ರಬಕವಿ ಬನಹಟ್ಟಿ: ರಬಕವಿ ಬನಹಟ್ಟಿ ಸಮೀಪದ ಕೃಷ್ಣಾ ನದಿಗೆ ಮಹೀಷವಾಡಗಿ ಸೇತುವೆ ನಿರ್ಮಾಣ ಕಾರ್ಯವನ್ನು ಶೀಘ್ರವಾಗಿ ಮುಕ್ತಾಯಗೊಳಿಸುವಂತೆ ಆಗ್ರಹಿಸಿ ರಬಕವಿ ನಾಗರಿಕರು ಮಂಗಳವಾರ ತೇರದಾಳದಲ್ಲಿ ನಡೆದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕೆ.ಎಂ.ಜಾನಕಿಯವರಿಗೆ ಮನವಿ ಸಲ್ಲಿಸಿದರು.
ಡಾ.ರವಿ ಜಮಖಂಡಿ ಮಾತನಾಡಿ, ಮಹೀಷವಾಡಗಿ ಸೇತುವೆ ಕಾಮಗಾರಿ ಬಹಳಷ್ಟು ನಿಧಾನ ಗತಿಯಲ್ಲಿ ಸಾಗುತ್ತಿದೆ. ಈ ಸೇತುವೆ ನಿರ್ಮಾಣವಾದರೆ ರಬಕವಿ ಬನಹಟ್ಟಿ ಹಾಗೂ ಅಥಣಿ ತಾಲ್ಲೂಕಿನ ಬಹುತೇಕ ನಗರ ಮತ್ತು ಗ್ರಾಮೀಣ ಪ್ರದೇಶಗಳಿಗೆ ಅನುಕೂಲವಾಗುತ್ತದೆ.
ಸೇತುವೆ ಕಾಮಗಾರಿಯನ್ನು ವೀಕ್ಷಣೆ ಮಾಡುವಂತೆ ಮನವಿ ಮಾಡಿದರು. ಅದೇ ರೀತಿಯಾಗಿ ರಬಕವಿ ಬನಹಟ್ಟಿ ತಾಲ್ಲೂಕು ಘೋಷಣೆಯಾದರೂ ಇನ್ನೂವರೆಗೆ ಮಿನಿ ವಿಧಾನ ಸೌಧ ನಿರ್ಮಾಣವಾಗದೆ ಇರುವುದರಿಂದ ಸಾರ್ವಜನಿಕರಿಗೆ ಬಹಳಷ್ಟು ತೊಂದರೆಯಾಗುತ್ತಿದೆ. ಒಂದೇ ಸೂರಿನಡಿ ಕಚೇರಿಗಳು ಆರಂಭಗೊಂಡರೆ ಸಾರ್ವಜನಿಕರಿಗೆ ಬಹಳಷ್ಟು ಅನುಕೂಲವಾಗಲಿದೆ.
ಇನ್ನೂ ರಬಕವಿ ನಾಗರಿಕರು ಯಾವುದೇ ದೂರುಗಳನ್ನು ದಾಖಲಿಸಲು ತೇರದಾಳ ಪೊಲೀಸ್ ಠಾಣೆಗೆ ಅಲೆದಾಡುವಂತಾಗಿದೆ. ಇದರಿಂದಾಗಿ ಈ ಭಾಗದ ನಾಗರಿಕರಿಗೆ, ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಪೊಲೀಸ್ ಕಚೇರಿ ನಿರ್ಮಾಣ ಮಾಡಲಿಕ್ಕೆ ಒಂದು ಎಕರೆ ಭೂ ಪ್ರದೇಶವನ್ನು ದೇಣಿಗೆಯನ್ನಾಗಿ ಸ್ಥಳೀಯರು ನೀಡಿದ್ದಾರೆ ಎಂದು ರವಿ ಜಮಖಂಡಿ ಜಿಲ್ಲಾಧಿಕಾರಿ ಕೆ.ಎಂ. ಜಾನಕಿಯವರಿಗೆ ಮನವಿಯನ್ನು ಸಲ್ಲಿಸಿದರು.
ಜಿಲ್ಲಾಧಿಕಾರಿಗಳು ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಡಾ.ಜಮಖಂಡಿ ತಿಳಿಸಿದರು. ಜಮಖಂಡಿ ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ ಇದ್ದರು.
ಸಂಜಯ ತೆಗ್ಗಿ, ಪ್ರವೀಣ ಹಜಾರೆ, ಶ್ರೀಶೈಲ ದಲಾಲ, ಸಂಗಪ್ಪ ಕುಂದಗೋಳ, ರವಿ ಗಡಾದ, ಆನಂದ ಜುಗಳಿ, ಮಹಾದೇವ ಧೂಪದಾಳ, ಸಂಜಯ ತೇಲಿ, ಇಂದ್ರು ಲಾಳಕಿ ಸೇರಿದಂತೆ ಅನೇಕರು ಇದ್ದರು.