Advertisement

ಜಂಟಲ್‌ಮನ್‌ ಗೇಮ್ ನಲ್ಲಿ ಜನಾಂಗೀಯ ನಿಂದನೆ: ಮೋಯಿನ್ ಅಲಿಗೆ ‘ಒಸಾಮ’ಎಂದಿದ್ದ ಆಸೀಸ್ ಆಟಗಾರ

05:42 PM Jan 19, 2021 | Team Udayavani |

ಕ್ರಿಕೆಟ್ ನಲ್ಲಿ ಮತ್ತೆ ಜನಾಂಗೀಯ ನಿಂದನೆ ವಿಚಾರ ಸುದ್ದಿ ಮಾಡುತ್ತಿದೆ. ಸಿಡ್ನಿಯಲ್ಲಿ ಮೊಹಮ್ಮದ್‌ ಸಿರಾಜ್ ಗೆ ಪ್ರೇಕ್ಷಕರು ಅಸಭ್ಯ ಭಾಷೆಯಲ್ಲಿ ನಿಂದನೆ ಮಾಡಿದ ಬಳಿಕ  ಇದರ ಬಗೆಗಿನ ಚರ್ಚೆಗಳು ಮತ್ತೆ ಜೀವ ಪಡೆದಿದೆ.

Advertisement

ಜಂಟಲ್‌ಮನ್‌ ಗೇಮ್ ಎಂದೇ ಹೆಸರಾದ ಕ್ರಿಕೆಟ್ ನಲ್ಲಿ ಈ ಜನಾಂಗೀಯ ನಿಂದನೆ ಪ್ರಕರಣಗಳು ನಡೆದಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಹಲವು ಬಾರಿ ಇಂತಹ ತಲೆ ತಗ್ಗಿಸುವಂತಹ ಫಟನೆಗಳು ನಡೆದಿವೆ. ಸ್ಪರ್ಧೆಯ ಹುರುಪಿನಲ್ಲಿ, ಎದುರಾಳಿಯನ್ನು ಕೆಣಕುವ ಭರದಲ್ಲಿ ಅನೇಕ ಬಾರಿ ಆಟಗಾರರು ಹದ್ದು ಮೀರಿ ನಡೆದುಕೊಳ್ಳುತ್ತಾರೆ. ತಮ್ಮ ಮಾತಿನ ಮೇಲೆ ನಿಯಂತ್ರಣ ಕಳೆದುಕೊಂಡು ಬಿಡುತ್ತಾರೆ. ಇವು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದೂ ಇದೆ. ಇಂತಹ ಕೆಲವು ಘಟನೆಗಳ ಬಗ್ಗೆ ಇಲ್ಲಿದೆ ವಿವರಣೆ.

ದ. ಆಫ್ರಿಕಾ ಆಟಗಾರರನ್ನು ನಿಂದಿಸಿದ್ದ ಸರ್ಫರಾಜ್

2019ರ ಜನವರಿಯಲ್ಲಿ ನಡೆದ ಘಟನೆಯಿದು. ಪಾಕಿಸ್ತಾನದ ನಾಯಕನಾಗಿದ್ದ ಸರ್ಫರಾಜ್ ಅಹಮದ್ ದಕ್ಷಿಣ ಆಫ್ರಿಕಾದ ಆಟಗಾರರ ಆ್ಯಂಡಿಲೇ ಫೆಲುಕ್ವಾಯೊ ರನ್ನು ನಿಂದಿಸಿ ವಿವಾದಕ್ಕೆ ಕಾರಣವಾಗಿದ್ದರು. ಬ್ಯಾಟಿಂಗ್‌ ಮಾಡುತ್ತಿದ್ದ ಫೆಲುಕ್ವಾಯೊ ರನ್ನು ಸರ್ಫರಾಜ್ ಕೆಣಕಿದ್ದು ಸ್ಟಂಪ್ ಮೈಕ್ ನಲ್ಲಿ ರೆಕಾರ್ಡ್ ಆಗಿತ್ತು.

Advertisement

‘’ಏ ಕಪ್ಪು ಮಾನವ, ನಿನ್ನ ತಾಯಿ ಇವತ್ತು ಎಲ್ಲಿದ್ದಾರೆ..’’ ಮುಂತಾದ ಮಾತುಗಳು ಅಂದು ವಿಕೆಟ್ ಹಿಂದೆ ನಿಂತಿದ್ದ ಸರ್ಫರಾಜ್ ಬಾಯಿಂದ ಉದುರಿತ್ತು. ಘಟನೆಗಳ ಬಳಿಕ ಪಾಕ್ ನಾಯಕನನ್ನು ನಾಲ್ಕು ಪಂದ್ಯಗಳ ಕಾಲ ನಿಷೇಧಿಸಲಾಗಿತ್ತು. ಸರ್ಫರಾಜ್ ಬಹಿರಂಗವಾಗಿ ಕ್ಷಮೆಯನ್ನೂ ಕೇಳಿದ್ದರು.

