ದೇವದುರ್ಗ: ಮಹಾಸಾದ್ವಿ ಹೇಮರಡ್ಡಿ ಮಲ್ಲಮ್ಮ ಅವರ ಆಶೀರ್ವಾದದಿಂದ ರಾಜ್ಯದಲ್ಲಿ ಹೆಮ್ಮರವಾಗಿ ಬೆಳೆದಿರುವ ರಡ್ಡಿ ಸಮುದಾಯ ಯಾವುದೇ ಪಕ್ಷ, ವ್ಯಕ್ತಿ, ಸಂಘಟನೆಯ ಗುಲಾಮವಲ್ಲ. ರಾಜಕೀಯ ಆಡಳಿತವನ್ನೇ ಬುಡಮೇಲು ಮಾಡುವ ಶಕ್ತಿ ಸಮುದಾಯಕ್ಕಿದೆ ಎಂದು ಹೆಡಗಿಮದ್ರಾ ರಡ್ಡಿ ಗುರುಪೀಠದ ಶಾಂತ ಮಲ್ಲಿಕಾರ್ಜುನ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದ ಸಾರ್ವಜನಿಕ ಕ್ಲಬ್ ಮೈದಾನದಲ್ಲಿ ಆಯೋಜಿಸಿದ್ದ ಹೇಮರಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹೇಮರಡ್ಡಿ ಮಲ್ಲಮ್ಮ ಸಮುದಾಯ ಯಾರ ಹಂಗಿಲ್ಲದೆ 600 ವರ್ಷಗಳ ಹಿಂದೆ ಬೆಳೆದಿದೆ. ನನ್ನ ಭಕ್ತರಿಗೆ ಬಡತನವೇ ನೀಡಬೇಡ ಎಂದು ಹೇಮರಡ್ಡಿ ಮಲ್ಲಮ್ಮ ಶ್ರೀಶೈಲ ಮಲ್ಲಿಕಾರ್ಜುನ ದೇವರ ಬೇಡಿಕೊಂಡಿದ್ದರು. ಅವರ ಭಕ್ತಿಯ ಫಲವೇ ಇಂದು ಸಮುದಾಯ ದೊಡ್ಡ ಮಟ್ಟದಲ್ಲಿ ಬೆಳೆಯಲು ಸಾಧ್ಯವಾಗಿದೆ ಎಂದರು. ಸಮುದಾಯ ಮುಖಂಡರು ರಾಜಕೀಯ ಪಕ್ಷಗಳ, ನಾಯಕರ ಗುಲಾಮರಾಗಬಾರದು. ಸ್ವಂತ ಸರ್ಕಾರ ಹಾಗೂ ಸಾಮ್ರಾಜ್ಯ ಸ್ಥಾಪಿಸುವ ಶಕ್ತಿ ಸಮುದಾಯಕ್ಕಿದೆ.
ರಾಜಕೀಯ ನಾಯಕರ ಹಿಂಬಾಲಕರಾಗದೆ, ಸ್ವಂತಶಕ್ತಿಯಿಂದ ರಾಜಕಾರಣಿಯಾಗಬೇಕು. ಸಾಹಿತ್ಯ, ಕಲೆ, ರಾಜಕೀಯದಲ್ಲಿ ಸಮುದಾಯ ಇನ್ನೂ ಎತ್ತರವಾಗಿ ಬೆಳೆಯಬೇಕಿದೆ. ಬಹುತೇಕ ಪಕ್ಷಗಳು ಹಾಗೂ ಸರ್ಕಾರಗಳು ರಡ್ಡಿ ಸಮಾಜವನ್ನು ರಾಜಕೀಯವಾಗಿ ಬೆಳೆಸಿಕೊಂಡಿವೆ ವಿನಃ ಸೂಕ್ತ ಸ್ಥಾನಮಾನ, ಗೌರವ, ಹುದ್ದೆ ನೀಡಿಲ್ಲ. ಇದು ಸಮುದಾಯಕ್ಕೆ ಮಾಡಿರುವ ಅವಮಾನ. ಇದನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಂಡು ಸ್ವಾವಲಂಬಿಯಾಗಿ ಬದುಕಬೇಕಿದೆ ಎಂದರು.
ಸಮುದಾಯದ ಹಿರಿಯ ಮುಖಂಡ ಸಿ.ಎಸ್. ಪಾಟೀಲ್ ಮಾತನಾಡಿ, ರಡ್ಡಿ ಸಮುದಾಯ ಆರ್ಥಿಕವಾಗಿ ಬಲಿಷ್ಠವಾಗಿದೆ. ಆದರೆ, ಶೈಕ್ಷಣಿಕ, ರಾಜಕೀಯವಾಗಿ ಹಿಂದುಳಿದಿದೆ. ಶಿಕ್ಷಣ ಪಡೆಯುವ ಮೂಲಕ ಸಂಘಟನೆ ಮಾಡಿ, ರಾಜಕೀಯ ಹಿಡಿತ ಸಾಧಿಸಬೇಕು. ಅಧಿಕಾರ ಪಡೆಯಲು ಶಿಕ್ಷಣ ಬಹುಮುಖ್ಯ ಅಸ್ತ್ರವಾಗಿದೆ. ಈ ಹಿನ್ನೆಲೆಯಲ್ಲಿ ಸಮುದಾಯ ಮುಖಂಡರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು ಎಂದು ಹೇಳಿದರು.
ಜಾಲಹಳ್ಳಿಯ ಜಯಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಶಿಖರಮಠದ ಕಪಿಲಸಿದ್ಧರಾಮ ಶಿವಾಚಾರ್ಯ ಸ್ವಾಮೀಜಿ, ನೀಲಗಲ್‌ವುಠದ ಪಂಚಾಕ್ಷರಿ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಮುದಾಯ ತಾಲೂಕು ಅಧ್ಯಕ್ಷ ದೇವೀಂದ್ರಪ್ಪಗೌಡ ಹಂಚಿನಾಳ, ಸಂಜೀವರಡ್ಡಿ ಸಾಹುಕಾರ, ಆದನಗೌಡ ಪಾಟೀಲ್, ನಾಗರಾಜ ಪಾಟೀಲ್, ಶರಣಗೌಡ ಗೌರಂಪೇಟೆ, ಸೋಮಶೇಖರ ಮಂದಕಲ್, ರಾಜಶೇಖರ ಗೌಡ ಮುಷ್ಟೂರು, ವೆಂಕಟರಾಯ ಇದ್ದರು.