Advertisement

ಅಗ್ರಸ್ಥಾನದಿಂದ ಕೆಳಗಿಳಿದ ರಬಾಡ

06:00 AM Jul 25, 2018 | Team Udayavani |

ದುಬಾೖ: ಮಂಗಳವಾರ ಬಿಡುಗಡೆಗೊಳಿಸಲಾದ ನೂತನ ಐಸಿಸಿ ಟೆಸ್ಟ್‌ ರ್‍ಯಾಂಕಿಂಗ್‌ ಎನ್ನುವುದು ದಕ್ಷಿಣ ಆಫ್ರಿಕಾ ವೇಗಿ ಕಾಗಿಸೊ ರಬಾಡ ಅವರಿಗೆ ಹಿನ್ನಡೆಯಾಗಿ ಪರಿಣಮಿಸಿದೆ. ಟೆಸ್ಟ್‌ ಕ್ರಿಕೆಟಿನ ನಂಬರ್‌ ವನ್‌ ಬೌಲರ್‌ ಆಗಿದ್ದ ಅವರೀಗ 2ನೇ ಸ್ಥಾನಕ್ಕೆ ಇಳಿದಿದ್ದಾರೆ. ಇಂಗ್ಲೆಂಡಿನ ವೇಗಿ ಜೇಮ್ಸ್‌ ಆ್ಯಂಡರ್ಸನ್‌ ಮರಳಿ ನಂ.1 ಬೌಲರ್‌ ಸ್ಥಾನವನ್ನು ಅಲಂಕರಿಸಿದ್ದಾರೆ.

Advertisement

ಶ್ರೀಲಂಕಾದ ಸ್ಪಿನ್‌ ಫ್ರೆಂಡ್ಲಿ ಟ್ರ್ಯಾಕ್‌ನಲ್ಲಿ ರಬಾಡ ಉತ್ತಮ ಪ್ರದರ್ಶನವನ್ನೇ ನೀಡಿದ್ದರು. ಗಾಲೆಯಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ 7 ವಿಕೆಟ್‌ ಹಾರಿಸಿದ್ದರು. ಆದರೆ ಕೊಲಂಬೋದ ದ್ವಿತೀಯ ಟೆಸ್ಟ್‌ ಪಂದ್ಯದಲ್ಲಿ ಹಿನ್ನಡೆ ಅನುಭವಿಸಿ ಕೆಲವು ಅಂಕಗಳನ್ನು ಕಳೆದುಕೊಳ್ಳಬೇಕಾಯಿತು. ಈಗ ಆ್ಯಂಡರ್ಸನ್‌-ರಬಾಡ ನಡುವೆ 10 ಅಂಕಗಳ ಅಂತರವಿದೆ. ಆದರೆ 2 ಪಂದ್ಯಗಳ ಈ ಸರಣಿಯಲ್ಲಿ 16 ವಿಕೆಟ್‌ ಹಾರಿಸಿದ ದಕ್ಷಿಣ ಆಫ್ರಿಕಾ ಸ್ಪಿನ್ನರ್‌ ಕೇಶವ್‌ ಮಹಾರಾಜ್‌ 5 ಸ್ಥಾನ ಮೇಲೇರಿ ಟಾಪ್‌-20 ಯಾದಿಯಲ್ಲಿ ಕಾಣಿಸಿಕೊಂಡಿದ್ದಾರೆ (18). 

ಕರುಣರತ್ನೆ 3 ಸ್ಥಾನ ಪ್ರಗತಿ
ಟೆಸ್ಟ್‌ ಬ್ಯಾಟಿಂಗ್‌ ರ್‍ಯಾಂಕಿಂಗ್‌ನಲ್ಲಿ ಲಂಕಾ ಆರಂಭಕಾರ ದಿಮುತ್‌ ಕರುಣರತ್ನೆ 3 ಸ್ಥಾನ ಮೇಲೇರಿದ್ದು, 7ನೇ ಸ್ಥಾನಕ್ಕೆ ಬಂದಿದ್ದಾರೆ. ಈ ಸರಣಿಯಲ್ಲಿ ಕರುಣರತ್ನೆ ಒಂದು ಶತಕ ಸಹಿತ 356 ರನ್‌ ಪೇರಿಸಿದ್ದರು. 

ಆಸ್ಟ್ರೇಲಿಯದ ನಿಷೇಧಿತ ಬ್ಯಾಟ್ಸ್‌
ಮನ್‌ ಸ್ಟೀವ್‌ ಸ್ಮಿತ್‌ ಅಗ್ರಸ್ಥಾನದಲ್ಲಿ ಮುಂದುವರಿದಿದ್ದು, ವಿರಾಟ್‌ ಕೊಹ್ಲಿ ದ್ವಿತೀಯ ಸ್ಥಾನದಲ್ಲಿದ್ದಾರೆ. ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಉತ್ತಮ ಸಾಧನೆಗೈದರೆ ಕೊಹ್ಲಿ ನಂ.1  ಸ್ಥಾನಕ್ಕೆ ಏರುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next