ಮೋಯಿನ್ ಅಲಿಗೆ ಒಸಾಮಾ ಎಂದಿದ್ದ ಆಸೀಸ್ ಆಟಗಾರ

ಈ ಘಟನೆ ನಡೆದಿದ್ದು 2015ರಲ್ಲಿ ಆದರೆ ಬೆಳಕಿಗೆ ಬಂದಿದ್ದು 2018ರಲ್ಲಿ. ಕಾರಣ ನಿಂದನೆಗೆ ಒಳಗಾಗಿದ್ದ ಇಂಗ್ಲೆಂಡ್ ಆಟಗಾರರ ಮೋಯಿನ್ ಅಲಿ ಈ ವಿಚಾರವನ್ನು ಮುಚ್ಚಿಟ್ಟಿದ್ದರು.

ಅದು 2015ರ ಆ್ಯಶಸ್ ಸರಣಿ. ಆ ಸಮಯದಲ್ಲಿ ಮೈದಾನದಲ್ಲಿ ಆಸೀಸ್ ಆಟಗಾರರನೊಬ್ಬ ಮೋಯಿನ್ ಅಲಿ‌ಗೆ ‘ಒಸಾಮಾ’ ಎಂದು ಕರೆದಿದ್ದ. 2018ರಲ್ಲಿ ತನ್ನ ಪುಸ್ತಕದಲ್ಲಿ ಈ ಬಗ್ಗೆ ಬರೆದುಕೊಂಡಿದ್ದ ಮೋಯಿನ್, ಅಂದು ನಾನು ಏನು ಕೇಳುತ್ತಿದ್ದೇನೆ ಎಂದು ನನಗೆ ನಂಬಲಾಗಿರಲಿಲ್ಲ. ಅಂದು ಅಸಾಧ್ಯ ಕೋಪ ಬಂದಿತ್ತು ಎಂದು ಹೇಳಿಕೊಂಡಿದ್ದರು. ಆದರೆ ಆ ಆಸೀಸ್ ಆಟಗಾರನ ಹೆಸರು ಹೇಳಲು ಮೋಯಿನ್ ನಿರಾಕರಿಸಿದ್ದಾರೆ.

ಮಂಕೀಗೇಟ್ ಪ್ರಕರಣ

2008ರ ಸಿಡ್ನಿ ಟೆಸ್ಟ್‌ ಪಂದ್ಯದಲ್ಲಿ ನಡೆದ ಈ ಪ್ರಕರಣ ದೊಡ್ಡ ವಿವಾದವನ್ನೇ ಸೃಷ್ಟಿಸಿತ್ತು. ಹರ್ಭಜನ್ ಸಿಂಗ್ ಮತ್ತು ಆ್ಯಂಡ್ರ್ಯೂ ಸೈಮಂಡ್ಸ್ ನಡುವೆ ನಡೆದ ಈ ಗಲಾಟೆ ಬಾರ್ಡರ್- ಗವಾಸ್ಕರ್ ಟ್ರೋಫಿಯ ಸ್ವರೂಪವನ್ನೇ ಬದಲಾಯಿಸಿತು. ಬ್ಯಾಟಿಂಗ್‌ ಮಾಡುತ್ತಿದ್ದ ಹರ್ಭಜನ್ ತನ್ನನ್ನು ‘ಕೋತಿ’ಎಂದು ಮೂದಲಿಸಿದ್ದರು ಎಂದು ಸೈಮಂಡ್ಸ್ ದೂರಿದ್ದರು. ಆದರೆ ಭಜ್ಜಿ ಇದನ್ನು ನಿರಾಕರಿಸಿದ್ದರು. ಆದರೆ ಮ್ಯಾಚ್ ರೆಫ್ರಿ ಹರ್ಭಜನ್ ಗೆ ಮೂರು ಪಂದ್ಯಗಳ ನಿಷೇಧ ಹೇರಿದ್ದರು.

ಟೀಂ ಇಂಡಿಯಾ ಇದನ್ನು ವಿರೋಧಿಸಿತ್ತು. ಘಟನೆಯ ಬಗ್ಗೆ ಸರಣಿಯ ನಡುವೆ ಆಸೀಸ್ ಕೋರ್ಟ್ ನಲ್ಲಿ ವಿಚಾರಣೆಯೂ ನಡೆದಿತ್ತು. ಸೈಮಂಡ್ಸ್ ಪರ ಆಗಿನ ನಾಯಕ ರಿಕಿ ಪಾಂಟಿಂಗ್, ಮ್ಯಾಥ್ಯೂ ಹೇಡನ್ ಮತ್ತು ಮೈಕಲ್ ಕಾರ್ಕ್ ಸಾಕ್ಷಿ ನುಡಿದಿದ್ದರು. ಹರ್ಭಜನ್ ಪರ ಸಚಿನ್ ತೆಂಡೂಲ್ಕರ್ ಕೋರ್ಟ್ ಗೆ ಹಾಜರಾಗಿದ್ದರು. ಕೊನೆಗೆ ಹರ್ಭಜನ್ ಗೆ ಪಂದ್ಯದ ಸಂಭಾವನೆಯ ಅರ್ಧದಷ್ಟನ್ನು ದಂಡ ವಿಧಿಸಿ ಪ್ರಕರಣ ಅಂತ್ಯಗೊಳಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next