Advertisement
ತಾಲೂಕಿನ ಹೆಗ್ಗವಾಡಿ (ಬೆಂಡರವಾಡಿ ಸಮೀಪ) ಗ್ರಾಮದವರಾದ ಆರ್.ಧ್ರುವನಾರಾಯಣ, 1961ರ ಜುಲೈ 31ರಂದು ಜನಿಸಿದರು. ಕೃಷಿ ಸ್ನಾತಕೋತ್ತರ ಪದವೀಧರರು.
Related Articles
Advertisement
1999ರಲ್ಲಿ ಧ್ರುವನಾರಾಯಣ ಚುನಾವಣಾ ರಾಜಕೀಯಕ್ಕೆ ಬಂದರು. ಸಂತೆಮರಹಳ್ಳಿ ಮೀಸಲು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿದ್ದ ಅವರು ಮೊದಲ ಚುನಾವಣೆಯಲ್ಲಿ ಪರಾಭವಗೊಂಡರು. ಅದಾದ ಬಳಿಕ ಮತ್ತೆ ತಮ್ಮ ತವರು ಪಕ್ಷ ಕಾಂಗ್ರೆಸ್ ಗೆ ಮರಳಿದರು. 2004ರ ಚುನಾವಣೆಯಲ್ಲಿ ಸಂತೆಮರಹಳ್ಳಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ಎ.ಆರ್.ಕೃಷ್ಣಮೂರ್ತಿ ಅವರ ವಿರುದ್ಧ ಕೇವಲ ಒಂದು ಮತದಿಂದ ಜಯಗಳಿಸಿದರು.
2008ರ ವಿಧಾನಸಭಾ ಚುನಾವಣೆ ವೇಳೆಗೆ ಸಂತೆಮರಹಳ್ಳಿ ಕ್ಷೇತ್ರ ಪುನರ್ವಿಂಗಡಣೆಯಲ್ಲಿ ರದ್ದಾಯಿತು. ಕೊಳ್ಳೇಗಾಲ ಕ್ಷೇತ್ರಕ್ಕೆ ಸೇರಿತು. ಕೊಳ್ಳೇಗಾಲ ಕ್ಷೇತ್ರದಿಂದ ಸ್ಪರ್ಧಿಸಿ ಧ್ರುವ ಸತತ ಎರಡನೇ ಬಾರಿಯೂ ಆರಿಸಿಬಮದರು.
2009ರಲ್ಲಿ ನಡೆದ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ವರಿಷ್ಠರು ಚಾಮರಾಜನಗರ ಕ್ಷೇತ್ರದಿಂದ ಧ್ರುವನಾರಾಯಣರನ್ನು ಕಣಕ್ಕಿಳಿಸಿದರು. ಈ ಚುನಾವಣೆಯಲ್ಲಿ 4001 ಮತಗಳಿಂದ ಗೆದ್ದ ಅವರು 15ನೇ ಲೋಕಸಭೆ ಪ್ರವೇಶಿಸಿದರು. 2014 ರ ಲೋಕಸಭಾ ಚುನಾವಣೆಯಲ್ಲೂ ಪುನರಾಯ್ಕೆಯಾದರು.
ಬಳಿಕ 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಶ್ರೀನಿವಾಸಪ್ರಸಾದ್ ಅವರಿಂದ ಪರಾಭವಗೊಂಡರು. ಬಳಿಕ ಕಾಂಗ್ರೆಸ್ ಪಕ್ಷ ಅವರನ್ನು ಕೆಪಿಸಿಸಿ ಕಾರ್ಯಾಧ್ಯಕ್ಷರನ್ನಾಗಿ ಮಾಡಿತು.
ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯ ರಾಜಕೀಯ ಪ್ರವೇಶ ಮಾಡುವ ಆಶಯ ಅವರದಾಗಿತ್ತು. ನಂಜನಗೂಡು ಕ್ಷೇತ್ರದಿಂದ ಕಣಕ್ಕಿಳಿಯಲು ತಯಾರಿ ಮಾಡಿಕೊಂಡಿದ್ದರು. ನಂಜನಗೂಡು ಕ್ಷೇತ್ರಾದ್ಯಂತ ಪ್ರವಾಸ ಕೈಗೊಂಡಿದ್ದರು.
