“ಪಡ್ಡೆಹುಲಿ’ ಸಿನಿಮಾದ ಮೂಲಕ ಮಾಸ್ ಹೀರೋ ಆಗಿ ಚಿತ್ರರಂಗಕ್ಕೆ ಪರಿಚಯವಾದ ನಟ ಶ್ರೇಯಸ್ ಈ ವಾರ “ರಾಣ’ನಾಗಿ ಮತ್ತೂಂದು ಆ್ಯಕ್ಷನ್ ಲುಕ್‌ನಲ್ಲಿ ಪ್ರೇಕ್ಷಕರ ಮುಂದೆ ಬಂದಿದ್ದಾರೆ.
ಸಿನಿಮಾದ ಟೈಟಲ್ಲೇ ಹೇಳುವಂತೆ “ರಾಣ’ ಒಂದು ಪಕ್ಕಾ ಔಟ್ ಆ್ಯಂಡ್ ಔಟ್ ಕಮರ್ಷಿಯಲ್ ಎಂಟರ್‌ಟೈನ್ಮೆಂಟ್ ಸಿನಿಮಾ. ಪೊಲೀಸ್ ಅಧಿಕಾರಿಯಾಗಬೇಕು ಎಂಬ ಕನಸನ್ನು ಹೊತ್ತುಕೊಂಡ ಹುಡುಗನೊಬ್ಬ ಬೆಂಗಳೂರಿಗೆ ಬಂದು ಏನೆಲ್ಲಾ ಪರಿಪಾಟಲಗಳನ್ನು ಅನುಭವಿಸುತ್ತಾನೆ. ಕೊನೆಗೂ ಪೊಲೀಸ್ ಆಗುವ ಹುಡುಗನ ಕನಸು ನನಸಾಗುತ್ತದೆಯಾ? ಇಲ್ಲವಾ ಎನ್ನುವ ಎಂದು ಎಳೆಯನ್ನು ಇಟ್ಟು ಕೊಂಡು ಅದರ ಜೊತೆಗೆ ಲವ್, ಆ್ಯಕ್ಷನ್, ಎಮೋಶನ್ಸ್, ಕಾಮಿಡಿ ಹೀಗೆ ಎಲ್ಲ ಮನರಂಜನಾತ್ಮಕ ಅಂಶಗಳನ್ನು ಪೋಣಿಸಿ ಅಚ್ಚುಕಟ್ಟಾಗಿ “ರಾಣ’ನನ್ನು ಪ್ರೇಕ್ಷಕರ ಮುಂದೆ ತಂದಿದ್ದಾರೆ ನಿರ್ದೇಶಕ ನಂದಕಿಶೋರ್.
ಇಲ್ಲಿ ಮಾಸ್ ಪ್ರಿಯರಿಗೆ ಇಷ್ಟವಾಗುವಂಥ ಭರ್ಜರಿ ಆ್ಯಕ್ಷನ್ ಇದೆ. ನೋಡುಗರನ್ನು ಕೂತಲ್ಲೇ ಕುಣಿಸುವಂತ ಹಾಡುಗಳಿವೆ. ಅಲ್ಲಲ್ಲಿ ಕಚಗುಳಿಯಿಡುವ ಕಾಮಿಡಿಯಿದೆ. ಒಂದೇ ಮಾತಿನಲ್ಲಿ ಹೇಳುವುದಾದರೆ, ಪಕ್ಕಾ ಮಾಸ್ ಸಿನಿಪ್ರಿಯರಿಗೆ ಹೇಳಿ ಮಾಡಿಸಿದ ಸಿನಿಮಾ “ರಾಣ’.
ಇನ್ನು ಮಧ್ಯಮ ವರ್ಗದ ಹುಡುಗನಾಗಿ ಶ್ರೇಯಸ್ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಫೈಟ್ಸ್, ಡ್ಯಾನ್ಸ್, ಡೈಲಾಗ್ ಡೆಲಿವರಿ ಸೇರಿದಂತೆ ಪಾತ್ರ ಪೋಷಣೆಯಲ್ಲಿ ನಟ ಶ್ರೇಯಸ್ ಹಾಕಿರುವ ಪರಿಶ್ರಮ ತೆರೆಮೇಲೆ ಪ್ರೇಕ್ಷಕರ ಗಮನ ಸೆಳೆಯುತ್ತದೆ. ನಾಯಕಿಯಾಗಿ ರೀಷ್ಮಾ ನಾಣಯ್ಯ ಅಂದ ಮತ್ತು ಅಭಿನಯ ಎರಡಲ್ಲೂ ಪ್ರೇಕ್ಷಕರಿಗೆ ಇಷ್ಟವಾಗುತ್ತಾರೆ. ರಜನಿ ಭಾರದ್ವಾಜ್ ಮಧ್ಯಂತರದ ನಂತರ ಕಾಣಿಸಿಕೊಂಡರೆ, ನಟಿ ಸಂಯುಕ್ತಾ ಹೆಗ್ಡೆ ಹಾಡೊಂದರಲ್ಲಿ ಪ್ರೇಕ್ಷಕರನ್ನೂ ಕುಣಿಯುವಂತೆ ಮಾಡುತ್ತಾರೆ. ಕೋಟೆ ಪ್ರಭಾಕರ್, ಅಶೋಕ್, ಗಿರೀಶ್ ಮತ್ತಿತರ ಕಲಾವಿದರು ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.
ಉಳಿದಂತೆ ಸಿನಿಮಾದ ಛಾಯಾಗ್ರಹಣ, ಸಂಕಲನ, ಸಂಗೀತ, ಕಲರಿಂಗ್ ಮತ್ತಿತರ ತಾಂತ್ರಿಕ ಕೆಲಸಗಳು ಗುಣಮಟ್ಟದಲ್ಲಿದ್ದು, ಅದ್ಧೂರಿ ಮೇಕಿಂಗ್ “ರಾಣಾ’ನನ್ನು ತೆರೆಮೇಲೆ ಕಲರ್‌ಫುಲ್ ಆಗಿ ಕಾಣುವಂತೆ ಮಾಡಿದೆ. ಮಾಸ್ ಸಿನಿಪ್ರಿಯರು ವಾರಾಂತ್ಯದಲ್ಲಿ ಒಮ್ಮೆ “ರಾಣ’ನ ದರ್ಶನ ಮಾಡಿಬರಲು ಅಡ್ಡಿಯಿಲ್ಲ.
ಜಿ.ಎಸ್.ಕಾರ್ತಿಕ ಸುಧನ್