Advertisement

ರಬಕವಿ-ಬನಹಟ್ಟಿ: ದ್ರಾಕ್ಷಿ ಬೆಳೆಗೆ ದಾವನಿ ರೋಗ ಲಗ್ಗೆ- ಆತಂಕದಲ್ಲಿ ರೈತ

05:11 PM Oct 22, 2024 | Team Udayavani |

ಉದಯವಾಣಿ ಸಮಾಚಾರ
ರಬಕವಿ-ಬನಹಟ್ಟಿ: ವಾತಾವರಣದಲ್ಲಾದ ವೇಗದ ಬದಲಾವಣೆಯಿಂದ ಇಬ್ಬನಿ, ಮೋಡ ಕವಿದ ವಾತಾವರಣ, ತುಂತುರು ಮಳೆಯಿಂದ ದ್ರಾಕ್ಷಿ ಬೆಳೆಗೆ “ದಾವನಿ’ ರೋಗ ಆವರಿಸಿದೆ. ಕಳೆದ ವರ್ಷವೂ ದ್ರಾಕ್ಷಿಗೆ ಈ ರೋಗ ಆವರಿಸಿತ್ತು. ಕಾಂಡ ಕೊರೆಯುವ ಕೀಟಗಳು ಮುತ್ತಿದ್ದವು. ಪ್ರಸಕ್ತ ವರ್ಷವೂ ವೇಗವಾಗಿ ಈ ರೋಗ ಲಗ್ಗೆಯಿಟ್ಟಿದ್ದು, ಬೆಳೆಗಾರ ತೀವ್ರ ಆತಂಕಕ್ಕೊಳಗಾಗಿದ್ದಾನೆ.

Advertisement

ರಬಕವಿ-ಬನಹಟ್ಟಿ ತಾಲೂಕಿನಲ್ಲಿ ಒಟ್ಟು 2 ಸಾವಿರ ಎಕರೆಯಷ್ಟು ದ್ರಾಕ್ಷಿ ಬೆಳೆಲಾಗಿದೆ. ಅದರಲ್ಲಿ ಜಗದಾಳ, ಬಂಡಿಗಣಿ, ನಾವಲಗಿ, ಹಿಪ್ಪರಗಿ ಗ್ರಾಮಗಳಲ್ಲಿಯೇ ಹೆಚ್ಚು ಪ್ರಮಾಣದಲ್ಲಿ ಬೆಳೆಯಲಾಗಿದೆ. ಇಳುವರಿ ಗಣನೀಯವಾಗಿ ಕುಸಿಯುವ ಭೀತಿ ರೈತರನ್ನು ಕಾಡುತ್ತಿದೆ.

25 ವರ್ಷಗಳಿಂದ ದ್ರಾಕ್ಷಿ: ಕಬ್ಬು, ಅರಿಷಿನ ಬೆಳೆಯುತ್ತಿದ್ದ ಈ ಭಾಗದಲ್ಲಿ ಮೊದಲ ಬಾರಿ ಜಗದಾಳದ ಉಳ್ಳಾಗಡ್ಡಿ ಕುಟುಂಬ ದ್ರಾಕ್ಷಿ ಬೆಳೆಯುವ ಮೂಲಕ ಈ ಭಾಗದಲ್ಲೂ ದ್ರಾಕ್ಷಿ ಬೆಳೆಯಬಹುದೆಂಬುದನ್ನು ತೋರಿಸಿಕೊಟ್ಟಿದೆ. ಆದರೆ ಇತ್ತೀಚಿನ ದಿನಗಳಲ್ಲಿ ದ್ರಾಕ್ಷಿಗೆ ನಿರಂತರ ಹಾನಿಯಾಗುತ್ತಿದೆ. ರೈತರು ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ. ಈ ಭಾಗದಲ್ಲಿ ಜಿಎಲ್‌ಬಿಸಿ
ಕಾಲುವೆ ಹರಿದಿದೆ. ಈ ನೀರನ್ನು ಹನಿ ನೀರಾವರಿಯಾಗಿ ಬಳಸಿಕೊಂಡು ದ್ರಾಕ್ಷಿಯನ್ನು ಇನ್ನಷ್ಟು ಸಮೃದ್ಧವಾಗಿ ಬೆಳೆಯಬಹುದಾಗಿದೆ. ಆದರೆ ದ್ರಾಕ್ಷಿಗೆ ರೋಗ ಕಾಣಿಸಿಕೊಳ್ಳುತ್ತಿರುವುದರಿಂದ ರೈತರಿಗೆ ನಿರಾಸೆಯಾಗಿದೆ.

