Advertisement

National highway ಪಿಕಪ್‌ನಿಂದ ರಸ್ತೆಗೆ ಜಾರಿದ ಕಬ್ಬಿಣದ ಸರಳು!

11:26 PM Nov 22, 2023 | Team Udayavani |

ಕೂಳೂರು: ತೆರೆದ ವಾಹನಗಳಲ್ಲಿ ಕಬ್ಬಿಣದ ಸರಳು, ಅಲ್ಯುಮೀನಿಯಂ ಪಟ್ಟಿಗಳಂತಹ ಅಪಾಯಕಾರಿ ವಸ್ತುಗಳನ್ನು ಕೊಂಡೊಯ್ಯುವ ಮೂಲಕ ಇತರರ ಪ್ರಾಣಾಪಾಯಕ್ಕೆ ಕಾರಣವಾಗುವ ಘಟನೆಗಳು ನಗರ ವ್ಯಾಪ್ತಿಯಲ್ಲಿ ಆಗಾಗ್ಗೆ ನಡೆಯುತ್ತಿವೆ. ಬುಧವಾರವೂ ಬಂಗ್ರ ಕೂಳೂರು ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಇಂತಹುದೇ ಘಟನೆ ಸಂಭವಿಸಿದೆ.

Advertisement

ಕೂಳೂರು ಮೇಲ್ಸೇತುವೆಯಿಂದ ಕೊಟ್ಟಾರ ಚೌಕಿ ಕಡೆಗೆ ಸಾಗುತ್ತಿದ್ದ ಪಿಕಪ್‌ ವಾಹನದಲ್ಲಿ ಲೋಡ್‌ ಮಾಡಲಾಗಿದ್ದ ಟನ್‌ಗಟ್ಟಲೆ ತೂಕದ ಕಬ್ಬಿಣದ ಸರಳುಗಳು ವಾಹನದಿಂದ ಜಾರಿ ರಸ್ತೆಗೆ ಬಿದ್ದಿವೆ. ಅದೃಷ್ಟಾವಶಾತ್‌ ಯಾವುದೇ ಅಪಾಯ ಸಂಭವಿಸಿಲ್ಲ. ಹೆದ್ದಾರಿಯಲ್ಲಿ ಸ್ವಲ್ಪ ಕಾಲ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು.

ನಗರದಲ್ಲಿ ಹಗಲು ಮತ್ತು ರಾತ್ರಿ ವೇಳೆ ಟಿಪ್ಪರ್‌, ಪಿಕಪ್‌ ವಾಹನಗಳಲ್ಲಿ ಕಬ್ಬಿಣ, ಸಿಮೆಂಟ್‌, ಕಲ್ಲು, ಮರಳು, ಮಣ್ಣು, ಜಲ್ಲಿ, ವಿದ್ಯುತ್‌ ಕಂಬ, ಅಲ್ಯುಮೀನಿಯಂ ಪಟ್ಟಿಗಳು ಸೇರಿದಂತೆ ವಿವಿಧ ಅಪಾಯಕಾರಿ ವಸ್ತುಗಳನ್ನು ಯಾವುದೇ ರಕ್ಷಣೆ ಇಲ್ಲದೆ ಕೊಂಡೊಯ್ಯಲಾಗುತ್ತಿದೆ. ಕೆಲವು ಜಂಕ್ಷನ್‌ಗಳಲ್ಲಿ ಪೊಲೀಸರು ಇದ್ದರೂ ಇದನ್ನು ತಡೆಯಲು ಸಾಧ್ಯವಾಗುತ್ತಿಲ್ಲ.

