ರಬಕವಿ-ಬನಹಟ್ಟಿ: ರಾಜಸ್ಥಾನದ ಉದಯಪುರದಲ್ಲಿ ನಡೆದ ಕನ್ಹಯ್ಯ ಲಾಲ್ ಅವರ ಹತ್ಯೆಯನ್ನು ಪ್ರತಿಯೊಬ್ಬ ಹಿಂದೂ ಖಂಡಿಸಲೇಬೇಕು. ಇದು ಕೇವಲ ವಿಶ್ವ ಹಿಂದೂ ಪರಿಷತ್ ಮತ್ತ ಶ್ರೀರಾಮ ಸೇನೆಯ ಕಾರ್ಯವಲ್ಲ. ಇದು ಪ್ರತಿಯೊಬ್ಬ ಭಾರತೀಯನ ಕಾರ್ಯವಾಗಬೇಕಾಗಿದೆ. ಈ ಕುರಿತು ಹಿಂದೂಗಳು ಜಾಗೃತರಾಗಬೇಕಾಗಿದೆ ಎಂದು ಹಿಂದೂ ಸಂಘಟನೆಯ ಮುಖಂಡ ಶಿವಾನಂದ ಗಾಯಕವಾಡ ತಿಳಿಸಿದರು.
ಅವರು ಗುರುವಾರ ಸ್ಥಳೀಯ ತಹಶೀಲ್ದಾರ್ ಕಾರ್ಯಾಲಯದಲ್ಲಿ ಕನ್ಹಯ್ಯ ಲಾಲ್ ಹತ್ಯೆಯನ್ನು ಖಂಡಿಸಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಮತ್ತೊರ್ವ ಮುಖಂಡ ಪ್ರದೀಪ ದೇಶಪಾಂಡೆ ಮಾತನಾಡಿ, ದೇಶದಲ್ಲಿ ಹಿಂದೂಗಳು ಭಯದ ವಾತಾವರಣದಲ್ಲಿ ಬದುಕುತ್ತಿದ್ದಾರೆ. ಭಯೋತ್ಪಾದಕರು ದೇಶದ ಒಳಗಡೆಯೇ ಇದ್ದಾರೆ. ಕನ್ಹಯ್ಯ ಲಾಲ್ ಹಂತಕರಿಗೆ ಕಠಿಣ ಶಿಕ್ಷೆಯಾಗಬೇಕು. ನಮ್ಮ ರಕ್ಷಣೆ ಮಾಡುವ ಪೊಲೀಸ್ರ ಮೇಲೂ ದಾಳಿ ಮಾಡುತ್ತಿರುವುದು ಖಂಡನೀಯವಾಗಿದೆ. ಈ ಕುರಿತು ಬುದ್ಧಿ ಜೀವಿಗಳು ಮಾತನಾಡದೆ ಇರುವುದು ಖಂಡನೀಯವಾಗಿದೆ. ಬುದ್ಧಿ ಜೀವಿಗಳು ಲದ್ದಿ ಜೀವಿಗಳಾಗುತ್ತಿದ್ದಾರೆ ಎಂದರು.
ಕನ್ಹಯ್ಯ ಲಾಲ್ ಅವರನ್ನು ಹತ್ಯೆ ಮಾಡಿದ ಹಂತಕರಿಗೆ ಕಠಿಣ ಶಿಕ್ಷೆಯನ್ನು ನೀಡಬೇಕು. ಮುಂದೆ ಈ ರೀತಿಯ ಘಟನೆಗಳು ನಡೆಯದಂತೆ ಎಚ್ಚರ ವಹಿಸಬೇಕಾಗಿದೆ ಎಂದು ದೇಶಪಾಂಡ ತಿಳಿಸಿದರು. ಸದಾಶಿವ ಮಾಳಿ ಮಾತನಾಡಿದರು.
ಈ ಸಂದರ್ಭದಲ್ಲಿ ಶ್ರೀರಾಮ ಸೇನೆಯ ಕಾರ್ಯಕರ್ತರು ಹಂತಕರಿಗೆ ಶಿಕ್ಷೆಯನ್ನು ನೀಡಬೇಕು ಎಂದು ಆಗ್ರಹಿಸಿ ತಹಶೀಲ್ದಾರ್ ಎಸ್.ಬಿ. ಇಂಗಳೆ ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಬಸವರಾಜ ಗಾಯಕವಾಡ, ಯಮನಪ್ಪ ಕೋರಿ, ರವೀಂದ್ರ ಕಾಮಗೊಂಡ ಮತ್ತು ಸದಾಶಿವ ಗೋಡಸೆ ಸೇರಿದಂತೆ ಅನೇಕರು ಇದ್ದರು.