Advertisement
ಶ್ರೀ ಕೃಷ್ಣಜನ್ಮಾಷ್ಟಮಿಗೆ ವೇಷ ಹಾಕುವುದು ಈಗೀಗ ಒಂದು ಹೊಸ ಆಯಾಮ ಪಡೆದುಕೊಂಡಿದೆ. ಹಲವರು ಆತ್ಮ ಸಂತೋಷಕ್ಕಾಗಿ, ಮತ್ತೆ ಕೆಲವರು ಕೃಷ್ಣ ಮೇಲಿನ ಭಕ್ತಿಯಿಂದ/ಪ್ರೀತಿಯಿಂದ, ಇನ್ನು ಕೆಲವರು ಮನರಂಜನೆಯ ಜೊತೆಗೆ ಸಾಮಾಜಿಕ ಕಳಕಳಿಯ ಸಂದೇಶ ನೀಡುತ್ತಾ ಸಂಗ್ರಹವಾದ ಹಣವನ್ನು ಆರ್ಥಿಕವಾಗಿ ಹಿಂದುಳಿದವರಿಗೆ, ವೈದ್ಯಕೀಯ ವೆಚ್ಚ-ಶಿಕ್ಷಣ, ಮನೆ ನಿರ್ಮಾಣದಂತಹ ಸಮಾಜಮುಖೀ ಕಾರ್ಯಗಳಿಗಾಗಿ ವೇಷ ಹಾಕುವವರಿದ್ದಾರೆ. ಈ ಪ್ರಯತ್ನಕ್ಕೆ ಪೂರಕವಾಗಿ ಸಮೂಹ ಸಂಚಲನವೊಂದನ್ನು ಈ ಬಾರಿಯ ಶ್ರೀ ಕೃಷ್ಣ ಲೀಲೋತ್ಸವದಂದು ನೃತ್ಯನಿಕೇತನ ಕೊಡವೂರು ಇದರ ವಿದ್ಯಾರ್ಥಿನಿಯರು ಮಾಡಿದ್ದಾರೆ.
Related Articles
Advertisement
ಗೋಪಿಕೆಯರ ವಸ್ತ್ರಾಪಹರಣ, ಅವರೊಂದಿಗೆ ಕಣ್ಣಮುಚ್ಚಾಲೆಯಾಟ, ವೇಣಿಯೊಂದಿಗೆ ವೇಣುನಿನಾದ ಮುಂತಾದ ಕೃಷ್ಣಲೀಲೆಗಳನ್ನು ಸುರಭಿ ಸುಧೀರ್ ಅಭಿನಯಪೂರ್ವಕ ನೃತ್ಯ ಸಂಚಲನದೊಂದಿಗೆ ಸಾಕಾರಗೊಳಿಸಿದರು. ಬಾಹ್ಯ ಚಕ್ಷುಗಳಿಲ್ಲದಿದ್ದರೂ ಅಂತಃಚಕ್ಷುವಿನಿಂದ ಕೃಷ್ಣನನ್ನು ಆರಾಧಿಸುತ್ತಿದ್ದ ಸೂರದಾಸನಿಗೆ ಶ್ರೀಕೃಷ್ಣನು ತನ್ನ ಸುಂದರ ರೂಪವನ್ನು ನೋಡಲು ದಿವ್ಯ ಚಕ್ಷುಗಳನ್ನಿತ್ತು ಮತ್ತೆ ಆತನ ಕೋರಿಕೆಯಂತೆ ಹುಟ್ಟು ಕುರುಡನನ್ನಾಗಿಸಿದ ದೃಶ್ಯಾವಳಿಗಳು ಅಂತಃಕರಣ ಕಲಕುವಂತೆ ಮೂಡಿ ಬಂದವು. ಕೊನೆಯ ನೃತ್ಯದಲ್ಲಿ ಗೋಪಿಕೆಯರ ಮನದಿಂಗಿತವನ್ನು ಪೂರೈಸುವ ವಿವಿಧ ರೂಪ-ಶೈಲಿಗಳಲ್ಲಿ ಪ್ರಕಟವಾಗುವ ತುಂಟ-ನಂಟ ಕೃಷ್ಣನನ್ನು ನಯನಮನೋಹರವಾಗಿ ಚಿತ್ರಿಸಿದ ನೃತ್ಯ ಕಲಾವಿದೆಯರು ಅಭಿನಂದನಾರ್ಹರು.
ಜನನಿ ಭಾಸ್ಕರ ಕೊಡವೂರು