ಅಭಿವೃದ್ಧಿ ಕೆಲಸಗಳ ಹರಿಕಾರ: ಸಂತೆಮರಹಳ್ಳಿ ಹಾಗೂ ಕೊಳ್ಳೇಗಾಲ ಶಾಸಕರಾಗಿದ್ದಾಗ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿ ಹೆಸರು ಗಳಿಸಿದರು. ಬಳಿಕ ಎರಡು ಬಾರಿ ಲೋಕಸಭಾ ಸದಸ್ಯರಾಗಿ ಅವರು ಕೈಗೊಂಡ ಅಭಿವೃದ್ಧಿ ಕೆಲಸಗಳಿಂದ ಅವರು ಕ್ಷೇತ್ರದಲ್ಲಿ ಮಾತ್ರವಲ್ಲದೇ ರಾಜ್ಯಾದ್ಯಂತ ಹೆಸರಾದರು. ಕೇಂದ್ರ ಸರ್ಕಾರದಿಂದ ಅನುದಾನ ತಂದು ಅಭಿವೃದ್ಧಿ ಕೆಲಸ ಮಾಡಿದ ರಾಜ್ಯದ ನಂ. 1 ಸಂಸದ ಎಂಬ ಹೆಸರು ಗಳಿಸಿದ್ದರು.
ಅವರ ಅವಧಿಯಲ್ಲಿ ಜಿಲ್ಲೆಗೆ 212 ಹಾಗೂ 150 ಎ ರಾಷ್ಟ್ರೀಯ ಹೆದ್ದಾರಿಗಳಾದವು. 212 ರಾಷ್ಟ್ರೀಯ ಹೆದ್ದಾರಿಯಿಂದಾಗಿ ಕೊಳ್ಳೇಗಾಲ, ಯಳಂದೂರು, ಚಾಮರಾಜನಗರಕ್ಕೆ ಉತ್ತಮ ಗುಣಮಟ್ಟದ ರಸ್ತೆಗಳಾದವು. ತಮ್ಮೆಲ್ಲಾ ಭಾಷಣಗಳಲ್ಲೂ ಎಲ್ಲ ಸಮುದಾಯದವರೂ ತಮ್ಮ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದು ಸಲಹೆ ನೀಡುತ್ತಿದ್ದ ಅವರು, ಜಿಲ್ಲೆಯಲ್ಲಿ ಕೇಂದ್ರೀಯ ವಿದ್ಯಾಲಯ, ಹೋಬಳಿಗೊಂದು ಮೊರಾರ್ಜಿ ಶಾಲೆ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳು, ಕೃಷಿ ವಿಜ್ಞಾನ ಕೇಂದ್ರ, ಕಾನೂನು ಕಾಲೇಜುಗಳನ್ನು ತರಲು ಶ್ರಮಿಸಿದರು. ಒಬ್ಬ ಸಂಸದರು ಇಷ್ಟೊಂದು ಕೆಲಸಗಳನ್ನು ಮಾಡಬಹುದು ಎಂದು ತೋರಿಸಿಕೊಟ್ಟರು.
ಅವರ ಕೆಲಸಗಳನ್ನು ಅವರ ಪಕ್ಷದವರಿರಲಿ, ವಿರೋಧ ಪಕ್ಷದವರೂ ಮೆಚ್ಚುತ್ತಿದ್ದರು. ಪಕ್ಷಭೇದವಿಲ್ಲದೇ, ಜನರು ಅವರ ಬಳಿ ಹೋದಾಗ ಸಾಧ್ಯವಾದಷ್ಟೂ ಆ ಕೆಲಸಗಳನ್ನು ಮಾಡಿಸಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದರು. ಯಾರ ಬಗ್ಗೆಯೂ ಕಟು ಟೀಕೆಯ ಮಾತುಗಳನ್ನಾಡದೇ, ಅಜಾತಶತ್ರು ಎನ್ನುವಂತಿದ್ದರು.