Advertisement

ರೈತರಿಗೆ ತಿಂಗಳಲ್ಲಿ ಬೆಳೆ ಪರಿಹಾರ: ಸಚಿವ ಆರ್‌. ಅಶೋಕ್‌

11:21 PM Sep 19, 2022 | Team Udayavani |

ಬೆಂಗಳೂರು: ಮಳೆಯಿಂದ ಬೆಳೆ ನಷ್ಟ ಮಾಡಿಕೊಂಡ ರೈತರಿಗೆ ಒಂದು ತಿಂಗಳಲ್ಲಿ ಪರಿಹಾರ ಕೊಡುವ ವ್ಯವಸ್ಥೆ ಮಾಡಲಾಗಿದೆ ಎಂದು ಕಂದಾಯ ಸಚಿವ ಆರ್‌. ಅಶೋಕ್‌ ಹೇಳಿದ್ದಾರೆ.

Advertisement

ಕಳೆದ ನಾಲ್ಕು ವರ್ಷಗಳಲ್ಲಿ ಮಳೆ ಹಾಗೂ ಪ್ರವಾಹದಿಂದ 50.14 ಲಕ್ಷ ಹೆಕ್ಟೇರ್‌ ಬೆಳೆ ನಾಶವಾಗಿದ್ದು, 38.31 ಲಕ್ಷ ರೈತರಿಗೆ 4,736.37 ಕೋಟಿ ರೂ. ಪರಿಹಾರವನ್ನು ನೇರವಾಗಿ ಬ್ಯಾಂಕ್‌ ಖಾತೆಗೆ ಜಮೆ ಮಾಡಲಾಗಿದೆ ಎಂದು ತಿಳಿಸಿದರು.

ಕೇಂದ್ರ ಸರಕಾರದಿಂದಲೂ ರಾಜ್ಯಕ್ಕೆ ಯಾವುದೇ ರೀತಿಯ ತಾರತಮ್ಯ ಆಗಿಲ್ಲ. ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ರಾಜ್ಯಕ್ಕೆ 11,603 ಕೋಟಿ ರೂ. ಬಂದಿದೆ. ಮನಮೋಹನ್‌ ಸಿಂಗ್‌ ಅವಧಿಯಲ್ಲಿ 3233 ಕೋಟಿ ರೂ. ಬಂದಿತ್ತು ಎಂದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಿದ್ದರಾಮಯ್ಯ, ಆಗ ರಾಜ್ಯದ ಬಜೆಟ್‌ ಎಷ್ಟಿತ್ತು? ಕೇಂದ್ರಕ್ಕೆ ರಾಜ್ಯದಿಂದ ತೆರಿಗೆ ಹಣ ಎಷ್ಟು ಸಂದಾಯವಾಗುತ್ತಿತ್ತು, ಈಗ ಎಷ್ಟು ಆಗುತ್ತಿದೆ? ರಾಜ್ಯಕ್ಕೆ ಅನುದಾನ ನಿಗದಿ ಮಾಡುವುದು ಹಣಕಾಸು ಆಯೋಗ ಎಂದು ತಿಳಿಸಿದರು.

ಈ ವರ್ಷ ಮಾರ್ಚ್‌ನಿಂದ ಆಗಸ್ಟ್‌ ವರೆಗೆ ಸುರಿದ ಮಳೆಗೆ 9 ಲಕ್ಷ ಹೆಕ್ಟೇರ್‌ ಬೆಳೆ ನಷ್ಟ ಎಂದು ಹೇಳಿದ್ದೀರಿ. ಈಗ ರೈತರಿಗೆ ಎಷ್ಟು ಪರಿಹಾರ ಕೊಟ್ಟಿದ್ದೀರಿ ಹೇಳಿ. ಅದು ಬಿಟ್ಟು ಹಿಂದಿನದು ಹೇಳಿ ಏನು ಪ್ರಯೋಜನ? ಈ ವರ್ಷ 7 ಸಾವಿರ ಕೋಟಿ ರೂ. ನಷ್ಟ ಎಂದಿದ್ದೀರಿ, ಕೇಂದ್ರಕ್ಕೆ 1,200 ಕೋಟಿ ರೂ. ಕೇಳಿದ್ದೀರಿ, ರಾಜ್ಯ ಸರಕಾರ ಎಷ್ಟು ಕೊಟ್ಟಿದೆ ಎಂದು ಪ್ರಶ್ನಿಸಿದರು.