20 ದಿನಗಳಲ್ಲಿಯೇ ರೋಗ ಶುರು: ಸೆಪ್ಟೆಂಬರ್‌ ಹಾಗೂ ಅಕ್ಟೋಬರ್‌ ತಿಂಗಳು ದ್ರಾಕ್ಷಿ ಬೆಳೆ ಚಾಟನಿಗೆ ಅನುಕೂಲಕರ ವಾತಾವರಣ. ಈ 20 ದಿನಗಳಲ್ಲಿ ದ್ರಾಕ್ಷಿ ಮೊಳಕೆಯಾಗುವ ಸಂದರ್ಭ. ಇಂಥ ಸಂದರ್ಭದಲ್ಲಿಯೇ ಕಾಂಡಕ್ಕೆ ರೋಗ
ಅಂಟಿಕೊಂಡು ಸಂಪೂರ್ಣ ನಾಶವಾಗುತ್ತಿದೆ.

ವಿಮೆಯಲ್ಲೂ ತಾರತಮ್ಯ: ಕಳೆದ ಬಾರಿ ಕೇಂದ್ರ ಸರ್ಕಾರದ ಫಸಲು ಭಿಮಾ ಯೋಜನೆಯಡಿ ಬೆಳಗಾವಿ ಜಿಲ್ಲೆಯಲ್ಲಿ ಎಕರೆಗೆ 90 ಸಾವಿರ ರೂ. ಗಳಷ್ಟು ರೈತರಿಗೆ ಪರಿಹಾರ ಒದಗಿಸಿದ್ದರೆ, ಬಾಗಲಕೋಟೆ ಜಿಲ್ಲೆ ರೈತರಿಗೆ ಕೇವಲ 20ರಿಂದ 30 ಸಾವಿರ ರೂ. ಮಾತ್ರ ಪರಿಹಾರ ಒದಗಿಸಿದೆ. ಮಳೆಮಾಪನದ ನೆಪ ಹೇಳುವ ಮೂಲಕ ಕೈ ತೊಳೆದುಕೊಳ್ಳುತ್ತಿದ್ದಾರೆ.

Advertisement

ದಾವನಿ ರೋಗದಿಂದ ದ್ರಾಕ್ಷಿ ಬೆಳೆ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಉದುರುತ್ತಿವೆ. ಈ ರೋಗದಿಂದ ಬೆಳೆ ರಕ್ಷಿಸಿಕೊಳ್ಳಲು ದಿನಂಪ್ರತಿ ಔಷಧ ಸಿಂಪಡಿ ಸುತ್ತಿದ್ದರೂ ತಡೆಯಲು ಸಾಧ್ಯವಾಗುತ್ತಿಲ್ಲ.
●ಸುಭಾಸ ಉಳ್ಳಾಗಡ್ಡಿ, ದ್ರಾಕ್ಷಿ ಬೆಳೆಗಾರ, ಜಗದಾಳ

ದ್ರಾಕ್ಷಿ ಬೆಳೆ ನಂಬಿದ ನಮಗೆ ಮತ್ತೇ ಹಾನಿ ಭೀತಿ ಕಾಡುತ್ತಿದೆ. ವಿಮಾ ಹಣವೂ ಸಮರ್ಪಕವಾಗಿ ಬಿಡುಗಡೆಯಾಗುತ್ತಿಲ್ಲ. ತೋಟಗಾರಿಕೆ ಇಲಾಖೆ ಪೂರಕ ವ್ಯವಸ್ಥೆ ಮಾಡಬೇಕಿದೆ.
●ರಮೇಶ ಪಾಟೀಲ, ರೈತ

■ ಕಿರಣ ಶ್ರೀಶೈಲ ಆಳಗಿ

 

Advertisement

Udayavani is now on Telegram. Click here to join our channel and stay updated with the latest news.

Next