ಯಾದಗಿರಿ: ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರದ ಎರಡನೇ ಅವಧಿಯ 2 ವರ್ಷ ಪೂರೈಸಿದ್ದು, ನಿರೀಕ್ಷೆಗೆ ಮೀರಿ ಸಾಧನೆ ಮಾಡಿದೆ. ದೇಶ-ವಿದೇಶಗಳಲ್ಲಿ ಭಾರತದ ಕೀರ್ತಿ ಪತಾಕೆ ಆಗಸದ ಎತ್ತರಕ್ಕೆ ಹಾರುವಂತ ಕಾರ್ಯ ಮಾಡಿದೆ ಎಂದು ತೋಟಗಾರಿಕೆ, ರೇಷ್ಮೆ ಖಾತೆ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಆರ್. ಶಂಕರ್ ಅಭಿಪ್ರಾಯಪಟ್ಟರು.
ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಮೊದಲ ಬಾರಿಗೆ ನಮ್ಮ ದೇಶ ಜಗತ್ತಿಗೆ ಕೊಡುವ ಶಕ್ತಿ ಬೆಳೆಸಿಕೊಂಡಿರುವುದೇ ಪ್ರಧಾನಿ ಮೋದಿ ಅವರ ಆಡಳಿತದ ಮಹೋನ್ನತ ಕಾರ್ಯವೈಖರಿ ಹೆಮ್ಮೆ ಎಂದರು. ಜಿಲ್ಲೆಯಲ್ಲಿ ಮೂರನೇ ಅಲೆ ನಿಯಂತ್ರಣದ ಕುರಿತು ಜಿಲ್ಲಾಡಳಿತ ಚರ್ಚೆ ಮಾಡಿದ್ದು, 200ಕ್ಕೂ ಹೆಚ್ಚು ಬೆಡ್ ಖಾಲಿಯಿದೆ. ಆಮ್ಲಜನಕ ಕೊರತೆಯಿಲ್ಲ.
20 ಸಾವಿರ ಲಸಿಕೆಯಿದ್ದು, ಬ್ಲಾಕ್ ಫಂಗಸ್ ಚಕಿತ್ಸೆಗೆಗೂ ಔಷಧ ಯಿದೆ ಎಂದರು. ಸಂಸದ ರಾಜಾ ಅಮರೇಶ್ವರ ನಾಯಕ ಮಾತನಾಡಿ, ಮಹತ್ವಾಕಾಂಕ್ಷಿ ಜಿಲ್ಲೆಗಳಾದ ರಾಯಚೂರು, ಯಾದಗಿರಿಗೆ ಆರೋಗ್ಯ ಇಲಾಖೆಯ ವಿಶೇಷ ಪ್ಯಾಕೇಜ್‌ಗೆ ಮನವಿ ಮಾಡಲಾಗಿದ್ದು, ಕೇಂದ್ರ ಸರ್ಕಾರದ ಜೊತೆಗೆ ತಾವೇ ಖುದ್ದಾಗಿ ಮಾತನಾಡಿ ಸೌಲತ್ತು ಒದಗಿಸುವಂತೆ ಕೋರಲಾಗಿದೆ. ಇದಕ್ಕೆ ಕೇಂದ್ರ ಆರೋಗ್ಯ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
ರಾಜ್ಯ ಸರ್ಕಾರದಿಂದ ಪ್ರಸ್ತಾವನೆ ಸಲ್ಲಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಪ್ರಸ್ತಾವನೆ ಸಲ್ಲಿಸುತ್ತಿದೆ ಎಂದು ಹೇಳಿದರು. ಬಿಜೆಪಿ ಜಿಲ್ಲಾದ್ಯಕ್ಷ ಡಾ| ಶರಣಭೂಪಾಲರೆಡ್ಡಿ ನಾಯ್ಕಲ್ ಮಾತನಾಡಿದರು. ಶಾಸಕ ವೆಂಕಟರಡ್ಡಿ ಮುದ್ನಾಳ, ಕೃಷ್ಣಾ ಕಾಡಾ ಅಧ್ಯಕ್ಷ ಶರಣಪ್ಪ ನಾಟೇಕರ, ದೇವೀಂದ್ರನಾಥ್ ನಾದ್, ವೆಂಕಟರಡ್ಡಿ ಅಬ್ಬೆತುಮಕೂರು, ಗುರು ಕಾಮ, ಜಿಲ್ಲಾ ವಕ್ತಾರ ಎಚ್.ಸಿ ಪಾಟೀಲ್, ಮಹಿಳಾ ಮೋರ್ಚಾ ರಾಜ್ಯ ಉಪಾಧ್ಯಕ್ಷೆ ಲಲಿತಾ ಅನಪುರ, ನಗರಸಭೆ ಅಧ್ಯಕ್ಷ ವಿಲಾಸ್ ಪಾಟೀಲ್, ಯುಡಾ ಅಧ್ಯಕ್ಷ ಬಸವರಾಜ ಚಂಡ್ರಕಿ, ದೇವರಾಜ ನಾಯಕ ಊಳ್ಳೆಸೂಗುರ, ಸುರೇಶ್ ಅಂಬೀಗೇರ, ಜಿಲ್ಲಾ ಮಧ್ಯಮ ಸಂಚಾಲಕ ವಿರುಪಾಕ್ಷಯ್ಯ ಸ್ವಾಮಿ ಹೆಡಗಿಮದ್ರಾ ಇದ್ದರು.