ರಬಕವಿ-ಬನಹಟ್ಟಿ: ಮೂರು ನಾಲ್ಕು ತಿಂಗಳಿಂದ ಕೃಷ್ಣಾ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದರಿಂದ ರಬಕವಿ ಬನಹಟ್ಟಿ ಹಾಗೂ ಅಥಣಿ ತಾಲ್ಲೂಕಿನ ನಗರ ಮತ್ತು ಗ್ರಾಮೀಣ ಭಾಗದ ಜನರಿಗೆ ಮಹೀಷವಾಡಗಿ ಸೇತುವೆ ಪ್ರಮುಖ ಸಂಪರ್ಕದ ಮಾರ್ಗವಾಗಿತ್ತು.
ಈಗ ಕೃಷ್ಣಾ ನದಿಗೆ ಸಾಕಷ್ಟು ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವುದರಿಂದ ಸಂಪರ್ಕ ಕಲ್ಪಿಸುವ ಮಹೀಷವಾಡಗಿ ಸೇತುವೆ ಜಲಾವೃತಗೊಂಡಿದೆ. ಇದರಿಂದಾಗಿ ಎರಡು ತಾಲ್ಲೂಕಿನ ಜನರಿಗೆ ಸಂಪರ್ಕ ಕಡಿತಗೊಂಡು ತೊಂದರೆಯಾಗಿದೆ.
ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶಗಳಾದ ಕೊಯ್ನಾ, ನವುಜಾ ಮತ್ತು ಮಹಾಬಳೇಶ್ವರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮಳೆ ಸುರಿಯುತ್ತಿದ್ದು ಮತ್ತು ಮಹಾರಾಷ್ಟ್ರದ ವಿವಿಧ ಜಲಾಶಯಗಳಿಂದ ಕೃಷ್ಣಾ ನದಿಗೆ 20 ಸಾವಿರ ಕ್ಯೂಸೆಕ್ ಒಳ ಹರಿವು ಇರುವುದರಿಂದ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತಿದೆ.
ಬೋಟ್ ಆರಂಭಿಸಲು ಒತ್ತಾಯ: ಕೃಷ್ಣಾ ನದಿಯಲ್ಲಿ ನೀರು ಹೆಚ್ಚಾಗುತ್ತಿದ್ದು ಸಂಪರ್ಕ ಕಲ್ಪಿಸುವ ಸೇತುವೆ ಜಲಾವೃತವಾಗಿರುವುದರಿಂದ ಎರಡು ತಾಲ್ಲೂಕಿನ ನದಿ ತೀರದ ಜನರಿಗೆ ಸಮಸ್ಯೆಯಾಗುತ್ತಿದೆ. ಕೇವಲ ಐದಾರು ಕಿ.ಮೀ ದೂರದಲ್ಲಿರುವ ಗ್ರಾಮಗಳ ಜನರು ಈಗ ಇಪ್ಪತ್ತೈದು ಕಿ.ಮೀ ದೂರ ಸುತ್ತ ಹಾಕಿ ಬರಬೇಕಾಗಿದೆ. ಆದ್ದರಿಂದ ಸಂಬಂಧಪಟ್ಟ ಇಲಾಖೆಯವರು ಆದಷ್ಟು ಬೇಗನೆ ಬೋಟ್ ಸೇವೆಯನ್ನು ಆರಂಭಿಸಬೇಕಾಗಿದೆ.
ಕೃಷ್ಣಾ ನದಿ ತುಂಬಿ ಹರಿಯುತ್ತಿದ್ದರೂ ರಬಕವಿ, ಬನಹಟ್ಟಿ, ರಾಮಪುರ ಹಾಗೂ ಹೊಸೂರಗಳಿಗೆ ಮೂರು ದಿನಕ್ಕೊಂದು ಬಾರಿ ನಳದ ನೀರು ಪೂರೈಸಲಾಗುತ್ತಿದೆ. ಈ ಮೊದಲು ಎರಡು ದಿನಕ್ಕೆ ಒಂದು ಬಾರಿ ನೀರು ಪೂರೈಸಲಾಗುತ್ತಿತ್ತು.
ಕೃಷ್ಣಾ ನದಿಗೆ ಮಂಗಳವಾರ 20ಸಾವಿರ ಕ್ಯೂಸೆಕ್ ಒಳ ಹರಿವು ಇದೆ. ಮಹಾರಾಷ್ಟ್ರದಲ್ಲಿ ಮಳೆ ಸಾಮಾನ್ಯವಾಗಿದೆ.
– ಸಂತೋಷ ಕಾಮಗೌಡ, ಉಪವಿಭಾಗಾಧಿಕಾರಿಗಳು ಜಮಖಂಡಿ