ರಬಕವಿ ಬನಹಟ್ಟಿ: ರಬಕವಿ ಬನಹಟ್ಟಿ ತಾಲ್ಲೂಕಿನ ಸುತ್ತ ಮುತ್ತಲಿನ ಗ್ರಾಮದಲ್ಲಿ ವೀಳ್ಯದೆಲೆ ಬೆಳೆದ ರೈತರು ಹರ್ಷದಲ್ಲಿದ್ದಾರೆ.
ಇತ್ತೀಚೆಗೆ ವೀಳ್ಯದೆಲೆ ಬೆಲೆ ಹೆಚ್ಚಳವಾಗಿದೆ. ಈ ಮೊದಲು ಹನ್ನೆರಡು ಸಾವಿರ ವೀಳ್ಯದೆಲೆ ಒಂದು ಕಟ್ಟು ರೂ. 1500 ರಿಂದ ರೂ. 2000 ಮಾರಾಟವಾಗುತ್ತಿತ್ತು.
ಸದ್ಯ ವೀಳ್ಯದೆಲೆಯ ಬೆಲೆಯನ್ನು ಏರಿಕೆ ಕಂಡಿದ್ದು, ಹನ್ನೆರಡು ಸಾವಿರ ವೀಳ್ಯದೆಲೆಗಳ ಒಂದು ಕಟ್ಟು ರೂ. 4500 ರಿಂದ 5000 ಮಾರಾಟವಾಗುತ್ತಿದೆ ಎನ್ನುತ್ತಾರೆ ಇಲ್ಲಿಯ ರೈತರಾದ ಶಿವಪ್ಪ ಹಳಿಂಗಳಿ.
ಈ ಭಾಗದಲ್ಲಿ ಬೆಳೆದ ವೀಳ್ಯದೆಲೆಯನ್ನು ಬೆಂಗಳೂರು, ಮಹಾರಾಷ್ಟ್ರದ ಮುಂಬೈ, ಸಾತರಾ, ಕರಾಡಗಳಿಗೂ ಕಳುಹಿಸಲಾಗುತ್ತಿದೆ. ಅಲ್ಲಿಂದ ಇಲ್ಲಿಯ ಎಲೆಗಳು ಗುಜರಾತ್ ನ ಅಹಮದಾಬಾದ್ ನಗರವನ್ನು ತಲುಪುತ್ತವೆ.
ತಮಿಳುನಾಡಿನ ಮದ್ರಾಸ್ ಭಾಗದಿಂದ ಎಲೆಗಳ ಪೂರೈಕೆ ಕಡಿಮೆಯಾಗಿರುವುದರಿಂದ ಈ ಭಾಗದ ಎಲೆಗಳಿಗೆ ಭಾರಿ ಬೇಡಿಕೆ ಉಂಟಾಗಿದೆ. ದಿನನಿತ್ಯ ಬೆಳಗ್ಗೆ ಮತ್ತು ಸಂಜೆ ಹತ್ತಾರು ವಾಹನಗಳು ಸಮೀಪದ ಜಗದಾಳ ಮತ್ತು ನಾವಲಗಿ ಗ್ರಾಮಕ್ಕೆ ಆಗಮಿಸಿ ಎಲೆಗಳನ್ನು ತೆಗೆದುಕೊಂಡು ಹೋಗುತ್ತವೆ.
ಬೆಳಗ್ಗೆ ಮೂರು ಗಂಟೆಗೆ ವ್ಯಾಪಾರ
ಸಮೀಪದ ಜಗದಾಳ ಗ್ರಾಮದಲ್ಲಿ ಬೆಳಗ್ಗೆ ಮೂರು ಗಂಟೆಗೆ ಎಲೆಗಳ ವ್ಯಾಪಾರ ಮತ್ತು ಸೌದಾ ಆರಂಭವಾಗುತ್ತದೆ. ಬೆಳಗಿನ ಐದುವರೆ ಅನ್ನುವಷ್ಟರಲ್ಲಿ ವ್ಯಾಪಾರ ಮುಕ್ತಾಯವಾಗುತ್ತದೆ.
ಸ್ಥಳೀಯ ಮಾರಾಟಗಾರರು ಇಲ್ಲಿಯೇ ಬಂದು ಎಲೆಗಳನ್ನು ತೆಗೆದುಕೊಂಡು ಹೋಗುತ್ತಾರೆ ಎನ್ನುತ್ತಾರೆ ಇಲ್ಲಿಯ ಸ್ಥಳೀಯ ರೈತರಾದ ಸದಾಶಿವ ಬಂಗಿ.