ಹಿಂದೆಯೂ ನಡೆದಿತ್ತು
ಕಳೆದ ಫೆಬ್ರವರಿಯಲ್ಲಿ ಪಿಕಪ್‌ ವಾಹನದಲ್ಲಿ ಸಾಗಿಸುತ್ತಿದ್ದ ಅಲ್ಯು ಮಿನಿಯಂ ಪಟ್ಟಿಗಳು ಕಾರಿನ ಒಳಗೆ ಹೊಕ್ಕು ಕಾರು ಚಾಲಕ ಪವಾಡ ಸದೃಶವಾಗಿ ಪಾರಾದ ಘಟನೆ ನಂತೂರು ಜಂಕ್ಷನ್‌ನಲ್ಲಿ ಸಂಭವಿಸಿತ್ತು. ಕೆಲವು ವರ್ಷಗಳ ಹಿಂದೆ ಕುದ್ರೋಳಿ ಬಳಿ ಯಾವುದೇ ಮುಂಜಾಗ್ರತೆ ವಹಿಸದೆ ತೆರೆದ ಟಿಪ್ಪರ್‌ನಲ್ಲಿ ವಿದ್ಯುತ್‌ ಕಂಬ ತೆಗೆದುಕೊಂಡು ಹೋಗುವಾಗ ಹಿಂದಿನಿಂದ ಬರುತ್ತಿದ್ದ ಆಟೋ ರಿಕ್ಷಾಕ್ಕೆ ತಾಗಿ ಹಾನಿ ಸಂಭವಿಸಿತ್ತು. ಬಿಜೈ ಬಳಿ ಗೂಡ್ಸ್‌ ರಿಕ್ಷಾದಲ್ಲಿ ಕಬ್ಬಿಣದ ಸರಳು ಕೊಂಡೊಯ್ಯುವಾಗ ಚಾಲಕ ಏಕಾಏಕಿ ಬ್ರೇಕ್‌ ಹಾಕಿದ್ದರಿಂದ ಸಂಚರಿಸುತ್ತಿದ್ದ ಕಾರಿನೊಳಗೆ ಸರಳು ಗಳು ಹೊಕ್ಕಿದ್ದವು. ಅದೃಷ್ಟವಶಾತ್‌ ಅಪಾಯ ಸಂಭವಿಸಿರಲಿಲ್ಲ.

ನಿಯಮ ಮೀರಿ ಸಾಗಾಟ
ಸಾರಿಗೆ ಇಲಾಖೆಯ ನಿಯಮಗಳ ಪ್ರಕಾರ ತೆರೆದ ವಾಹನಗಳಲ್ಲಿ ಯಾವುದೇ ಅಪಾಯಕಾರಿ ವಸ್ತು ಗಳನ್ನು ಸಾಗಿಸುವಂತಿಲ್ಲ. ಕಬ್ಬಿಣದ ಸರಳುಗಳನ್ನು ಅದರ ಗಾತ್ರಕ್ಕೆ ತಕ್ಕಂತೆ ಇರುವ ವಾಹನಗಳಲ್ಲೇ ಸಾಗಿಸಬೇಕು. ಆದರೆ ಈ ನಿಯಮಪಾಲನೆಯಾಗುತ್ತಿಲ್ಲ. ಇಂತಹ ವಸ್ತು ಗಳನ್ನು ಸಾಗಿಸುವಾಗ ಅಪಾಯದ ಮುನ್ಸೂಚನೆಗಾಗಿ ಯಾವುದೇ ಬಟ್ಟೆಯನ್ನೂ ಕಟ್ಟುತ್ತಿಲ್ಲ. ನಿಯಮ ಉಲ್ಲಂಘಿಸಿದರೆ ವಾಹನಗಳನ್ನು ಅಮಾನತಿನಲ್ಲಿಡಲು ಅವಕಾಶ ಇದೆ. ಈ ನಿಯಮಗಳು ಕಟ್ಟುನಿಟ್ಟಾಗಿ ಜಾರಿಯಾಗಬೇಕು ಎಂದು ಸಾರ್ವ ಜನಿಕರು ಆಗ್ರಹಿಸಿದ್ದಾರೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next