಂದುಕೊಂಡಂತೆ ನಡೆದರೆ, ಇದೇ ವರ್ಷದ ಕೊನೆಗೆ ರಾಧಿಕಾ ಕುಮಾರಸ್ವಾಮಿ ಅವರ ಹೊಸ ಸಿನಿಮಾ “ಅಜಾಗ್ರತ’ ತೆರೆಗೆ ಬರುವ ಸಾಧ್ಯತೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next