ಬೆಂಗಳೂರು: ಯಡಿಯೂರಪ್ಪ ಬದಲಾವಣೆ ನಿಶ್ಚಿತ ಎಂದು ಹೇಳಿರುವ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಯಾವಾಗ ಜ್ಯೋತಿಷಿಯಾದರೋ ಗೊತ್ತಿಲ್ಲ ಎಂದು ಸಚಿವ ಆರ್.ಅಶೋಕ್ ವ್ಯಂಗ್ಯವಾಡಿದರು.
ಸುದ್ದಿಗಾರರ ಜತೆ ಮಾತನಾಡಿ, ಸಿದ್ದರಾಮಯ್ಯ ಅವರಿಗೆ ದೆಹಲಿಯಿಂದ ಹೇಗೆ ಸಂದೇಶ ಬಂತು? ಅಷ್ಟಕ್ಕೂ ಅವರಿಗೆ ಗುಪ್ತಚರ ವ್ಯವಸ್ಥೆ ಎಲ್ಲಿದೆ. ಅವರು ಇನ್ನೂ ಭ್ರಮೆಯಲ್ಲೇ ಇದ್ದಾರೆ. ಅಧಿಕಾರ ಕಳೆದುಕೊಂಡು ಹೀಗೆ ಆಗಿದ್ದಾರೆ ಎಂದು ಕುಟುಕಿದರು.
ಉಪಚುನಾವಣಾ ಫಲಿತಾಂಶದ ಬಳಿಕ ನಾಯಕತ್ವದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿರಲಿದ್ದಾರೆ. ಅವರು ಇನ್ನಷ್ಟು ಗಟ್ಟಿಯಾಗಿ ಇರಲಿದ್ದಾರೆ. ಖಾಲಿ ಇರದೆ ಇರುವ ಸ್ಥಾನಕ್ಕೆ ಅರ್ಜಿ ಹಾಕ ಬೇಡಿ ಎಂದು ಪ್ರತಿಪಕ್ಷಗಳಿಗೆ ತಿರುಗೇಟು ನೀಡಿದರು.
ರಾಜರಾಜೇಶ್ವರಿನಗರ ಹಾಗೂ ಶಿರಾ ಕ್ಷೇತ್ರದ ಉಪಚುನಾವಣೆಯಲ್ಲಿ ಎಲ್ಲ ಪಕ್ಷಗಳ ಭವಿಷ್ಯ ಮಂಗಳವಾರ ನಿರ್ಧಾರವಾಗಲಿದೆ. ನನಗೆ ರಾಜ ರಾಜೇಶ್ವರಿನಗರ ಕ್ಷೇತ್ರದ ಉಸ್ತುವಾರಿ ನೀಡಿದ್ದರು. ಸುಮಾರು 25 ವರ್ಷ ಅಲ್ಲಿ ಕಾರ್ಯಕರ್ತ, ಶಾಸಕ, ಸಚಿವನಾಗಿ ಕಾರ್ಯ ನಿರ್ವಹಿಸಿದ್ದೇನೆ. ಉಪಚುನಾವಣೆ ಸಂದರ್ಭದಲ್ಲಿ ಅಲ್ಲೇ ಇದ್ದು, ಕಾರ್ಯ ನಿರ್ವಹಿಸಿದ್ದೇನೆ. ಕಾಂಗ್ರೆಸ್‌ನ ಡಿ.ಕೆ. ಶಿವಕುಮಾರ್ ಅವರ ಯಾ ವಆಟವೂ ನಡೆಯುವುದಿಲ್ಲ. 35,000 ಅಂತರದಲ್ಲಿ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಡಿ.ಕೆ. ಶಿವಕುಮಾರ್ ಸೋಲಿಗೆ ಮೊದಲೇ ಶಸ್ತ್ರತ್ಯಾಗ ಮಾಡಿ ಹೋಗಿದ್ದಾರೆ. ನನ್ನ ಹೇಳಿಕೆಗಳಿಗೆ ಉತ್ತರವನ್ನೇ ನೀಡಿಲ್ಲ. ಅವರು ಏನೂ ಕೆಲಸ ಮಾಡಿಲ್ಲ. ನಾನೇ ಅಭ್ಯರ್ಥಿ ಎಂದು ಹೇಳಿಕೊಂಡು ಕ್ಷೇತ್ರದಲ್ಲೆಲ್ಲಾ ಓಡಾಡಿದ್ದರು. ನಾನು ಸಹ ಅಲ್ಲಿ ಅಭ್ಯರ್ಥಿಎಂದು ಹೇಳಿಯೇ ಪ್ರಚಾರ ಮಾಡಿದ್ದೇನೆ ಎಂದು ಹೇಳಿದರು.