ಬೆಂಗಳೂರು: ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಗಾಳಿಯಲ್ಲಿ ಗುಂಡು ಹೊಡೆಯುತ್ತಿದ್ದಾರೆ. ಅವರು ಎಲ್ಲಿಯವರೆಗೂ ಗುಂಡು ಹೊಡೀತ್ತಾರೋ ಅಲ್ಲಿಯವರೆಗೂ ನಾವೂ ಗಾಳಿಯಲ್ಲೇ ಗುಂಡು ಹೊಡೆಯುತ್ತೇವೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರು ಯಾವ ಶಾಸಕರ ಹೆಸರನ್ನು ಹೇಳುತ್ತಾರೋ, ಅವಾಗ ನಮ್ಮ ಜೊತೆ ಯಾರು ಬರುತ್ತಾರೆ ಎನ್ನುವುದನ್ನು ಬಹಿರಂಗಪಡಿಸುತ್ತೇವೆ ಎಂದರು.
ಕಾಂಗ್ರೆಸ್ ನ 20 ಜನರು ನಮ್ಮ ಸಂಪರ್ಕದಲ್ಲಿದ್ದಾರೆ. ಸಿದ್ದರಾಮಯ್ಯ ಸಂಪರ್ಕದಲ್ಲಿ ನಮ್ಮವರು ಯಾರೂ ಇಲ್ಲ. ಸಿದ್ದರಾಮಯ್ಯ ಕುಚೋದ್ಯದ ಹೇಳಿಕೆ ಕೊಡುತ್ತಿದ್ದಾರೆ. ಪಾದಯಾತ್ರೆ ಅರ್ಧಕ್ಕೆ ಮೊಟಕಾಗಿದ್ದು ಅವರಿಗೆ ಭ್ರಮನಿರಸನವಾಗಿದೆ. ಅದು ಅವರಿಗೆ ಅಪಶಕುನ ಎಂದುಕೊಂಡಿದ್ದಾರೆ. ಹೀಗಾಗಿ ಅವರು ಒಳ್ಳೆಯ ಶಕುನಕ್ಕಾಗಿ ಕಾಯುತ್ತಿದ್ದಾರೆ ಎಂದರು.
ಚುನಾವಣೆ ಬಂದರೆ ಕಾಂಗ್ರೆಸ್ ನವರಿಗೆ ಎಲ್ಲ ನದಿಗಳ ಹೆಸರೂ ನೆನಪಾಗುತ್ತದೆ. ಚುನಾವಣೆ ಸಮಯದಲ್ಲಿ ಎಲ್ಲ ನದಿಗಳ ಮೇಲೂ ಅವರಿಗೆ ಪ್ರೀತಿ ಉಕ್ಕುತ್ತದೆ. ಚುನಾವಣೆ ಮುಗಿದ ಮೇಲೆ ಯಾವ ನದಿಯ ಹೆಸರೂ ಅವರಿಗೆ ನೆನಪಿರುವುದಿಲ್ಲ. ಯಾವ ನದಿ ಎಲ್ಲಿ ಹುಟ್ಟುತ್ತದೆ, ಹರಿಯುತ್ತದೆಂದೂ ಗೊತ್ತಿರುವುದಿಲ್ಲ ಎಂದು ವ್ಯಂಗ್ಯವಾಡಿದರು.
ಜಿಲ್ಲಾ ಉಸ್ತುವಾರಿ ನೀಡದ ವಿಚಾರದಲ್ಲಿ ಸಿಎಂ ನನ್ನ ಜೊತೆ ಚರ್ಚಿಸಿಯೇ ಈ ನಿರ್ಣಯ ಮಾಡಿದ್ದಾರೆ. ಉಸ್ತುವಾರಿ ಹಂಚಿಕೆಯಲ್ಲಿ ಗೊಂದಲ ಇಲ್ಲ. ನಾನು ಒಂದೂವರೆ ವರ್ಷದ ಹಿಂದೆಯೇ ಜಿಲ್ಲಾ ಉಸ್ತುವಾರಿ ಬೇಡ ಅಂದಿದ್ದೆ. ಯಡಿಯೂರಪ್ಪ ಅವಧಿಯಲ್ಲೂ ಉಸ್ತುವಾರಿ ಇರಲಿಲ್ಲ, ಈಗಲೂ ಇಲ್ಲ ಎಂದರು.
ಇದನ್ನೂ ಓದಿ:ಒಳ್ಳೆ ಸೇಬು ಇರುವಾಗ ಕೊಳೆತ ಮಾವಿನ ಹಣ್ಣು ಯಾರಿಗ್ರಿ ಬೇಕು : ಕಾಂಗ್ರೆಸ್ ಗೆ ಈಶ್ವರಪ್ಪ ಟಾಂಗ್
ರಾಜ್ಯದಲ್ಲಿ ಸಿಎಂ ಬದಲಾವಣೆ ಇಲ್ಲ. ಎಲ್ಲ ಸುಳ್ಳು ಸುದ್ದಿಗಳು. ಯಾರೋ ಜ್ಯೋತಿಷ್ಯಾಲಯ ತೆರೆದು ಈ ಸುದ್ದಿ ಹಬ್ಬಿಸ್ತಿದಾರೆ. ನಾನೂ ಕೂಡಾ ವರಿಷ್ಠರ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದೇನೆ. ಇದು ಗಾಳಿ ಸುದ್ದಿ, ಗಾಳಿಯಲ್ಲೇ ಹರಿದು ಹೋಗುವ ಸುದ್ದಿ. ಬದಲಾವಣೆ ಸಂಬಂಧ ನಮ್ಮ ಪಕ್ಷದಲ್ಲಿ ಚರ್ಚೆ ಆಗ್ತಿಲ್ಲ. ಕುಚೋದ್ಯದ ಹೇಳಿಕೆಗಳನ್ನು ಕೆಲವರು ಕೊಡುತ್ತಿದ್ದಾರೆ. ಈ ಅವಧಿ ಪೂರ್ತಿ ಬೊಮ್ಮಾಯಿ ಅವರೇ ಸಿಎಂ ಆಗಿರ್ತಾರೆ. ಮುಂದಿನ ಚುನಾವಣೆಯೂ ಸಿಎಂ ನೇತೃತ್ವದಲ್ಲೇ ನಡೆಸ್ತೇವೆ ಎಂದು ಅಶೋಕ್ ಹೇಳಿದರು.
ನಮ್ಮ ಯಾವ ಸಚಿವರೂ, ಶಾಸಕರೂ ಕಾಂಗ್ರೆಸ್ ಗೆ ಹೋಗುವುದಿಲ್ಲ. ಸೂರ್ಯ ಚಂದ್ರ ಇರುವವರೆಗೂ 17 ಜನರನ್ನು ಸೇರಿಸಿಕೊಳ್ಳಲ್ಲ ಅಂದಿದ್ದರು. ಸಿದ್ದರಾಮಯ್ಯ ಅವರಿಗೆ ಸೋಲುವ ಭಯ ಕಾಡುತ್ತಿದೆ ಎಂದು ವ್ಯಂಗ್ಯವಾಡಿದರು.