Advertisement

ಈ ವರ್ಷದ ಬೆಳೆ ನಷ್ಟಕ್ಕೆ 162 ಕೋಟಿ ರೂ. ಬಿಡುಗಡೆ ಮಾಡಿದ್ದೇವೆ. ಒಂದು ತಿಂಗಳಲ್ಲಿ ರೈತರ ಬ್ಯಾಂಕ್‌ ಖಾತೆಗೆ ಹಣ ಜಮೆಯಾಗಲಿದೆ ಎಂದು ಸಚಿವರು ತಿಳಿಸಿದರು. ಆಗ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸದಸ್ಯರು, ರಾಜ್ಯ ಸರಕಾರ ಕೊಟ್ಟಿರುವ ಪರಿಹಾರ ಏನೇನೂ ಸಾಲದು ಎಂದು ಹೇಳಿದರು.

ರಾಜ್ಯದಲ್ಲಿ ಈ ವರ್ಷದ ಮುಂಗಾರಿನಲ್ಲಿ 82.67 ಲಕ್ಷ ಹೆಕ್ಟೇರ್‌ ಬಿತ್ತನೆ ಗುರಿ ಇತ್ತು. 74.37 ಲಕ್ಷ ಹೆಕ್ಟೇರ್‌ ಬಿತ್ತನೆ ಮಾಡಲಾಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್‌ ಮಧ್ಯಪ್ರವೇಶಿಸಿ ಹೇಳಿದರು. ಇದರಲ್ಲಿ ಮಳೆ ಮತ್ತು ಪ್ರವಾಹದಿಂದ ನಷ್ಟವಾಗಿದ್ದು ಎಷ್ಟು ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. ಇದಕ್ಕೆ ಕಂದಾಯ ಸಚಿವರು ಉತ್ತರಿಸುತ್ತಾರೆ ಎಂದು ಪಾಟೀಲ್‌ ಕುಳಿತರು. ಇಬ್ಬರೂ ಜಂಟಿ ಕಾರ್ಯಾಚರಣೆ ಅಲ್ಲವೇ? ಮಾಹಿತಿ ತೆಗೆದುಕೊಂಡು ಹೇಳಿ, ನೀವೊಂದು ಅವರೊಂದು ಹೇಳಿದರೆ ಹೆಂಗೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಮಾತು ಮುಂದುವರಿಸಿದ ಅಶೋಕ್‌, ಪ್ರವಾಹ ವಿಚಾರದಲ್ಲಿ ರಾಜ್ಯ ಸರಕಾರ ಎಲ್ಲೂ ಮೈ ಮರೆತಿಲ್ಲ. ಮುಖ್ಯಮಂತ್ರಿಯವರು, ನಾನು ಎಲ್ಲ ಕಡೆ ಹೋಗಿದ್ದೇವೆ. ಸಭೆ ನಡೆಸಿದ್ದೇವೆ. ಬೆಳೆನಷ್ಟ ಸಮೀಕ್ಷೆ ಮಾಡಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. 2,618 ಗ್ರಾಮ ಪಂಚಾಯತ್‌ಗಳಲ್ಲಿ ವಿಪತ್ತು ನಿರ್ವಹಣ ಘಟಕ ಸ್ಥಾಪನೆ ಮಾಡಿದ್ದು ದೇಶದಲ್ಲಿ ಇದು ಮೊದಲು ಎಂದು ತಿಳಿಸಿದರು.

ಪ್ರತಿಧ್ವನಿಸಿದ ಉದಯವಾಣಿ ವರದಿ
ಬೆಂಗಳೂರು: ಗ್ರಾಮ ಪಂಚಾಯತ್‌ ಗೌರವಧನ ಹೆಚ್ಚಳ ಕುರಿತು “ಉದಯವಾಣಿ’ ಪ್ರಕಟಿಸಿದ ವಿಶೇಷ ವರದಿಯು ಸೋಮವಾರ ಮೇಲ್ಮನೆಯಲ್ಲಿ ಪ್ರತಿಧ್ವನಿಸಿತು. ಇದಕ್ಕೆ ಪಕ್ಷಾತೀತವಾಗಿ ಸದಸ್ಯರು ದನಿಗೂಡಿಸಿದ್ದರಿಂದ ಸುದೀರ್ಘ‌ ಚರ್ಚೆಗೆ ಕೈಗೆತ್ತಿಕೊಳ್ಳುವ ಸಂಬಂಧ ಸಭಾಪತಿಗಳಿಗೆ ಸದಸ್ಯರು ಮನವಿ ಮಾಡಿದರು. ವರದಿ ಬಗ್ಗೆ ಕಾಂಗ್ರೆಸ್‌ ಸದಸ್ಯ ಮಂಜುನಾಥ್‌ ಭಂಡಾರಿ ಅವರು ಶೂನ್ಯವೇಳೆಯಲ್ಲಿ ಸದನದ ಗಮನ ಸೆಳೆದರು.

Advertisement

Udayavani is now on Telegram. Click here to join our channel and stay updated with the latest news.

Next